ದೀಪಾವಳಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ದೀಪಾವಳಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಅಧ್ಯಕ್ಷರ ಸಂದೇಶ

ವತ್ಸ ರಾಮನಾಥನ್
ಕಂಪು ಓದುಗರಿಗೆ ನನ್ನ ಹೃತ್ಪೂರ್ವಕ ದೀಪಾವಳಿ ಶುಭಾಶಯಗಳು!

ನಮ್ಮ ಮಲ್ಲಿಗೆ ಕನ್ನಡ ಸಂಘದ  ದೀಪಾವಳಿ ಕಾರ್ಯಕ್ರಮವನ್ನು ನೀವೆಲ್ಲರೂ ಉತ್ಸಾಹದಿಂದ ಎದಿರು ನೋಡುತಿದ್ದೀರೆಂದು ನಾನು ಭಾವಿಸಿದ್ದೇನೆ. ಪ್ರತಿ ವರ್ಷದ ಹಾಗೆ ಈ ವರ್ಷವೂ ಸಹ ಕನ್ನಡ ಸಂಘದ ಸದಸ್ಯರು ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿದ್ದಾರೆ; ನೀವೆಲ್ಲರೂ ಬಂದು, ಭಾಗವಹಿಸಿ ಆನಂದಿಸಿ.

ಸ್ನೇಹಿತರೆ, ನಮ್ಮ ಸಮಿತಿ ಕಾರ್ಯನಿರ್ವಹಣೆಯಲ್ಲಿ ತೊಡಗಿದ ವರ್ಷ, ನಾವು ನಮ್ಮ ಸಂಘದಿಂದ, ಪ್ರತಿ ವರ್ಷ ಒಂದು ಸೇವಾಕಾರ್ಯಕ್ಕಾಗಿ ಹಣ ಸಂಗ್ರಹಿಸಿ ಸಹಾಯ ಮಾಡುವುದಾಗಿ ಸಂಕಲ್ಪಿಸಿದ್ದೆವು. ಕಳೆದ ವರ್ಷ ನೀವೆಲ್ಲರೂ ಮುಂದೆ ಬಂದು ನಿರೀಕ್ಷೆಗೆ ಸಹಾಯ ಮಾಡಿದಿರಿ. ಈ ವರ್ಷ ಅಕ್ಕ ಸಂಸ್ಥೆಯ ಜೊತೆ ಸೇರಿ ಕೊಡಗಿನಲ್ಲಿ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿಹೋದ ಒಂದು ಶಾಲೆ ಪುನರ್ನಿರ್ಮಾಣಕ್ಕಾಗಿ ನಮ್ಮ ಸಂಘದಿಂದ ಕೈಲಾಗುವ ಸಹಾಯ ಮಾಡುವ ಉದ್ದೇಶ ಇದೆ. ಮಾಕಂದೂರು ಎಂಬ ಕುಗ್ರಾಮದಿಂದ ನಮ್ಮ ದೇಶ ರಕ್ಷಣೆಗಾಗಿ ಪಣತೊಟ್ಟು ನಿಂತ ಹಲವಾರು ಯೋಧರ ಮಕ್ಕಳು ಶಾಲೆ ಇಲ್ಲದೆ ಕಂಗಾಲಾಗಿದ್ದಾರೆ. ದೇಶವಾಸಿಗಳ ರಕ್ಷಣೆಗೆ ಆದ್ಯತೆ ಕೊಟ್ಟು ತಮ್ಮ ಕುಟುಂಬವನ್ನು ಬಿಟ್ಟು ಹೋಗಿರುವ
ಧೀರ ಕೊಡಗಿನ ವೀರರ ಸಹಾಯಕ್ಕೆ ಒಟ್ಟಿಗೆ ಬಂದು ಬಿಚ್ಚು ಮನಸ್ಸಿನಿಂದ ದಯವಿಟ್ಟು ಸಹಾಯ ಮಾಡಿ ಎಂದು ನಿಮ್ಮಲ್ಲಿ ನಾನು ವಿನಂತಿಸುತ್ತೇನೆ.

ನೀವೆಲ್ಲರೂ ಅಕ್ಕ ಸಮ್ಮೇಳನದಲ್ಲಿ ನೋಡಿ, ಆಲಿಸಿ, ಆನಂದಿಸಿದ ಅನೀಶ್ ವಿದ್ಯಾಶಂಕರ್ ಅವರ ಪಿಟೀಲು ಕಾರ್ಯಕ್ರಮವನ್ನು ಮತ್ತೆ ಮಲ್ಲಿಗೆ ಕನ್ನಡ ಸಂಘ ಡಲ್ಲಾಸ್ ಗೆ ತರುತ್ತಿದೆ. ಡಿಸೆಂಬರ್ ೧ನೇ ತಾರೀಖು ಶನಿವಾರ ಮತ್ತೆ ಅನೀಶ್ ಅವರು ನಿಮ್ಮೆಲ್ಲರನ್ನು ಮನರಂಜಿಸಲಿದ್ದಾರೆ. ಅದರ ವಿವರಗಳನ್ನು  ನಿಮಗೆ ಸದ್ಯದಲ್ಲೇ ಕಳುಹಿಸುತ್ತೇವೆ. ದಯವಿಟ್ಟು ಆ ಅವಕಾಶವನ್ನು ಮರೆತು ನಿರಾಶರಾಗಬೇಡಿ. ನಿಮ್ಮ ಕ್ಯಾಲೆಂಡರ್ ನಲ್ಲಿ ಗುರುತಿಸಿಕೊಳ್ಳಿ.

ಮಲ್ಲಿಗೆ ಕನ್ನಡ ಸಂಘಕ್ಕೆ ನಿಮ್ಮ ಬೆಂಬಲ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ.

ಇಂತಿ ನಿಮ್ಮ ವಿಶ್ವಾಸಿ
ವತ್ಸ ರಾಮನಾಥನ್

ಯಕ್ಷಪ್ರಶ್ನೆ

ವಾಸು ಪೋತದಾರ

ಒಮ್ಮೆ ಯೋಚಿಸಿದೆ
ಈ ಜಗದ ಆದಿ-ಅನಾದಿಗಳ ಕುರಿತು

ಆಗ ವಿಜ್ಞಾನಿಗಳು ಹೇಳಿದರು -

"ಈ ಭೂಮಿ ಸೂರ್ಯನ ಒಂದು ತಣ್ಣಗಾದ ತುಣುಕು,
ಇಲ್ಲಿನ ಜೀವಸಂಕುಲ ಅಮೀಬಾದ ವಂಶವೈವಿಧ್ಯ"
ವೈದಿಕರೆಂದರು - "ಅಲ್ಲಲ್ಲ, ಇದು ಮನುಕುಲ,
ಈ ಬ್ರಹ್ಮಾಂಡ ಭಗವಂತನ ಸೃಷ್ಟಿ"

ಮತ್ತೊಂದು ಸಂಶಯ ಮೊಳೆಯಿತು -
ಕೇಳಿದೆ - ಅದಿರಲಿ, ಈ ವಿಶ್ವದ ಆರಂಭ ಹೇಗಾಯಿತೆಂದು?

