ವಾಸು ಪೋತದಾರ
ಒಮ್ಮೆ ಯೋಚಿಸಿದೆ
ಈ ಜಗದ ಆದಿ-ಅನಾದಿಗಳ ಕುರಿತು
ಆಗ ವಿಜ್ಞಾನಿಗಳು ಹೇಳಿದರು -
"ಈ ಭೂಮಿ ಸೂರ್ಯನ ಒಂದು ತಣ್ಣಗಾದ ತುಣುಕು,
ಇಲ್ಲಿನ ಜೀವಸಂಕುಲ ಅಮೀಬಾದ ವಂಶವೈವಿಧ್ಯ"
ವೈದಿಕರೆಂದರು - "ಅಲ್ಲಲ್ಲ, ಇದು ಮನುಕುಲ,
ಈ ಬ್ರಹ್ಮಾಂಡ ಭಗವಂತನ ಸೃಷ್ಟಿ"
ಮತ್ತೊಂದು ಸಂಶಯ ಮೊಳೆಯಿತು -
ಕೇಳಿದೆ - ಅದಿರಲಿ, ಈ ವಿಶ್ವದ ಆರಂಭ ಹೇಗಾಯಿತೆಂದು?
ಕನ್ನಡಕವನ್ನೇರಿಸುತ್ತ ವಿಜ್ಞಾನಿಗಳೆಂದರು -
"ಇನ್ನೂ ಯೋಚಿಸುತ್ತಿದ್ದೇವೆ"
ಜುಟ್ಟನ್ನು ನೀವುತ್ತ ಪಂಡಿತರು ಬೀಗಿದರು -
"ಇದು ಭಗವಂತನ ಮಹಿಮೆ,
ಮತ್ತೆ ಮುಂದೆ ಆತನ ಹುಟ್ಟಿನ ಕುರಿತು ಕೇಳೀರೋ ಜೋಕೇ?
ಆತ ಆದ್ಯಂತರಹಿತ"
ನಾಸ್ತಿಕರಾದ ವಿಜ್ಞಾನಿಗಳು ಗುಡುಗಿದರು -
"ಭಗವಂತ ಭಗವಂತ! ಅದು ನಿಮ್ಮ ಭ್ರಮೆ,
ನಿಮ್ಮನ್ನು ನಂಬಲು ವಿಜ್ಞಾನಕ್ಕೆ ಪ್ರಮಾಣ ಬೇಕು"
ಮಂದಸ್ಮಿತ ಪಂಡಿತರ ಉವಾಚ -
"ನಿಮ್ಮನ್ನು ನಂಬಲು ನಮಗೆ ಖಚಿತ ಉತ್ತರ ಬೇಕು"
ನಿಜವೆನಿಸಿತು, ಖಚಿತ ಉತ್ತರವಿಲ್ಲದ ವಿಜ್ಞಾನವನು ನಂಬುವದು ಹೇಗೆ?
ಆದರೆ ನೆನಪಾಯಿತು ಆಗ
ದಿನನಿತ್ಯದ ನಮ್ಮ ಬಾಳಿನಲಿ ವಿಜ್ಞಾನದ ಕೊಡುಗೆ
ಯೋಚಿಸಿದೆ ಯಾವುದು ಸರಿಯೆಂದು
ಹೊಳೆಯಲಿಲ್ಲ!
ಕೊನೆಗೆ -
ಸೃಷ್ಟಿಸಿದ ಭಗವಂತನಿಗೆ ಕೈಮುಗಿದು,
ವಿಜ್ಞಾನದ ಕೊಡುಗೆಗೆ ಕೃತಜ್ಞತೆ ಸಲ್ಲಿಸಿ,
ಸುಮ್ಮನಾದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