ರಾಜ್ಯೋತ್ಸವ 2017 ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಾಜ್ಯೋತ್ಸವ 2017 ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಯಕ್ಷಪ್ರಶ್ನೆ

ವಾಸು ಪೋತದಾರ

ಒಮ್ಮೆ ಯೋಚಿಸಿದೆ
ಈ ಜಗದ ಆದಿ-ಅನಾದಿಗಳ ಕುರಿತು

ಆಗ ವಿಜ್ಞಾನಿಗಳು ಹೇಳಿದರು -

"ಈ ಭೂಮಿ ಸೂರ್ಯನ ಒಂದು ತಣ್ಣಗಾದ ತುಣುಕು,
ಇಲ್ಲಿನ ಜೀವಸಂಕುಲ ಅಮೀಬಾದ ವಂಶವೈವಿಧ್ಯ"
ವೈದಿಕರೆಂದರು - "ಅಲ್ಲಲ್ಲ, ಇದು ಮನುಕುಲ,
ಈ ಬ್ರಹ್ಮಾಂಡ ಭಗವಂತನ ಸೃಷ್ಟಿ"

ಮತ್ತೊಂದು ಸಂಶಯ ಮೊಳೆಯಿತು -
ಕೇಳಿದೆ - ಅದಿರಲಿ, ಈ ವಿಶ್ವದ ಆರಂಭ ಹೇಗಾಯಿತೆಂದು?

ಕನ್ನಡಕವನ್ನೇರಿಸುತ್ತ ವಿಜ್ಞಾನಿಗಳೆಂದರು -

"ಇನ್ನೂ ಯೋಚಿಸುತ್ತಿದ್ದೇವೆ"
ಜುಟ್ಟನ್ನು ನೀವುತ್ತ ಪಂಡಿತರು ಬೀಗಿದರು -
"ಇದು ಭಗವಂತನ ಮಹಿಮೆ,
ಮತ್ತೆ ಮುಂದೆ ಆತನ ಹುಟ್ಟಿನ ಕುರಿತು ಕೇಳೀರೋ ಜೋಕೇ?
ಆತ ಆದ್ಯಂತರಹಿತ"

ನಾಸ್ತಿಕರಾದ ವಿಜ್ಞಾನಿಗಳು ಗುಡುಗಿದರು -

"ಭಗವಂತ ಭಗವಂತ! ಅದು ನಿಮ್ಮ ಭ್ರಮೆ,
ನಿಮ್ಮನ್ನು ನಂಬಲು ವಿಜ್ಞಾನಕ್ಕೆ ಪ್ರಮಾಣ ಬೇಕು"

ಮಂದಸ್ಮಿತ ಪಂಡಿತರ ಉವಾಚ -
"ನಿಮ್ಮನ್ನು ನಂಬಲು ನಮಗೆ ಖಚಿತ ಉತ್ತರ ಬೇಕು"

ನಿಜವೆನಿಸಿತು, ಖಚಿತ ಉತ್ತರವಿಲ್ಲದ ವಿಜ್ಞಾನವನು ನಂಬುವದು ಹೇಗೆ?
ಆದರೆ ನೆನಪಾಯಿತು ಆಗ
ದಿನನಿತ್ಯದ ನಮ್ಮ ಬಾಳಿನಲಿ ವಿಜ್ಞಾನದ ಕೊಡುಗೆ
ಯೋಚಿಸಿದೆ ಯಾವುದು ಸರಿಯೆಂದು
ಹೊಳೆಯಲಿಲ್ಲ!

ಕೊನೆಗೆ -

ಸೃಷ್ಟಿಸಿದ ಭಗವಂತನಿಗೆ ಕೈಮುಗಿದು,
ವಿಜ್ಞಾನದ ಕೊಡುಗೆಗೆ ಕೃತಜ್ಞತೆ ಸಲ್ಲಿಸಿ,
ಸುಮ್ಮನಾದೆ.


ಕೇಫ಼

ಗುರುಪ್ರಸಾದ್ ವೆಂಕಟರಾಮು 

ಕನ್ನಡ ಸಾಹಿತ್ಯ ಲೋಕಕ್ಕೆ ಕೇಫ಼ ಎಂದೇ ಪರಿಚಿತರಾದ ಎ.ವಿಕೇಶವಮೂರ್ತಿಯವರದು ವಿಶಿಷ್ಟ ಕೊಡುಗೆ.

