ಲಾಲ್ ಬಾಗ್ ನ ಗರ್ಭ ಗುಡಿ

ನವ್ಯ ಎಸ್. 


ರಾಷ್ಟ್ರಕವಿ ಕುವೆಂಪು ಅವರು ಲಾಲ್ ಬಾಗ್ ನ್ನು "ದೇವಾಲಯವೀ ಹೂವಿನ ತೋಟಂ" ಎಂದು ಕರೆದಿದ್ದಾರೆ . ಈ ದೇವಾಲಯದ ಗರ್ಭ ಗುಡಿಯೇ ಗಾಜಿನ ಮನೆ ಅಥವಾ ಗ್ಲಾಸ್ ಹೌಸ್ . ಹೇಗೆ ವಾರ್ಷಿಕ ಉತ್ಸವಗಳಲ್ಲಿ  ಗರ್ಭಗುಡಿಯನ್ನು ವಿಶೇಷವಾಗಿ ಅಲಂಕರಿಸುತ್ತಾರೋ ಹಾಗೆ ಇದೂ ಪುಷ್ಪೋತ್ಸವದಲ್ಲಿ ವರ್ಣರಂಜಿತವಾಗಿ ವಿಭಿನ್ನ ಶೋಭೆಯನ್ನೇ ಪಡೆದುಬಿಡುತ್ತದೆ . ಇನ್ನು ಈ ಬಾರಿಯ ಹೂವಿನ ದೋಣಿಯಂತೆ ಪ್ರತಿ ವರ್ಷವೂ ಬಹುತೇಕ ಗುಲಾಬಿ ಹೂಗಳಿಂದಲೇ ರೂಪಿಸಲ್ಪಡುವ ರಚನೆಗಳಂತೂ ಗುಡಿಯೊಳಗಿನ ಮೂರ್ತಿಯಂತೆ ಕಂಗೊಳಿಸುತ್ತದೆ .. 

ಈ ಗಾಜಿನ ಮನೆಯ ರಚನೆಯಾಗುವುದಕ್ಕೆ ಎರಡು ದಶಕಗಳ ಮುಂಚೆಯೇ , ಇದರ ಎದುರಿಗೆ ಇರುವ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ 1867ರ ಫೆಬ್ರುವರಿ 16 ರಂದು ಪ್ರಥಮ ಪುಷ್ಪ ಪ್ರದರ್ಶನವು ನಡೆಯಿತು . ಅದೇ ವರ್ಷ ಡಿಸೆಂಬರ 31 ರಂದು ಎರಡನೇ ಪ್ರದರ್ಶನವೂ ,1868ರ ಸೆಪ್ಟೆಂಬರ ,1869 ರ ಫೆಬ್ರುವರಿಯಲ್ಲಿ ಮೂರು ಮತ್ತು ನಾಲ್ಕನೇ ಪ್ರದರ್ಶನಗಳೂ ಆಯೋಜಿತಗೊಂಡವು . 1870ರ   ಪ್ರದರ್ಶನದಲ್ಲಿ ಮೈಸೂರು ಸಂಸ್ಥಾನದ್ದೇ ಆದ ದನಕರುಗಳು , ಕುರಿಗಳು , ಕುದುರೆಗಳು ದವಸ ಧಾನ್ಯಗಳೂ ಇದ್ದವು . ಮುಂದಿನ ವರ್ಷಗಳಲ್ಲಿ ಮಳೆಯಿಂದಾಗಿ ಟೆಂಟ್ ಗಳ ವ್ಯವಸ್ಥೆ ಮಾಡಲಾಯಿತು . ಇದರ ಶಾಶ್ವತ ವ್ಯವಸ್ಥೆಗಾಗಿ 1890 ರಲ್ಲಿ ಇಲ್ಲಿನ ಮುಖ್ಯಸ್ಥರಾಗಿದ್ದ ಜಾನ್ ಕೆಮರಾನ್ ರವರ ಆದೇಶದಂತೆ ಲಂಡನ್ ನ ಕ್ರಿಸ್ಟಲ್ ಪ್ಯಾಲೇಸ್ ಮಾದರಿಯಲ್ಲಿ ಇಂಗ್ಲೆಂಡಿನ ಮೆಕ್ ಫರ್ಲಾನ್ ಕಂಪನಿ, ಗ್ಲ್ಯಾಸ್ಕೋ , ಇವರು ಈ ಗಾಜಿನ ಮನೆಯನ್ನು ನಿರ್ಮಿಸಿದರು . ಇಂದಿಗೂ ಮುಖ್ಯ ಪ್ರವೇಶ ದ್ವಾರದ ಗೇಟುಗಳು ಮತ್ತು ಇಲ್ಲಿನ ಕಂಬಗಳ ಮೇಲೇ ಈ ಹೆಸರಿರುವುದನ್ನು ಕಾಣಬಹುದು . ಮೊದಲು ಇದನ್ನು ಆಲ್ಬರ್ಟ್ ವಿಕ್ಟರ ಕನ್ಸರ್ವೇಟೊರಿ ಎಂದು ಕರೆದರೂ ನಂತರ ಗ್ಲಾಸ್ ಹೌಸ್ ಎಂದೇ ಪ್ರಸಿದ್ಧವಾಯಿತು . 1935 ರಲ್ಲಿ ರಾವ್ ಬಹಾದ್ದೂರ್ ಹೆಚ್. ಸಿ. ಜವರಾಯ ಅವರು ಮುಖ್ಯಸ್ಥರಾಗಿದ್ದಾಗ ಇದರ ಪೂರ್ವಕ್ಕೆ ಇನ್ನೊಂದು ಭಾಗವನ್ನು ಸೇರಿಸಿದರು . ಮೂಲ ರಚನೆಗೆ ಎಲ್ಲ ರೀತಿಯಲ್ಲೂ ಸರಿಹೊಂದುತ್ತಿದ್ದ ಇದರ ನಿರ್ಮಾಣದಲ್ಲಿ ಸಂಪೂರ್ಣವಾಗಿ ಭದ್ರಾವತಿಯ ಮೈಸೂರು ಐರನ್ ವರ್ಕ್ಸ್ ಕಾರ್ಖಾನೆಯಲ್ಲಿ ತಯಾರಾದ ವಸ್ತುಗಳನ್ನೇ ಬಳಸಲಾಯಿತು . 