ಕನ್ನಡಕವನ್ನೇರಿಸುತ್ತ ವಿಜ್ಞಾನಿಗಳೆಂದರು -

"ಇನ್ನೂ ಯೋಚಿಸುತ್ತಿದ್ದೇವೆ"
ಜುಟ್ಟನ್ನು ನೀವುತ್ತ ಪಂಡಿತರು ಬೀಗಿದರು -
"ಇದು ಭಗವಂತನ ಮಹಿಮೆ,
ಮತ್ತೆ ಮುಂದೆ ಆತನ ಹುಟ್ಟಿನ ಕುರಿತು ಕೇಳೀರೋ ಜೋಕೇ?
ಆತ ಆದ್ಯಂತರಹಿತ"

ನಾಸ್ತಿಕರಾದ ವಿಜ್ಞಾನಿಗಳು ಗುಡುಗಿದರು -

"ಭಗವಂತ ಭಗವಂತ! ಅದು ನಿಮ್ಮ ಭ್ರಮೆ,
ನಿಮ್ಮನ್ನು ನಂಬಲು ವಿಜ್ಞಾನಕ್ಕೆ ಪ್ರಮಾಣ ಬೇಕು"

ಮಂದಸ್ಮಿತ ಪಂಡಿತರ ಉವಾಚ -
"ನಿಮ್ಮನ್ನು ನಂಬಲು ನಮಗೆ ಖಚಿತ ಉತ್ತರ ಬೇಕು"

ನಿಜವೆನಿಸಿತು, ಖಚಿತ ಉತ್ತರವಿಲ್ಲದ ವಿಜ್ಞಾನವನು ನಂಬುವದು ಹೇಗೆ?
ಆದರೆ ನೆನಪಾಯಿತು ಆಗ
ದಿನನಿತ್ಯದ ನಮ್ಮ ಬಾಳಿನಲಿ ವಿಜ್ಞಾನದ ಕೊಡುಗೆ
ಯೋಚಿಸಿದೆ ಯಾವುದು ಸರಿಯೆಂದು
ಹೊಳೆಯಲಿಲ್ಲ!

ಕೊನೆಗೆ -

ಸೃಷ್ಟಿಸಿದ ಭಗವಂತನಿಗೆ ಕೈಮುಗಿದು,
ವಿಜ್ಞಾನದ ಕೊಡುಗೆಗೆ ಕೃತಜ್ಞತೆ ಸಲ್ಲಿಸಿ,
ಸುಮ್ಮನಾದೆ.


ಕೇಫ಼

ಗುರುಪ್ರಸಾದ್ ವೆಂಕಟರಾಮು 

ಕನ್ನಡ ಸಾಹಿತ್ಯ ಲೋಕಕ್ಕೆ ಕೇಫ಼ ಎಂದೇ ಪರಿಚಿತರಾದ ಎ.ವಿಕೇಶವಮೂರ್ತಿಯವರದು ವಿಶಿಷ್ಟ ಕೊಡುಗೆ.

ಸುಧಾ ವಾರಪತ್ರಿಕೆ ಮತ್ತು ಪ್ರಜಾ‍ವಾಣಿ ವಿಶೇಷಾಂಕಗಳನ್ನು ಓದುತ್ತಿದ್ದವರಿಗೆ ಕೇಫ಼ರ ಹಾಸ್ಯ ಬರಹಗಳ ಪರಿಚಯವಿರುತ್ತದೆ. ಬೇರೆಲ್ಲ ಬರಹಗಾರರಿಗಿಂತ ಬಲು ಭಿನ್ನ ಇವರ ಶೈಲಿ.

ಎಂಭತ್ತರ ದಶಕದ ಮೈಸೂರು ನಗರವನ್ನು ಕಲ್ಪಿಸಿಕೊಳ್ಳಿ. ಆಧುನಿಕ ಬದುಕಿನ ಜಂಜಾಟವಿಲ್ಲದ, ಇನ್ನೂ ಕೊಂಚ ನಿಧಾನ ಗತಿಯ ಆರಾಮ ಜೀವನ ಶೈಲಿ. ಕಥಾನಾಯಕ ಪಾಂಡುವಿಗೆ ನಮ್ಮ ನಿಮ್ಮಂತೆ ವೃತ್ತಿ, ಕೆಲಸಗಳ ಗೋಜುಗಳಿದ್ದಂತೆ ಕಾಣುವುದಿಲ್ಲ. ಟೈಮಿಗೆ ಸರಿಯಾಗಿ ಕಾಫಿ ,ಬ್ರೇಕ್ಫಾಸ್ಟ್ , ಲಂಚ್ ಮಾಡುವುದು. ಸಂಜೆಯ ಹೊತ್ತಿಗೆ ಸ್ವಲ್ಪ ರೆಸ್ಟ್ ತೆಗೆದುಕೊಂಡು, ನೀಟಾಗಿ ಬಟ್ಟೆ ಧರಿಸಿ ಮೈ.ಸಂ (ಮೈಗಳ್ಳರ ಸಂಘ)ಕ್ಕೆ ಭೇಟಿ ಕೊಟ್ಟು ಗೆಳೆಯರೊಂದಿಗೆ ಕುಳಿತು ಗುಂಡೇರಿಸುವುದು.

ಪಾಂಡುವಿನ ಅಡುಗೆ ಭಟ್ಟ ಕಮ್ ಆಪ್ತ ಸಹಾಯಕ ಕಮ್ ಆಪ್ತ ಭಾಂಧವ ಶೌರಿ. ಪ್ರಚಂಡ ಬುದ್ಧಿವಂತಿಕೆಯ ಶೌರಿ ಎಂಥದೇ ಸಮಸ್ಯೆಯಿರಲಿ ಪರಿಹರಿಸಬಲ್ಲ ಚಾಣಾಕ್ಷ.

ಮೈಗಳ್ಳರ ಸಂಘದಲ್ಲಿ ಪಾಂಡುವಿನ ಗೆಳೆಯರ ಬಳಗವೇ ಇರುವುದು. ಸಂಘದ ಅಧ್ಯಕ್ಷ ಟಿಪ್ಸೀ. ಪೀಟರ್, ಬಷೀರ್, ಭಾನ್ ಸಿಂಗ್, ಬಾಬು, ಜಗ್ಗ, ರಾಘಣ್ಣಿ, ಫಸ್ಟ್  ಬೌಲರ್ ಶಿಂಗ್ರಯ್ಯಂಗಾರಿ - ಎಲ್ಲರದೂ ಜೀವನದಲ್ಲಿ ಒಂದೇ ಪಾಲಿಸಿ. ಸಂಘದ ಕಡೆಯಿಂದ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿ, ಕೈಲಾದಷ್ಟು ಗುಂಡೇರಿಸುವುದು.