ಸುಧಾ ವಾರಪತ್ರಿಕೆ ಮತ್ತು ಪ್ರಜಾ‍ವಾಣಿ ವಿಶೇಷಾಂಕಗಳನ್ನು ಓದುತ್ತಿದ್ದವರಿಗೆ ಕೇಫ಼ರ ಹಾಸ್ಯ ಬರಹಗಳ ಪರಿಚಯವಿರುತ್ತದೆ. ಬೇರೆಲ್ಲ ಬರಹಗಾರರಿಗಿಂತ ಬಲು ಭಿನ್ನ ಇವರ ಶೈಲಿ.

ಎಂಭತ್ತರ ದಶಕದ ಮೈಸೂರು ನಗರವನ್ನು ಕಲ್ಪಿಸಿಕೊಳ್ಳಿ. ಆಧುನಿಕ ಬದುಕಿನ ಜಂಜಾಟವಿಲ್ಲದ, ಇನ್ನೂ ಕೊಂಚ ನಿಧಾನ ಗತಿಯ ಆರಾಮ ಜೀವನ ಶೈಲಿ. ಕಥಾನಾಯಕ ಪಾಂಡುವಿಗೆ ನಮ್ಮ ನಿಮ್ಮಂತೆ ವೃತ್ತಿ, ಕೆಲಸಗಳ ಗೋಜುಗಳಿದ್ದಂತೆ ಕಾಣುವುದಿಲ್ಲ. ಟೈಮಿಗೆ ಸರಿಯಾಗಿ ಕಾಫಿ ,ಬ್ರೇಕ್ಫಾಸ್ಟ್ , ಲಂಚ್ ಮಾಡುವುದು. ಸಂಜೆಯ ಹೊತ್ತಿಗೆ ಸ್ವಲ್ಪ ರೆಸ್ಟ್ ತೆಗೆದುಕೊಂಡು, ನೀಟಾಗಿ ಬಟ್ಟೆ ಧರಿಸಿ ಮೈ.ಸಂ (ಮೈಗಳ್ಳರ ಸಂಘ)ಕ್ಕೆ ಭೇಟಿ ಕೊಟ್ಟು ಗೆಳೆಯರೊಂದಿಗೆ ಕುಳಿತು ಗುಂಡೇರಿಸುವುದು.

ಪಾಂಡುವಿನ ಅಡುಗೆ ಭಟ್ಟ ಕಮ್ ಆಪ್ತ ಸಹಾಯಕ ಕಮ್ ಆಪ್ತ ಭಾಂಧವ ಶೌರಿ. ಪ್ರಚಂಡ ಬುದ್ಧಿವಂತಿಕೆಯ ಶೌರಿ ಎಂಥದೇ ಸಮಸ್ಯೆಯಿರಲಿ ಪರಿಹರಿಸಬಲ್ಲ ಚಾಣಾಕ್ಷ.

ಮೈಗಳ್ಳರ ಸಂಘದಲ್ಲಿ ಪಾಂಡುವಿನ ಗೆಳೆಯರ ಬಳಗವೇ ಇರುವುದು. ಸಂಘದ ಅಧ್ಯಕ್ಷ ಟಿಪ್ಸೀ. ಪೀಟರ್, ಬಷೀರ್, ಭಾನ್ ಸಿಂಗ್, ಬಾಬು, ಜಗ್ಗ, ರಾಘಣ್ಣಿ, ಫಸ್ಟ್  ಬೌಲರ್ ಶಿಂಗ್ರಯ್ಯಂಗಾರಿ - ಎಲ್ಲರದೂ ಜೀವನದಲ್ಲಿ ಒಂದೇ ಪಾಲಿಸಿ. ಸಂಘದ ಕಡೆಯಿಂದ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿ, ಕೈಲಾದಷ್ಟು ಗುಂಡೇರಿಸುವುದು.

ಸಂಘದಲ್ಲಿ ವಿವಿಧ ಅಭಿರುಚಿಯ ಗ್ರೂಪ್‍ಗಳು ಇರುವವು :)
ಇಟ್ಟಿಗೆ ಗೂಡು ಡೂನ್ಸ್ ಗ್ರೂಪ್ (ಐ.ಜಿ.ಡಿ)
ಅಮೃತಾ ಸಿಂಗ್ ಅಭಿಮಾನಿ ಗ್ರೂಪ್ (ಎ.ಎ.ಜಿ)
ಮೆಟ್ರಿಕ್ ರಿಪೀಟರ್ಸ್ ಗ್ರೂಪ್ (ಎಂ.ಆರ್.ಜಿ)
ರೇಖಾ ಪೈಥ್ಯಂ ಗ್ರೂಪ್ (ಆರ್.ಪಿ.ಜಿ)

