ಕೇಫ಼

ಗುರುಪ್ರಸಾದ್ ವೆಂಕಟರಾಮು 

ಕನ್ನಡ ಸಾಹಿತ್ಯ ಲೋಕಕ್ಕೆ ಕೇಫ಼ ಎಂದೇ ಪರಿಚಿತರಾದ ಎ.ವಿಕೇಶವಮೂರ್ತಿಯವರದು ವಿಶಿಷ್ಟ ಕೊಡುಗೆ.

ಸುಧಾ ವಾರಪತ್ರಿಕೆ ಮತ್ತು ಪ್ರಜಾ‍ವಾಣಿ ವಿಶೇಷಾಂಕಗಳನ್ನು ಓದುತ್ತಿದ್ದವರಿಗೆ ಕೇಫ಼ರ ಹಾಸ್ಯ ಬರಹಗಳ ಪರಿಚಯವಿರುತ್ತದೆ. ಬೇರೆಲ್ಲ ಬರಹಗಾರರಿಗಿಂತ ಬಲು ಭಿನ್ನ ಇವರ ಶೈಲಿ.

ಎಂಭತ್ತರ ದಶಕದ ಮೈಸೂರು ನಗರವನ್ನು ಕಲ್ಪಿಸಿಕೊಳ್ಳಿ. ಆಧುನಿಕ ಬದುಕಿನ ಜಂಜಾಟವಿಲ್ಲದ, ಇನ್ನೂ ಕೊಂಚ ನಿಧಾನ ಗತಿಯ ಆರಾಮ ಜೀವನ ಶೈಲಿ. ಕಥಾನಾಯಕ ಪಾಂಡುವಿಗೆ ನಮ್ಮ ನಿಮ್ಮಂತೆ ವೃತ್ತಿ, ಕೆಲಸಗಳ ಗೋಜುಗಳಿದ್ದಂತೆ ಕಾಣುವುದಿಲ್ಲ. ಟೈಮಿಗೆ ಸರಿಯಾಗಿ ಕಾಫಿ ,ಬ್ರೇಕ್ಫಾಸ್ಟ್ , ಲಂಚ್ ಮಾಡುವುದು. ಸಂಜೆಯ ಹೊತ್ತಿಗೆ ಸ್ವಲ್ಪ ರೆಸ್ಟ್ ತೆಗೆದುಕೊಂಡು, ನೀಟಾಗಿ ಬಟ್ಟೆ ಧರಿಸಿ ಮೈ.ಸಂ (ಮೈಗಳ್ಳರ ಸಂಘ)ಕ್ಕೆ ಭೇಟಿ ಕೊಟ್ಟು ಗೆಳೆಯರೊಂದಿಗೆ ಕುಳಿತು ಗುಂಡೇರಿಸುವುದು.

ಪಾಂಡುವಿನ ಅಡುಗೆ ಭಟ್ಟ ಕಮ್ ಆಪ್ತ ಸಹಾಯಕ ಕಮ್ ಆಪ್ತ ಭಾಂಧವ ಶೌರಿ. ಪ್ರಚಂಡ ಬುದ್ಧಿವಂತಿಕೆಯ ಶೌರಿ ಎಂಥದೇ ಸಮಸ್ಯೆಯಿರಲಿ ಪರಿಹರಿಸಬಲ್ಲ ಚಾಣಾಕ್ಷ.

ಮೈಗಳ್ಳರ ಸಂಘದಲ್ಲಿ ಪಾಂಡುವಿನ ಗೆಳೆಯರ ಬಳಗವೇ ಇರುವುದು. ಸಂಘದ ಅಧ್ಯಕ್ಷ ಟಿಪ್ಸೀ. ಪೀಟರ್, ಬಷೀರ್, ಭಾನ್ ಸಿಂಗ್, ಬಾಬು, ಜಗ್ಗ, ರಾಘಣ್ಣಿ, ಫಸ್ಟ್  ಬೌಲರ್ ಶಿಂಗ್ರಯ್ಯಂಗಾರಿ - ಎಲ್ಲರದೂ ಜೀವನದಲ್ಲಿ ಒಂದೇ ಪಾಲಿಸಿ. ಸಂಘದ ಕಡೆಯಿಂದ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿ, ಕೈಲಾದಷ್ಟು ಗುಂಡೇರಿಸುವುದು.

ಸಂಘದಲ್ಲಿ ವಿವಿಧ ಅಭಿರುಚಿಯ ಗ್ರೂಪ್‍ಗಳು ಇರುವವು :)
ಇಟ್ಟಿಗೆ ಗೂಡು ಡೂನ್ಸ್ ಗ್ರೂಪ್ (ಐ.ಜಿ.ಡಿ)
ಅಮೃತಾ ಸಿಂಗ್ ಅಭಿಮಾನಿ ಗ್ರೂಪ್ (ಎ.ಎ.ಜಿ)
ಮೆಟ್ರಿಕ್ ರಿಪೀಟರ್ಸ್ ಗ್ರೂಪ್ (ಎಂ.ಆರ್.ಜಿ)
ರೇಖಾ ಪೈಥ್ಯಂ ಗ್ರೂಪ್ (ಆರ್.ಪಿ.ಜಿ)

ಪಾಂಡು, ಶೌರಿ, ಮೈಗಳ್ಳರ ಸಂಘದ ಸದಸ್ಯರುಗಳ ಜೊತೆಗೆ ಇನೂ ಹಲವು ವಿಶೇಷ ಪಾತ್ರಗಳೂ ಇರುವವು - ಘಂಟಾ ಘೋಷ ಪತ್ರಿಕೆಯ ಎಡಿಟರ್ ಉಜ್ಜನಪ್ಪ, ಬುಲ್ ಬುಲ್ ತರಂಗ್ ಗುರು ತಿಪ್ಪಣ್ಣ, ಶೌರಿಯ ಭಾವ ಅಖಿಲಾಂಡಯ್ಯ, ಡೋಂಟ್  ಫೀಕರ್  ಬಸ್ಸಿನ ಡ್ರೈವರ್ ಖಾದರ್, ಹುಚ್ಚರ ಡಾಕ್ಟರ್ ಭುಜಂಗರಾವ್. ಇವರೆಲ್ಲಾ ಸೇರಿಕೊಂಡು ನಡೆಯುವ ತಿಳಿಹಾಸ್ಯ ಪ್ರಸಂಗಗಳೇ ಕೇಫ಼ರ ಬರಹಗಳ ತಿರುಳು.

ಓದುತ್ತಾ ಹೋದಂತೆ, ಬೇರೆಯದೇ ಒಂದು ಲೋಕ ನಮ್ಮ ಮುಂದೆ ಸೃಷ್ಟಿಯಾಗುವುದು ಅವರ ಲೇಖನಿಯ ತಾಕತ್ತು. 

ಎಸ್.ದಿವಾಕರ  ಅವರು "ಬೆಸ್ಟ್ ಆಫ್  ಕೇಫ಼" ಎಂಬ ಹೆಸರಿನಲ್ಲಿ ಕೇಫ಼ರ ಬರಹಗಳನ್ನು ಸಂಗ್ರಹಿಸಿದ್ದಾರೆ (ಪ್ರಕಾಶಕರು: ಅಂಕಿತ ಪುಸ್ತಕ ). ತಪ್ಪದೇ ಓದಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