ಸಂಘದಲ್ಲಿ ವಿವಿಧ ಅಭಿರುಚಿಯ ಗ್ರೂಪ್‍ಗಳು ಇರುವವು :)
ಇಟ್ಟಿಗೆ ಗೂಡು ಡೂನ್ಸ್ ಗ್ರೂಪ್ (ಐ.ಜಿ.ಡಿ)
ಅಮೃತಾ ಸಿಂಗ್ ಅಭಿಮಾನಿ ಗ್ರೂಪ್ (ಎ.ಎ.ಜಿ)
ಮೆಟ್ರಿಕ್ ರಿಪೀಟರ್ಸ್ ಗ್ರೂಪ್ (ಎಂ.ಆರ್.ಜಿ)
ರೇಖಾ ಪೈಥ್ಯಂ ಗ್ರೂಪ್ (ಆರ್.ಪಿ.ಜಿ)

ಪಾಂಡು, ಶೌರಿ, ಮೈಗಳ್ಳರ ಸಂಘದ ಸದಸ್ಯರುಗಳ ಜೊತೆಗೆ ಇನೂ ಹಲವು ವಿಶೇಷ ಪಾತ್ರಗಳೂ ಇರುವವು - ಘಂಟಾ ಘೋಷ ಪತ್ರಿಕೆಯ ಎಡಿಟರ್ ಉಜ್ಜನಪ್ಪ, ಬುಲ್ ಬುಲ್ ತರಂಗ್ ಗುರು ತಿಪ್ಪಣ್ಣ, ಶೌರಿಯ ಭಾವ ಅಖಿಲಾಂಡಯ್ಯ, ಡೋಂಟ್  ಫೀಕರ್  ಬಸ್ಸಿನ ಡ್ರೈವರ್ ಖಾದರ್, ಹುಚ್ಚರ ಡಾಕ್ಟರ್ ಭುಜಂಗರಾವ್. ಇವರೆಲ್ಲಾ ಸೇರಿಕೊಂಡು ನಡೆಯುವ ತಿಳಿಹಾಸ್ಯ ಪ್ರಸಂಗಗಳೇ ಕೇಫ಼ರ ಬರಹಗಳ ತಿರುಳು.

ಓದುತ್ತಾ ಹೋದಂತೆ, ಬೇರೆಯದೇ ಒಂದು ಲೋಕ ನಮ್ಮ ಮುಂದೆ ಸೃಷ್ಟಿಯಾಗುವುದು ಅವರ ಲೇಖನಿಯ ತಾಕತ್ತು. 

ಎಸ್.ದಿವಾಕರ  ಅವರು "ಬೆಸ್ಟ್ ಆಫ್  ಕೇಫ಼" ಎಂಬ ಹೆಸರಿನಲ್ಲಿ ಕೇಫ಼ರ ಬರಹಗಳನ್ನು ಸಂಗ್ರಹಿಸಿದ್ದಾರೆ (ಪ್ರಕಾಶಕರು: ಅಂಕಿತ ಪುಸ್ತಕ ). ತಪ್ಪದೇ ಓದಿ.


ಹಿಜಾಬ್ -ಪುಸ್ತಕ ಪರಿಚಯ

ಗುರುಪ್ರಸಾದ್ ವೆಂಕಟರಾಮು 

ಡಾ. ಗುರುಪ್ರಸಾದ್ ಕಾಗಿನೆಲೆಯವರು ಬರೆದಿರುವ ಹಿಜಾಬ್ ಕಾದಂಬರಿಯನ್ನು ಓದಿ ನನ್ನ ಅನಿಸಿಕೆಯನ್ನು ಹಂಚಿಕೊಳ್ಳಬಯಸುತ್ತೇನೆ.

ಕನ್ನಡ ಸಾಹಿತ್ಯದಲ್ಲಿ ಇಂದಿನ ಕಾಲಮಾನಕ್ಕೆ ಪ್ರಸ್ತುತ ಎನಿಸುವ ಬರಹಗಳ ಬಾಹುಳ್ಯ ಕಡಿಮೆ ಎಂದರೂ ತಪ್ಪಿರಲಿಕ್ಕಿಲ್ಲ.  ಈ ಕೊರತೆಯನ್ನು ನೀಗಿಸುವ ದಿಕ್ಕಿನಲ್ಲಿ ಹಿಜಾಬ್ ಒಂದು ಯಶಸ್ವೀ ಕೃತಿ. ಹೊರದೇಶಗಳಲ್ಲಿ, ಅದರಲ್ಲೂ ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರ ಮನಮುಟ್ಟುವ ವಿಷಯಗಳು ಈ ಕಾದಂಬರಿಯಲ್ಲಿವೆ.

ವಲಸಿಗರ ಸಮಸ್ಯೆಗಳು, ವೀಸಾ, ಗ್ರೀನ್ ಕಾರ್ಡುಗಳ ತಲೆ ಬಿಸಿ, ಭಾವನಾತ್ಮಕ ದ್ವಂದ್ವಗಳು, ಧಾರ್ಮಿಕ ನಂಬಿಕೆಗಳು, ಸಂಘರ್ಷಗಳು ಹೀಗೆ ಗಂಭೀರ ವಿಷಯಗಳ ಸುತ್ತ ಸುತ್ತುವ ಹಿಜಾಬ್ ಕೊನೆಗೆ ಆತಂಕವಾದ, ಮತೀಯವಾದ, ಜನಾಂಗೀಯ ನಿಂದನೆ, ಶ್ವೇತವರ್ಣೀಯರಲ್ಲಿ ಹೆಚ್ಚುತ್ತಿರುವ ಅಸಮಧಾನಗಳವರೆಗೆ ಮುಟ್ಟುತ್ತದೆ. ಯಾವುದೇ ನಾಟಕೀಯತೆ ಅಥವಾ ಅಬ್ಬರಗಳಿಲ್ಲದೆ ಬಹಳ ಸಹಜವಾಗಿ ಕಥೆ ಹೇಳಿದ್ದಾರೆ ಲೇಖಕರು. ಈ ಸಹಜ ಶೈಲಿಯೇ ನನ್ನನ್ನು ಹಿಡಿದಿಟ್ಟುಕೊಂಡಿದ್ದು ಹಾಗೂ ಚಿಂತನೆಗೆ ಹಚ್ಚಿದ್ದು.

ಸತ್ಯ ಸಂಗತಿಗಳೂ, ಕಾಲ್ಪನಿಕ ವಿಷಯಗಳೂ ಬಹಳ ನಾಜೂಕಾಗಿ ಹೆಣೆಯಲ್ಪಟ್ಟಿವೆ. ಯಾವುದು ಸತ್ಯ, ಯಾವುದು ಕಲ್ಪನೆ ಎಂದು ಯೋಚಿಸುತ್ತಲೇ ರೋಮಾಂಚನವಾಯಿತು ನನಗೆ.  (ಅಮೋಕಾ ಎಂಬ ಊರು ನಿಜಕ್ಕೂ ಇದೆಯಾ?, ಮಿನ್ನೆಸೋಟಾದಲ್ಲಿರುವ ಸೊಮಾಲಿಗಳ ಕಥೆ ಏನು ? ಎಂದು ಗೂಗಲ್ ನಲ್ಲಿ ಹುಡುಕಿದ್ದು ಸುಳ್ಳಲ್ಲ !)

ಕೊನೆಯ ಅಧ್ಯಾಯವಂತೂ ಬಹಳ ಪರಿಣಾಮಕಾರಿಯಾಗಿದೆ. ಕಾದಂಬರಿಯುದ್ದಕ್ಕೂ ಒಳಗೇ ಹರಿಯುವ ತಳಮಳಗಳಿಗೆ ಉತ್ತಮ ರೂಪಕವನ್ನು ಕಟ್ಟಿಕೊಡಲಾಗಿದೆ.
ಅಮೆರಿಕಾ ಎಂಬ ಮಾಯಾವಿ ದೇಶವನ್ನು ಅರಿತುಕೊಂಡವರಾರು? ಅವರವರು ದಕ್ಕಿಸಿಕೊಂಡಷ್ಟೇ ಅವರ ಪಾಲು ಎನ್ನುವ ಭಾವ ನನಗೆ ಆಪ್ತವಾಯಿತು. 