ಪಾಂಡು, ಶೌರಿ, ಮೈಗಳ್ಳರ ಸಂಘದ ಸದಸ್ಯರುಗಳ ಜೊತೆಗೆ ಇನೂ ಹಲವು ವಿಶೇಷ ಪಾತ್ರಗಳೂ ಇರುವವು - ಘಂಟಾ ಘೋಷ ಪತ್ರಿಕೆಯ ಎಡಿಟರ್ ಉಜ್ಜನಪ್ಪ, ಬುಲ್ ಬುಲ್ ತರಂಗ್ ಗುರು ತಿಪ್ಪಣ್ಣ, ಶೌರಿಯ ಭಾವ ಅಖಿಲಾಂಡಯ್ಯ, ಡೋಂಟ್  ಫೀಕರ್  ಬಸ್ಸಿನ ಡ್ರೈವರ್ ಖಾದರ್, ಹುಚ್ಚರ ಡಾಕ್ಟರ್ ಭುಜಂಗರಾವ್. ಇವರೆಲ್ಲಾ ಸೇರಿಕೊಂಡು ನಡೆಯುವ ತಿಳಿಹಾಸ್ಯ ಪ್ರಸಂಗಗಳೇ ಕೇಫ಼ರ ಬರಹಗಳ ತಿರುಳು.

ಓದುತ್ತಾ ಹೋದಂತೆ, ಬೇರೆಯದೇ ಒಂದು ಲೋಕ ನಮ್ಮ ಮುಂದೆ ಸೃಷ್ಟಿಯಾಗುವುದು ಅವರ ಲೇಖನಿಯ ತಾಕತ್ತು. 

ಎಸ್.ದಿವಾಕರ  ಅವರು "ಬೆಸ್ಟ್ ಆಫ್  ಕೇಫ಼" ಎಂಬ ಹೆಸರಿನಲ್ಲಿ ಕೇಫ಼ರ ಬರಹಗಳನ್ನು ಸಂಗ್ರಹಿಸಿದ್ದಾರೆ (ಪ್ರಕಾಶಕರು: ಅಂಕಿತ ಪುಸ್ತಕ ). ತಪ್ಪದೇ ಓದಿ.


ಹಿಜಾಬ್ -ಪುಸ್ತಕ ಪರಿಚಯ

ಗುರುಪ್ರಸಾದ್ ವೆಂಕಟರಾಮು 

ಡಾ. ಗುರುಪ್ರಸಾದ್ ಕಾಗಿನೆಲೆಯವರು ಬರೆದಿರುವ ಹಿಜಾಬ್ ಕಾದಂಬರಿಯನ್ನು ಓದಿ ನನ್ನ ಅನಿಸಿಕೆಯನ್ನು ಹಂಚಿಕೊಳ್ಳಬಯಸುತ್ತೇನೆ.

ಕನ್ನಡ ಸಾಹಿತ್ಯದಲ್ಲಿ ಇಂದಿನ ಕಾಲಮಾನಕ್ಕೆ ಪ್ರಸ್ತುತ ಎನಿಸುವ ಬರಹಗಳ ಬಾಹುಳ್ಯ ಕಡಿಮೆ ಎಂದರೂ ತಪ್ಪಿರಲಿಕ್ಕಿಲ್ಲ.  ಈ ಕೊರತೆಯನ್ನು ನೀಗಿಸುವ ದಿಕ್ಕಿನಲ್ಲಿ ಹಿಜಾಬ್ ಒಂದು ಯಶಸ್ವೀ ಕೃತಿ. ಹೊರದೇಶಗಳಲ್ಲಿ, ಅದರಲ್ಲೂ ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರ ಮನಮುಟ್ಟುವ ವಿಷಯಗಳು ಈ ಕಾದಂಬರಿಯಲ್ಲಿವೆ.