1891 ರಲ್ಲಿ ಗಾಜಿನ ಮನೆಯಲ್ಲೇ ಪ್ರಥಮ ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಯಿತು . ಆದರೆ ಮುಂದೆ ಬರಗಾಲ ಮತ್ತು ಪ್ಲೇಗ್ ನಿಂದಾಗಿ  ಕ್ರಮವಾಗಿ ಪ್ರದರ್ಶನಗಳು ನಡೆಯಲಿಲ್ಲ .1906 ರಲ್ಲಿ ವೇಲ್ಸ್ ನ ರಾಜಕುಮಾರ ಬೆಂಗಳೂರಿಗೆ ಬಂದಾಗ ಅವರ ಗೌರವಾರ್ಥ ನಡೆದು ಮತ್ತೆ ಈ ಪ್ರದರ್ಶನಗಳು ವ್ಯವಸ್ಥಿತವಾದವು .1912 ರಲ್ಲಿ ಜಿ.ಹೆಚ್.  ಕೃ೦ಬಿಗಲ್ ರವರು ಮುಖ್ಯಸ್ತರಾಗಿದ್ದಾಗ ನಡೆದ ಪ್ರದರ್ಶನದಲ್ಲಿ ಬಾಲಕಿಯರಿಗಾಗಿ ಹೂಗಳಿಂದ ಅಲಂಕೃತವಾದ ಬೈಸಿಕಲ್ ಪರೇಡನ್ನು ಏರ್ಪಡಿಸಿದ್ದರು . ಅವರ 12 ವರ್ಷದ ಪುತ್ರಿ ಹಿಲ್ಡಾ ಕೂಡ ಇದರಲ್ಲಿ ಪಾಲ್ಗೊಂಡಿದ್ದಳು .. 

ಈ ಗಾಜಿನ ಮನೆಗೆ ನೂರು ವರ್ಷಗಳು ತುಂಬಿದಾಗ ಅದರ ನೆನಪಾಗಿ ಮೈಸೂರು ಹಾರ್ಟಿಕಲ್ಟುರಲ್ ಸೊಸೈಟಿಯು ಗ್ಲಾಸ್ ಹೌಸ್ - ದಿ ಜ್ಯುವೆಲ್ ಆ ಲಾಲ್ ಬಾಗ್ ಎಂಬ ಒಂದು ಗ್ರಂಥವನ್ನು ಪ್ರಕಟಿಸಿತು . ಇದು ಸುಂದರ ಮತ್ತು ಪವಿತ್ರ ಗರ್ಭ ಗುಡಿಗೆ ಸಲ್ಲಿಸಿದ ಸೂಕ್ತ ಗೌರವವಷ್ಟೇ ಅಲ್ಲದೆ ಉಪಯುಕ್ತ ಚಿತ್ರ ಮತ್ತು ಲೇಖನಗಳನ್ನು ಉಳ್ಳ ದಾಖಲೆಯೂ ಹೌದು . ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