ಬಹುಪಾಲು ವೃತ್ತಿ ಜೀವನದ ಮೂಲಕವೇ ಅಮೆರಿಕವನ್ನು ಅನುಭವಿಸುವ ನನಗೆ, ನನ್ನಂಥವರಿಗೆ ಒಂದು ಹೊಸ ದೃಷ್ಟಿಕೋನವನ್ನು ಹೊಳೆಸುತ್ತದೆ ಈ ಕಾದಂಬರಿ. ಅಮೆರಿಕನ್ನಡಿಗರೆಲ್ಲರೂ ಕೊಂಡು ಓದಲೇಬೇಕಾದ ಕೃತಿ.   


ನಮ್ಮ ಸಂಸ್ಕೃತಿ

ಹರಿಚರಣ್
ಈ ಹೊತ್ತಿಗೆ ಬಹು ಚರ್ಚಿತವಾದ ಅಥವಾ ವಿವಾದಾತ್ಮಕ ಪದ ಎನ್ನಬೇಕಾದರೆ ಅದು ಸಂಸ್ಕೃತಿ. ಇದರ ಇಂಗ್ಲಿಷ್  ಮೂಲ ಪದವಾದ "ಕಲ್ಚರ್" ಎಂಬುದು ಇಂದಿನ ಲೋಕ ವ್ಯವಹಾರದಲ್ಲಿ ಅತಿಶಯವಾದ ಬಳಿಕೆ ಹೊಂದಿದೆ. ಈ ಪದಕ್ಕೆ ನಿರ್ದಿಷ್ಟವಾದ ಅರ್ಥ ಇಲ್ಲದಿದ್ದರೂ ಬಹುತೇಕವಾಗಿ ಒಪ್ಪಿಕೊಂಡಿರುವ ಅರ್ಥ  ಎಂದರೆ "ಗೌರವಿಸು", "ನಿಷ್ಠೆಮಾಡು " ,"ಲಕ್ಷ್ಯದಲ್ಲಿರಿಸಿಕೊ" ಎಂಬ ರೀತಿಯಲ್ಲಿ. ನಮ್ಮ ಕಾರ್ಪೊರೇಟ್ ಜಗತ್ತಿನಲ್ಲಿ " ಯಾವ ನಡವಳಿಕೆಯನ್ನು ಪ್ರಶಂಸಿಸಿ ಪ್ರೋತ್ಸಾಹಿಸುತ್ತೀವೋ ಅಥವಾ ಯಾವುದನ್ನು ಶಿಕ್ಷಿಸಿ  ಧಿಕ್ಕರಿಸುತ್ತೀವೋ" ಅದು ನಮ್ಮ ಕಲ್ಚರ್ (ಸಂಸ್ಕೃತಿ) ಆಗಿ ಉಳಿಯುವುದೆಂದು ದೃಢವಾಗಿ ನಂಬಿರುವ ಸಿದ್ದಾಂತ. ಸಾವಿರಾರು ಮೈಲಿ ನಮ್ಮ ಮಾತೃಭೂಮಿಯನ್ನು ಬಿಟ್ಟು ಇಲ್ಲಿಗೆ ವಲಸೆ ಬಂದು ತಾತ್ಕಾಲಿಕವಾಗಿಯೋ ಇಲ್ಲವೇ ಶಾಶ್ವತ ನೆಲೆ ಮಾಡಿಕೊಂಡಿರುವ ನಾವು ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವ ಬಗೆ ಹೇಗೆ ಅಥವಾ ಅದರ ಅವಶ್ಯಕತೆಯಾದರೂ ಏನು ? 

ನಮ್ಮಲ್ಲಿ  ಎಷ್ಟೋ ಮಂದಿ ನಮ್ಮ ಆಚಾರ ವಿಚಾರವನ್ನೂ, ಭಾಷಾ ಪ್ರೇಮವನ್ನೋ, ಸಂಗೀತ ಮೊದಲಾದ ಲಲಿತ ಕಲಾಭಿರುಚಿಯನ್ನೋ ಸಂಸ್ಕೃತಿಯೆಂದು ನಂಬಿರುತ್ತಾರೆ. ಆದರೆ ಅದು ಯಾವುದು ಸಂಸ್ಕೃತಿಯಾಗಿ ಪೂರ್ಣವಾಗಿ ಪರಿಗಣನೆಗೆ  ಬರದು. ಸಂಸ್ಕಾರದಿಂದ ಸಂಸ್ಕೃತಿ. "ಸಂಸ್ಕಾರ" ಎಂದರೆ ಶುದ್ಧಿಗೊಳಿಸುವುದು , ಉತ್ತಮ ಪಡಿಸುವುದು ಎಂದು ಅರ್ಥ. ಈ ಶುದ್ಧಿಯು ನಮ್ಮ ಅಂತರಂಗದ ಶುಚಿತ್ವ. ಎಲ್ಲ ಜೀವ ರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಇದರ ಪರಿಕಲ್ಪನೆ ಇರತಕ್ಕದು ಹಾಗು ಅದನ್ನು ಸಾಧಿಸಿಕೊಳ್ಳುವ ಹಂಬಲ ಇರುವುದು. ಆ ಶುದ್ಧಿಯು ಸಮಾಜದೊಂದಿಗೆ ನಮ್ಮ ನಡವಳಿಕೆಯನ್ನು ಹಿತವಾಗಿಸಿ ಒಂದು ಔಚಿತ್ಯವನ್ನು ಏರ್ಪಡಿಸುತ್ತದೆ, ಅದೇ ಸಂಸ್ಕೃತಿ. 

ಸಂಸ್ಕೃತಿಯು ಜಡವಾಗಿ ಉಳಿಯದೆ ಕಾಲ ದೇಶಗಳೊಂದಿಗೆ ಮಾರ್ಪಾಡುಗೊಳ್ಳುತ್ತದೆ. ಹೊರನಾಡಿನಲ್ಲಿ  ಸಂಸ್ಕೃತಿಯನ್ನು ನಿರ್ಧಯಿಸಿಕೊಳ್ಳುವ ಕೆಲಸ ಕಷ್ಟವೆಂದು ತೋರುವುದು ಸಹಜ. ನನ್ನಂಥವರು ತಮ್ಮ ಬಹುತೇಕ ಜೀವನವನ್ನು ಒಂದು ದೇಶದಲ್ಲಿ ಕಳೆದು, ಅದರಲ್ಲೂ ಮಾನಸಿಕ ವಿಕಾಸವು ಅಲ್ಲಿಯ  ಪರಿಸರದಿಂದ ರೂಪಗೊಂಡು ಮತ್ತೊಂದು ದೇಶಕ್ಕೆ ಕಾಲಿಟ್ಟಾಗ ಒಂದು ರೀತಿಯ ಭಯವನ್ನು ಉಂಟುಮಾಡುತ್ತದೆ. ಆ ಭಯದ ಕಾರಣ ಹೊಸ ದೇಶದ ಸಂಸ್ಕೃತಿಯು ನಮ್ಮ ಮೇಲೆ ಮಾಡುವ ಪ್ರಭಾವಕಿಂತಲೂ ನಮ್ಮ ಮಕ್ಕಳ ಮೇಲೆ ಮಾಡುವ ಪರಿಣಾಮದಿಂದ. ಈ ಭಯ ಸರಿಯೇ ತಪ್ಪೇ ಎಂದು ವಾದ ಮಾಡದೇ ನಾನು ನನ್ನ ಮಟ್ಟಿಗೆ ಕಂಡು ಕೊಂಡಿರುವ ಪರಿಹಾರ ಹಾಗು ನನ್ನ ವಿಚಾರವನ್ನು ಇಲ್ಲಿ ಮಂಡಿಸುತ್ತೇನೆ. 

