ಅಧ್ಯಕ್ಷರ ಸಂದೇಶ

ವತ್ಸ ರಾಮನಾಥನ್
ಕಂಪು ಓದುಗರಿಗೆ ನನ್ನ ಹೃತ್ಪೂರ್ವಕ ದೀಪಾವಳಿ ಶುಭಾಶಯಗಳು!

ನಮ್ಮ ಮಲ್ಲಿಗೆ ಕನ್ನಡ ಸಂಘದ  ದೀಪಾವಳಿ ಕಾರ್ಯಕ್ರಮವನ್ನು ನೀವೆಲ್ಲರೂ ಉತ್ಸಾಹದಿಂದ ಎದಿರು ನೋಡುತಿದ್ದೀರೆಂದು ನಾನು ಭಾವಿಸಿದ್ದೇನೆ. ಪ್ರತಿ ವರ್ಷದ ಹಾಗೆ ಈ ವರ್ಷವೂ ಸಹ ಕನ್ನಡ ಸಂಘದ ಸದಸ್ಯರು ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿದ್ದಾರೆ; ನೀವೆಲ್ಲರೂ ಬಂದು, ಭಾಗವಹಿಸಿ ಆನಂದಿಸಿ.

ಸ್ನೇಹಿತರೆ, ನಮ್ಮ ಸಮಿತಿ ಕಾರ್ಯನಿರ್ವಹಣೆಯಲ್ಲಿ ತೊಡಗಿದ ವರ್ಷ, ನಾವು ನಮ್ಮ ಸಂಘದಿಂದ, ಪ್ರತಿ ವರ್ಷ ಒಂದು ಸೇವಾಕಾರ್ಯಕ್ಕಾಗಿ ಹಣ ಸಂಗ್ರಹಿಸಿ ಸಹಾಯ ಮಾಡುವುದಾಗಿ ಸಂಕಲ್ಪಿಸಿದ್ದೆವು. ಕಳೆದ ವರ್ಷ ನೀವೆಲ್ಲರೂ ಮುಂದೆ ಬಂದು ನಿರೀಕ್ಷೆಗೆ ಸಹಾಯ ಮಾಡಿದಿರಿ. ಈ ವರ್ಷ ಅಕ್ಕ ಸಂಸ್ಥೆಯ ಜೊತೆ ಸೇರಿ ಕೊಡಗಿನಲ್ಲಿ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿಹೋದ ಒಂದು ಶಾಲೆ ಪುನರ್ನಿರ್ಮಾಣಕ್ಕಾಗಿ ನಮ್ಮ ಸಂಘದಿಂದ ಕೈಲಾಗುವ ಸಹಾಯ ಮಾಡುವ ಉದ್ದೇಶ ಇದೆ. ಮಾಕಂದೂರು ಎಂಬ ಕುಗ್ರಾಮದಿಂದ ನಮ್ಮ ದೇಶ ರಕ್ಷಣೆಗಾಗಿ ಪಣತೊಟ್ಟು ನಿಂತ ಹಲವಾರು ಯೋಧರ ಮಕ್ಕಳು ಶಾಲೆ ಇಲ್ಲದೆ ಕಂಗಾಲಾಗಿದ್ದಾರೆ. ದೇಶವಾಸಿಗಳ ರಕ್ಷಣೆಗೆ ಆದ್ಯತೆ ಕೊಟ್ಟು ತಮ್ಮ ಕುಟುಂಬವನ್ನು ಬಿಟ್ಟು ಹೋಗಿರುವ
ಧೀರ ಕೊಡಗಿನ ವೀರರ ಸಹಾಯಕ್ಕೆ ಒಟ್ಟಿಗೆ ಬಂದು ಬಿಚ್ಚು ಮನಸ್ಸಿನಿಂದ ದಯವಿಟ್ಟು ಸಹಾಯ ಮಾಡಿ ಎಂದು ನಿಮ್ಮಲ್ಲಿ ನಾನು ವಿನಂತಿಸುತ್ತೇನೆ.

ನೀವೆಲ್ಲರೂ ಅಕ್ಕ ಸಮ್ಮೇಳನದಲ್ಲಿ ನೋಡಿ, ಆಲಿಸಿ, ಆನಂದಿಸಿದ ಅನೀಶ್ ವಿದ್ಯಾಶಂಕರ್ ಅವರ ಪಿಟೀಲು ಕಾರ್ಯಕ್ರಮವನ್ನು ಮತ್ತೆ ಮಲ್ಲಿಗೆ ಕನ್ನಡ ಸಂಘ ಡಲ್ಲಾಸ್ ಗೆ ತರುತ್ತಿದೆ. ಡಿಸೆಂಬರ್ ೧ನೇ ತಾರೀಖು ಶನಿವಾರ ಮತ್ತೆ ಅನೀಶ್ ಅವರು ನಿಮ್ಮೆಲ್ಲರನ್ನು ಮನರಂಜಿಸಲಿದ್ದಾರೆ. ಅದರ ವಿವರಗಳನ್ನು  ನಿಮಗೆ ಸದ್ಯದಲ್ಲೇ ಕಳುಹಿಸುತ್ತೇವೆ. ದಯವಿಟ್ಟು ಆ ಅವಕಾಶವನ್ನು ಮರೆತು ನಿರಾಶರಾಗಬೇಡಿ. ನಿಮ್ಮ ಕ್ಯಾಲೆಂಡರ್ ನಲ್ಲಿ ಗುರುತಿಸಿಕೊಳ್ಳಿ.

ಮಲ್ಲಿಗೆ ಕನ್ನಡ ಸಂಘಕ್ಕೆ ನಿಮ್ಮ ಬೆಂಬಲ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ.

ಇಂತಿ ನಿಮ್ಮ ವಿಶ್ವಾಸಿ
ವತ್ಸ ರಾಮನಾಥನ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