ಮೊದಲಿಗೆ ಮಹಾತ್ಮಾ ಗಾಂಧಿಯವರ ಈ ಮಾತು ಸ್ಮರಣೆಗೆ ಬರುತ್ತದೆ " I do not want my house to be walled in on all sides, nor my windows to be shut. I want the cultures of all lands to blow about my house as freely as possible; but I refuse to be blown off my feet by any of them. I refuse to live in other people's houses as an interloper, a beggar or a slave."

ನಮ್ಮ ಬುದ್ಧಿಶಕ್ತಿಯು  ಮಕ್ಕಳಿಗಿಂತ ಕೊಂಚ ದೃಢವಾಗಿರುವುದರಿಂದ ( ಆ ನಂಬಿಕೆಯಿಂದ :)) ನಾವು ಹೊಸ ಆಚಾರ ವಿಚಾರವನ್ನು ನಮ್ಮ ಅಭಿರುಚಿ, ಧರ್ಮ ಚಿಂತನೆಯ ಪರಿಜ್ಞಾನದ ಜಾಲರಿಯಿಂದ ಸೋಸಿ ಅಳವಡಿಸಿ ಸಮತೋಲನವನ್ನು ಹೊಂದುವಲ್ಲಿ  ಯಶಸ್ವಿಗೊಳುತ್ತೇವೆ. ಆದರೆ ಮಕ್ಕಳ ವಿಚಾರದಲ್ಲಿ ಅವರ ಮಾನಸಿಕ ವಿಕಸನವು ಹಾಗು ಜನ ಸಂಪರ್ಕವು ಬೇರೊಂದು ಸಂಸ್ಕೃತಿಯನ್ನು ಅವಲಂಬಿಸಿರುವ ಜನರೊಂದಿಗೆ ನಡೆಯುವದರಿಂದ ನಮ್ಮ ತಳಮಳ ಹೆಚ್ಚುತ್ತದೆ. ಅವರು ನಮ್ಮ ಸಂಸ್ಕೃತಿಯ ಅಧಿಕೇಂದ್ರದಿಂದ ದೂರವಿರುವಂತೆ ಭಾಸವಾಗುತ್ತದೆ. ಅದಕ್ಕೆ ಕಾರಣ ಪಾಶ್ಚಿಮಾತ್ಯ ಹಾಗು ಈಶಾನ್ಯ ದೇಶಗಳು ಬೆಳದು ಬಂದ ಹಾದಿ. ಪಾಶ್ಚಿಮಾತ್ಯ ದೇಶಗಳು ವ್ಯಕ್ತಿ ಸ್ವಾತಂತ್ರ್ಯ್ರ, ಅವನ ಸುಖಾನುಭವಗಳಿಗೆ ಮನ್ನಣೆ ನೀಡಿದರೆ, ಈಶಾನ್ಯ ದೇಶಗಳು ಸಮಾಜದ ಹಿತೈಶೆ , ಒಟ್ಟಾರೆ ಒಂದು ಕುಟುಂಬ, ಗ್ರಾಮ ಹಾಗು ದೇಶದ ಬಗ್ಗೆ ಒತ್ತು ಕೊಡುತ್ತದೆ. ಇದರ ಜೊತೆಗೆ ಭಾರತ ದೇಶದಂಥ  ಪುರಾತನ ನಾಗರಿಕತೆ, ಕಾಲಚಕ್ರ ಉರುಳಿದಂತೆ ಅದರ ಮೇಲೆ ಆದ ವಿವಿಧ ಮತ, ಪ್ರಾಂತ್ಯ ಹಾಗು ಜನಾಂಗದ ಆಕ್ರಮಣವನ್ನು ಸಹಿಷ್ಣಿಸಿ

ಬೆಳಸಿಕೊಂಡಿರುವ ಸಂಸ್ಕೃತಿಯನ್ನು ಇನ್ನು ಯೌವನದಲ್ಲಿರುವ ನಾಗರಿಕತೆಗೆ ಹೋಲಿಸುವದು ಅಷ್ಟು ಸರಿಯಲ್ಲವೆಂದು ತೋರುತ್ತದೆ. ಉದಾಹರಣೆಗೆ ಮನೋವಿಜ್ಞಾನದಲ್ಲಿ ಗೋಚರವಾಗುತ್ತಿರುವ ಎಷ್ಟೋ ಸಿದ್ದಾಂತಗಳನ್ನು  ಉಪನಿಷತ್ ನಲ್ಲಿ  ಕಾಣಬಹುದು. (Maslow's hierarchy of needs which came in 20th century very much echoes the thoughts of Taittiriya upanishad or Empathy which is gaining so much momentum has been there as a concept of anubuthi in India for a long time). 

ಮಕ್ಕಳಿಗೆ  ಉತ್ತಮವಾದ ಸಂಸ್ಕೃತಿಯನ್ನು ಕೊಡುವುದೆಂದರೆ ಪಾಶ್ಚಿಮಾತ್ಯದಲ್ಲಿ ಒತ್ತು ಕೊಡುವ ಪುರುಷ ಪ್ರಯತ್ನ, ವೈಜ್ಞಾನಿಕ ಚಿಂತನೆ ಹಾಗು ನಮ್ಮ ಅಂತರಂಗದ ಬೆಳವಣಿಗೆಗೆ ಸೂಕ್ತವಾಗಿ ಒದಗಿಬರುವ ನಮ್ಮ ಆಧ್ಯಾತ್ಮಿಕ ಚಿಂತನೆಯಿಂದ ಅಭಿಮಂತ್ರಿಸುವುದು. 

ಕಡೆಯದಾಗಿ ನಾನು ಹೇಳಬಯಸುವುದೇನೆಂದರೆ ನಮ್ಮ ಸಂಸ್ಕೃತಿಯೊಂದಿಗೆ ಗುರುತಿಸಿಕೊಳ್ಳಲು, ಬಾಹ್ಯ ಪ್ರದರ್ಶನಕ್ಕಿಂತಲೂ ಹೆಚ್ಚಾಗಿ ನಮ್ಮ ಅಂತಃಕರಣದಲ್ಲಿ ನಿಲ್ಲಿಸಿ ಬೆಳಸುವುದು ಅತ್ಯವಶ್ಯ.


ನಿರೀಕ್ಷೆ

ಪೂರ್ಣಿಮಾ ಸುಬ್ರಹ್ಮಣ್ಯ 
ಅನಾದಿ ಕಾಲದಿಂದಲೂ 
ಅವನಿ,
ಇಬ್ಬನಿಯ ಮಣಿಗಳನ್ನಾರಿಸುತ್ತಲೇ ಇದ್ದಾಳೆ,
ಹಾರವಾಗಲೇ ಇಲ್ಲ !

ಅನಾದಿ ಕಾಲದಿಂದಲೂ 
ರಜನಿ,
ಚುಕ್ಕೆಗಳನ್ನಿಡುತ್ತಲೇ  ಇದ್ದಾಳೆ,
ಚಿತ್ರವಾಗಲೇ  ಇಲ್ಲ !

ಸಣ್ಣ ಪುಟ್ಟ ನಿರೀಕ್ಷೆಗಳು 
ಫಲಿಸದೆ , ಕೊರಗುವ 
ನನ್ನ ಮರುಳಿಗೆ 
ನಗೆ ಬಂತು !

ಮುಂಜಾನೆ ಅವನಿಗೆ 
ಇಬ್ಬನಿಯನೆತ್ತಿಕೊಟ್ಟೆ!
ರಾತ್ರಿ ರಜನಿಗೆ 
ಚುಕ್ಕೆಗಳನೆಣಿಸಿಕೊಟ್ಟೆ


ಲಾಲ್ ಬಾಗ್ ನ ಗರ್ಭ ಗುಡಿ

ನವ್ಯ ಎಸ್. 


ರಾಷ್ಟ್ರಕವಿ ಕುವೆಂಪು ಅವರು ಲಾಲ್ ಬಾಗ್ ನ್ನು "ದೇವಾಲಯವೀ ಹೂವಿನ ತೋಟಂ" ಎಂದು ಕರೆದಿದ್ದಾರೆ . ಈ ದೇವಾಲಯದ ಗರ್ಭ ಗುಡಿಯೇ ಗಾಜಿನ ಮನೆ ಅಥವಾ ಗ್ಲಾಸ್ ಹೌಸ್ . ಹೇಗೆ ವಾರ್ಷಿಕ ಉತ್ಸವಗಳಲ್ಲಿ  ಗರ್ಭಗುಡಿಯನ್ನು ವಿಶೇಷವಾಗಿ ಅಲಂಕರಿಸುತ್ತಾರೋ ಹಾಗೆ ಇದೂ ಪುಷ್ಪೋತ್ಸವದಲ್ಲಿ ವರ್ಣರಂಜಿತವಾಗಿ ವಿಭಿನ್ನ ಶೋಭೆಯನ್ನೇ ಪಡೆದುಬಿಡುತ್ತದೆ . ಇನ್ನು ಈ ಬಾರಿಯ ಹೂವಿನ ದೋಣಿಯಂತೆ ಪ್ರತಿ ವರ್ಷವೂ ಬಹುತೇಕ ಗುಲಾಬಿ ಹೂಗಳಿಂದಲೇ ರೂಪಿಸಲ್ಪಡುವ ರಚನೆಗಳಂತೂ ಗುಡಿಯೊಳಗಿನ ಮೂರ್ತಿಯಂತೆ ಕಂಗೊಳಿಸುತ್ತದೆ .. 

ಈ ಗಾಜಿನ ಮನೆಯ ರಚನೆಯಾಗುವುದಕ್ಕೆ ಎರಡು ದಶಕಗಳ ಮುಂಚೆಯೇ , ಇದರ ಎದುರಿಗೆ ಇರುವ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ 1867ರ ಫೆಬ್ರುವರಿ 16 ರಂದು ಪ್ರಥಮ ಪುಷ್ಪ ಪ್ರದರ್ಶನವು ನಡೆಯಿತು . ಅದೇ ವರ್ಷ ಡಿಸೆಂಬರ 31 ರಂದು ಎರಡನೇ ಪ್ರದರ್ಶನವೂ ,1868ರ ಸೆಪ್ಟೆಂಬರ ,1869 ರ ಫೆಬ್ರುವರಿಯಲ್ಲಿ ಮೂರು ಮತ್ತು ನಾಲ್ಕನೇ ಪ್ರದರ್ಶನಗಳೂ ಆಯೋಜಿತಗೊಂಡವು . 1870ರ   ಪ್ರದರ್ಶನದಲ್ಲಿ ಮೈಸೂರು ಸಂಸ್ಥಾನದ್ದೇ ಆದ ದನಕರುಗಳು , ಕುರಿಗಳು , ಕುದುರೆಗಳು ದವಸ ಧಾನ್ಯಗಳೂ ಇದ್ದವು . ಮುಂದಿನ ವರ್ಷಗಳಲ್ಲಿ ಮಳೆಯಿಂದಾಗಿ ಟೆಂಟ್ ಗಳ ವ್ಯವಸ್ಥೆ ಮಾಡಲಾಯಿತು . ಇದರ ಶಾಶ್ವತ ವ್ಯವಸ್ಥೆಗಾಗಿ 1890 ರಲ್ಲಿ ಇಲ್ಲಿನ ಮುಖ್ಯಸ್ಥರಾಗಿದ್ದ ಜಾನ್ ಕೆಮರಾನ್ ರವರ ಆದೇಶದಂತೆ ಲಂಡನ್ ನ ಕ್ರಿಸ್ಟಲ್ ಪ್ಯಾಲೇಸ್ ಮಾದರಿಯಲ್ಲಿ ಇಂಗ್ಲೆಂಡಿನ ಮೆಕ್ ಫರ್ಲಾನ್ ಕಂಪನಿ, ಗ್ಲ್ಯಾಸ್ಕೋ , ಇವರು ಈ ಗಾಜಿನ ಮನೆಯನ್ನು ನಿರ್ಮಿಸಿದರು . ಇಂದಿಗೂ ಮುಖ್ಯ ಪ್ರವೇಶ ದ್ವಾರದ ಗೇಟುಗಳು ಮತ್ತು ಇಲ್ಲಿನ ಕಂಬಗಳ ಮೇಲೇ ಈ ಹೆಸರಿರುವುದನ್ನು ಕಾಣಬಹುದು . ಮೊದಲು ಇದನ್ನು ಆಲ್ಬರ್ಟ್ ವಿಕ್ಟರ ಕನ್ಸರ್ವೇಟೊರಿ ಎಂದು ಕರೆದರೂ ನಂತರ ಗ್ಲಾಸ್ ಹೌಸ್ ಎಂದೇ ಪ್ರಸಿದ್ಧವಾಯಿತು . 1935 ರಲ್ಲಿ ರಾವ್ ಬಹಾದ್ದೂರ್ ಹೆಚ್. ಸಿ. ಜವರಾಯ ಅವರು ಮುಖ್ಯಸ್ಥರಾಗಿದ್ದಾಗ ಇದರ ಪೂರ್ವಕ್ಕೆ ಇನ್ನೊಂದು ಭಾಗವನ್ನು ಸೇರಿಸಿದರು . ಮೂಲ ರಚನೆಗೆ ಎಲ್ಲ ರೀತಿಯಲ್ಲೂ ಸರಿಹೊಂದುತ್ತಿದ್ದ ಇದರ ನಿರ್ಮಾಣದಲ್ಲಿ ಸಂಪೂರ್ಣವಾಗಿ ಭದ್ರಾವತಿಯ ಮೈಸೂರು ಐರನ್ ವರ್ಕ್ಸ್ ಕಾರ್ಖಾನೆಯಲ್ಲಿ ತಯಾರಾದ ವಸ್ತುಗಳನ್ನೇ ಬಳಸಲಾಯಿತು . 

1891 ರಲ್ಲಿ ಗಾಜಿನ ಮನೆಯಲ್ಲೇ ಪ್ರಥಮ ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಯಿತು . ಆದರೆ ಮುಂದೆ ಬರಗಾಲ ಮತ್ತು ಪ್ಲೇಗ್ ನಿಂದಾಗಿ  ಕ್ರಮವಾಗಿ ಪ್ರದರ್ಶನಗಳು ನಡೆಯಲಿಲ್ಲ .1906 ರಲ್ಲಿ ವೇಲ್ಸ್ ನ ರಾಜಕುಮಾರ ಬೆಂಗಳೂರಿಗೆ ಬಂದಾಗ ಅವರ ಗೌರವಾರ್ಥ ನಡೆದು ಮತ್ತೆ ಈ ಪ್ರದರ್ಶನಗಳು ವ್ಯವಸ್ಥಿತವಾದವು .1912 ರಲ್ಲಿ ಜಿ.ಹೆಚ್.  ಕೃ೦ಬಿಗಲ್ ರವರು ಮುಖ್ಯಸ್ತರಾಗಿದ್ದಾಗ ನಡೆದ ಪ್ರದರ್ಶನದಲ್ಲಿ ಬಾಲಕಿಯರಿಗಾಗಿ ಹೂಗಳಿಂದ ಅಲಂಕೃತವಾದ ಬೈಸಿಕಲ್ ಪರೇಡನ್ನು ಏರ್ಪಡಿಸಿದ್ದರು . ಅವರ 12 ವರ್ಷದ ಪುತ್ರಿ ಹಿಲ್ಡಾ ಕೂಡ ಇದರಲ್ಲಿ ಪಾಲ್ಗೊಂಡಿದ್ದಳು .. 

ಈ ಗಾಜಿನ ಮನೆಗೆ ನೂರು ವರ್ಷಗಳು ತುಂಬಿದಾಗ ಅದರ ನೆನಪಾಗಿ ಮೈಸೂರು ಹಾರ್ಟಿಕಲ್ಟುರಲ್ ಸೊಸೈಟಿಯು ಗ್ಲಾಸ್ ಹೌಸ್ - ದಿ ಜ್ಯುವೆಲ್ ಆ ಲಾಲ್ ಬಾಗ್ ಎಂಬ ಒಂದು ಗ್ರಂಥವನ್ನು ಪ್ರಕಟಿಸಿತು . ಇದು ಸುಂದರ ಮತ್ತು ಪವಿತ್ರ ಗರ್ಭ ಗುಡಿಗೆ ಸಲ್ಲಿಸಿದ ಸೂಕ್ತ ಗೌರವವಷ್ಟೇ ಅಲ್ಲದೆ ಉಪಯುಕ್ತ ಚಿತ್ರ ಮತ್ತು ಲೇಖನಗಳನ್ನು ಉಳ್ಳ ದಾಖಲೆಯೂ ಹೌದು . 



ಕೇಳು ಒಲವೇ

ಶಶಿಕಿರಣ್ ಬಿ ವಿ 

ಸರ ಸರನೆ  ಬಂದೆ, ಓರೆ ನೋಟದಿ ನಗೆಯ ಬೀರಿ 
ಕಣ್ಣಲ್ಲೇ ಕಾವಲುಗಾರನಾದೆ, ಪ್ರತಿ ಕ್ಷಣವೂ ಅದೇ ನಗುವ ಕೋರಿ . 

ಕಣ್ಣಿಗೆ ನಗುವ ಎರಚಿ , ಹೃದಯದಿ ನುಸಿಳಬೇಡ 
ಒಮ್ಮೆ ಒಳಬಂದರೆ ನಾನಲ್ಲ ಕ್ಷಮಿಸಿ ಹೊರಬಿಡುವ ಉದಾರಿ . 

ಅಷ್ಟಕ್ಕೂ ಗುಮ್ಮನೆ ಒಳ ಸಂಚುಯೇಕೆ , ಗುಟ್ಟೊಂದ ಹೇಳುವೆ ಕೇಳು!
ನಿನ್ನ ಹೊರತು ಇಲ್ಲ್ಯಾರಿಗೂ ಪ್ರವೇಶವಿಲ್ಲ , ನಿನಗಾಗಿಯೇ ಈ ರಹದಾರಿ 

ಮನವೀಗ ಬೆಳದಿಂಗಳಿನ ಅಂಗಳವಾಗಿದೆ
ಪ್ರೀತಿಯ ಕೈತುತ್ತು ತಿನಿಸು  ಬಾ ಗೆಳತಿ !

ನಿನ್ನ ಕನಸುಗಳ ಕಥೆ ಹೇಳುತ್ತಾ 

ಭಾವನೆಗಳ ಬೆಸೆಯುತ್ತ ಇಬ್ಬರೇ ಕೂರೋಣ 

ಹರೆಯದ ಆಸೆಗಳ ಹಂಗಿಲ್ಲದೆ ಹಾಸು ,

ಜೊತೆಯಾಗಿ ಸವಿಯೋಣ ಬೆಳಗಿನ ಆಯಾಸ ಕಳೆಯೋಣ . 

ಹೊತ್ತು ಹೋಗುವವರೆಗೂ , ಕಣ್ಣಿಗೆ ನಿದ್ದೆ ಬರುವವರೆಗೂ ,

ಎಲ್ಲ ನಕ್ಷತ್ರಗಳ ಎಣಿಸುವವರೆಗು ನಿನ್ನೊಡನೆ ನಾನಿರುವೆ !


Lucia - First kannada movie

ಯಾಮಿನಿ ಜೋಯಿಸ್ 

The first Kannada movie I watched was “Lucia” by Pawan Kumar.

This movie is about a young man by name Nikki. Nikki is an insomniac who just can’t fall asleep at night. One night, he meets a drug dealer and starts taking a drug called “Lucia” which was supposed to help him fall asleep. After taking the drug, Nikki starts seeing lucid dreams and starts dreaming of himself as a famous movie star, Nikhil. 

As the story progresses, the audience will begin to be confused between two characters. Who is living the reality? and who is in the dream? It is left to the audience’s ingenuity. It is for them to figure out what is reality and what is dream.

This movie combined many elements together; comedy, mystery, romance and some thriller. I enjoyed this movie very much because not only was it very funny, but the plot kept me guessing throughout. Finally, message from the movie is that “Everyone wants to be someone else”. Nikki wishes to be the famous movie star whereas the movie star wants to live a simple life like Nikki. 

To be honest, I was quite confused in the middle. But by the end, when I understood it completely,  I had to say, “Ohhhhhh!”.  Please do watch this movie when you have chance, it is an unique experience.

ಅಧ್ಯಕ್ಷರ ಸಂದೇಶ

ವಿದ್ಯಾ ದತ್ತ
ಆತ್ಮೀಯ ಮಲ್ಲಿಗೆ ಕನ್ನಡ ಸಂಘದ ಸದಸ್ಯರಿಗೆಲ್ಲಾ  ನಮಸ್ಕಾರಗಳು,

ತಮಗೆಲ್ಲರಿಗೂ ೬೧ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಂಘದ ಸದಸ್ಯರೆಲ್ಲಾ ಸೇರಿ, ನಮ್ಮ ಸಂಘದ ಈ ವರುಷದ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಕಾರ್ಯಕ್ರಮವನ್ನು ಭಾರೀ ಭೋಜನದಿಂದ ಶುರುಮಾಡಿ ಬಹಳ ವಿಜ್ಹ್ರಂಭಣೆಯಿಂದ ಆಚರಿಸಿದರು. ಈ ಸಂದರ್ಭದಲ್ಲಿ ರತ್ನಮಾಲಾ ಪ್ರಕಾಶ್ ರವರ ಭಾವ ಸಂಗಮ ಕಾರ್ಯಕ್ರಮ ಎಲ್ಲರನ್ನೂ ಭಾವ ಸಮುದ್ರದೆಡೆ ಕರೆದುಕೊಂಡು ಹೋಯಿತು. ಕಾರ್ಯಕ್ರಮವು  ನಾಟಕೋತ್ಸವದಲ್ಲಿ ಅತ್ತ್ಯುತ್ತಮ ನಾಟಕ ಎಂಬ ಪ್ರಶಸ್ತಿಗೆ ಪಾತ್ರವಾದ, ಟ್ರೆಡ್ಮಿಲ್ ನಾಟಕದಿಂದ ಕೊನೆಗೊಂಡಿತು.

ಪ್ರಸಕ್ತ ಸಮಿತಿಯ ಕಾರ್ಯಚರಣೆ ಶುರುವಾಗಿ ಎರಡು ವರ್ಷದ ಮೇಲಾಗಿ, ರಾಜ್ಯೋತ್ಸವದ ಸಂದರ್ಭದಲ್ಲಿ ಸಾಂಕೇತಿಕವಾಗಿ ಮುಗಿದಿದೆ. ಮುಂಬರುವ ಕಾರ್ಯಕಾರಿ ಸಮಿತಿಗೆ ಈ ಜವಾದ್ದಾರಿಯುತ ಅಧಿಕಾರವನ್ನು ಸಂಪೂರ್ಣವಾಗಿ   ವಹಿಸುವ ಕೆಲಸ ಮಾತ್ರ ಬಾಕಿ ಇದೆ . ಈ ಕಾಲಾವಧಿಯಲ್ಲಿ ಪ್ರಸಕ್ತ ಸಮಿತಿಯು ಬಹಳಷ್ಟು ಪ್ರಗತಿಪರ ಬದಲಾವಣೆ ತಂದಿರುವುದು ನಿಮಗೆ ಈಗಾಗಲೇ ತಿಳಿದಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಊಟ, ಆಟ, ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಸಮಿತಿಯ ವಿವಿಧ ಕಾರ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ, ಸಂಘದ ಹಿರಿಯ ಸದಸ್ಯರು ಹಾಗೂ ಕಿರಿಯ ಸದಸ್ಯರೆಲ್ಲರಿಗೂ ಕಾರ್ಯಕ್ರಮಗಳಲ್ಲಿ ಅವಕಾಶ, ಸಂಘದ ಸದಸ್ಯರಿಗೆ ಸ್ವಯಂ ಸೇವೆಗೆ ಉತ್ತೇಜನೆ ಇವೇ ಮುಂತಾದವು. ಇದರ ಪರಿಣಾಮ, ಎಲ್ಲರೂ ಸಂಘದ ಕಾರ್ಯಚಟುವಟಿಕೆಗೆ ಪಾಲ್ಗೊಳ್ಳಲು ಮುಂದಾಗಿ ಬರುತ್ತಲಿರುವುದು, ಆ ಮೂಲಕ ಕನ್ನಡತನವನ್ನು ಎತ್ತಿ ಹಿಡಿಯುತ್ತಿರುವುದು ಹೆಗ್ಗಳಿಕೆಯ ವಿಷಯ.

ಈ ಬದಲಾವಣೆಗಳನ್ನು  ತರುವಲ್ಲಿ, ನನ್ನೊಡನೆ ಕೈಜೋಡಿಸಿದವರು ಉಪಾಧ್ಯಕ್ಷರ ಸ್ಥಾನದಲ್ಲಿ ಅಮೃತ್ ದತ್ತಾತ್ರೆಯ, ಕಾರ್ಯದರ್ಶಿಗಳ ಸ್ಥಾನದಲ್ಲಿ ರವಿ ವಿಶ್ವನಾಥ್, ಖಾಜಾಮ್ಚಿಯಾಗಿ ಸವಿತಾ ಪ್ರದೀಪ್, ಊಟದ  ಉಸ್ತುವಾರರಾದ ಶಿರೀಶ್ ಕಾವೂರ್, ಆಟದ ಉಸ್ತುವಾರರಾದ ಪ್ರತಾಪ್ ಬಿ. ಆರ್, ಕಂಪು e-ಪತ್ರಿಕೆಯ ಸಂಪಾದಕಿ ಪೂರ್ಣಿಮಾ ಸುಬ್ರಮಣ್ಯ, ಕಂಪು  ಬ್ಲಾಗ್ ಉಸ್ತುವಾರರಾದ ಶಶಿಕಿರಣ್ ಹಾಗೂ ಪಬ್ಲಿಸಿಟಿ ಉಸ್ತುವಾರರಾದ ಅನು ಬೆನಕಟ್ಟಿ, ಅಂತರ್ಜಾಲ ಉಸ್ತುವಾರರಾದ ವಂದನಾ ಶರ್ಮ. ಇವರೆಲ್ಲರಿಗೂ ಹಾಗೂ  ಇವರ ಕುಟುಂಬದವರಿಗೂ  ಧನ್ಯವಾದಗಳು. ಅಲ್ಲದೆ ಈ ಎಲ್ಲಾ ಪ್ರಯತ್ನಕ್ಕಾಗಿ, ನನಗೆ  ಸಂಪೂರ್ಣ ಸಹಕಾರ ನೀಡಿದ ನನ್ನ ಕುಟುಂಬದವರಿಗೆಲ್ಲರಿಗೂ  ಹೃದಯಪೂರ್ವಕ ಧನ್ಯವಾದಗಳು.

ನಿಮ್ಮೆಲ್ಲರ  ಪ್ರೀತಿ, ಸಹೃದಯದ ಸಹಕಾರದಿಂದ ನಮ್ಮ ಸಮಿತಿಯ ಕಾರ್ಯಾಚರಣೆ ಸುಗಮವಾಗಿ ಸಾಗಿ ಬಂತು. ಇದಕ್ಕಾಗಿ ಹೃದಯಪೂರ್ವಕ ಧನ್ಯವಾದಗಳು. ಬನ್ನಿ, ಶ್ರೀವತ್ಸ ರಾಮನಾಥನ್ ನೇತೃತ್ವದ ಮುಂಬರುವ ಕಾರ್ಯಕಾರಿ ಸಮಿತಿಯನ್ನು ಸ್ವಾಗತಿಸೋಣ, ಹಾಗೂ  ಅವರ ಸಮಿತಿಗೂ ಇದೇ ರೀತಿ  ಸಹಕಾರ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

ನಾವೆಲ್ಲರೂ ಒಟ್ಟಿಗೂಡಿ ಕರುನಾಡ ದೀಪ, ಸಿರಿ ನುಡಿಯ ದೀಪವನ್ನು, ಓಲವೇತ್ತಿ ತೋರುವ ದೀಪವನ್ನು ಹಚ್ಹೋಣ ಬನ್ನಿ.
ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಜೈ ಭುವನೇಶ್ವರಿ, ಜೈ ಕರ್ನಾಟಕ , ಜೈ MKANT

ಇಂತಿ ನಿಮ್ಮೆಲ್ಲರ,
ವಿದ್ಯಾ ದತ್ತ