ವಲಸಿಗರ ಸಮಸ್ಯೆಗಳು, ವೀಸಾ, ಗ್ರೀನ್ ಕಾರ್ಡುಗಳ ತಲೆ ಬಿಸಿ, ಭಾವನಾತ್ಮಕ ದ್ವಂದ್ವಗಳು, ಧಾರ್ಮಿಕ ನಂಬಿಕೆಗಳು, ಸಂಘರ್ಷಗಳು ಹೀಗೆ ಗಂಭೀರ ವಿಷಯಗಳ ಸುತ್ತ ಸುತ್ತುವ ಹಿಜಾಬ್ ಕೊನೆಗೆ ಆತಂಕವಾದ, ಮತೀಯವಾದ, ಜನಾಂಗೀಯ ನಿಂದನೆ, ಶ್ವೇತವರ್ಣೀಯರಲ್ಲಿ ಹೆಚ್ಚುತ್ತಿರುವ ಅಸಮಧಾನಗಳವರೆಗೆ ಮುಟ್ಟುತ್ತದೆ. ಯಾವುದೇ ನಾಟಕೀಯತೆ ಅಥವಾ ಅಬ್ಬರಗಳಿಲ್ಲದೆ ಬಹಳ ಸಹಜವಾಗಿ ಕಥೆ ಹೇಳಿದ್ದಾರೆ ಲೇಖಕರು. ಈ ಸಹಜ ಶೈಲಿಯೇ ನನ್ನನ್ನು ಹಿಡಿದಿಟ್ಟುಕೊಂಡಿದ್ದು ಹಾಗೂ ಚಿಂತನೆಗೆ ಹಚ್ಚಿದ್ದು.

ಸತ್ಯ ಸಂಗತಿಗಳೂ, ಕಾಲ್ಪನಿಕ ವಿಷಯಗಳೂ ಬಹಳ ನಾಜೂಕಾಗಿ ಹೆಣೆಯಲ್ಪಟ್ಟಿವೆ. ಯಾವುದು ಸತ್ಯ, ಯಾವುದು ಕಲ್ಪನೆ ಎಂದು ಯೋಚಿಸುತ್ತಲೇ ರೋಮಾಂಚನವಾಯಿತು ನನಗೆ.  (ಅಮೋಕಾ ಎಂಬ ಊರು ನಿಜಕ್ಕೂ ಇದೆಯಾ?, ಮಿನ್ನೆಸೋಟಾದಲ್ಲಿರುವ ಸೊಮಾಲಿಗಳ ಕಥೆ ಏನು ? ಎಂದು ಗೂಗಲ್ ನಲ್ಲಿ ಹುಡುಕಿದ್ದು ಸುಳ್ಳಲ್ಲ !)

ಕೊನೆಯ ಅಧ್ಯಾಯವಂತೂ ಬಹಳ ಪರಿಣಾಮಕಾರಿಯಾಗಿದೆ. ಕಾದಂಬರಿಯುದ್ದಕ್ಕೂ ಒಳಗೇ ಹರಿಯುವ ತಳಮಳಗಳಿಗೆ ಉತ್ತಮ ರೂಪಕವನ್ನು ಕಟ್ಟಿಕೊಡಲಾಗಿದೆ.
ಅಮೆರಿಕಾ ಎಂಬ ಮಾಯಾವಿ ದೇಶವನ್ನು ಅರಿತುಕೊಂಡವರಾರು? ಅವರವರು ದಕ್ಕಿಸಿಕೊಂಡಷ್ಟೇ ಅವರ ಪಾಲು ಎನ್ನುವ ಭಾವ ನನಗೆ ಆಪ್ತವಾಯಿತು. 

ಬಹುಪಾಲು ವೃತ್ತಿ ಜೀವನದ ಮೂಲಕವೇ ಅಮೆರಿಕವನ್ನು ಅನುಭವಿಸುವ ನನಗೆ, ನನ್ನಂಥವರಿಗೆ ಒಂದು ಹೊಸ ದೃಷ್ಟಿಕೋನವನ್ನು ಹೊಳೆಸುತ್ತದೆ ಈ ಕಾದಂಬರಿ. ಅಮೆರಿಕನ್ನಡಿಗರೆಲ್ಲರೂ ಕೊಂಡು ಓದಲೇಬೇಕಾದ ಕೃತಿ.   


ಕಾವೇರಿ ಮಾತೆ - ಒಂದು ಪದ್ಯ-ಗದ್ಯ

ಶ್ರೀಮತಿ. ಕೆ. ಎಲ್. ಸುಬ್ಬಲಕ್ಷ್ಮಮ್ಮ

ಹೇ ಕಾವೇರಿ ಮಾತೆ, ನಿನ್ನ ಹುಟ್ಟು ಹಬ್ಬದ
ಸಂಭ್ರಮವ ಏನೆಂದು ವರ್ಣಿಸಲಿ ??
ಭಾಗಮಂಡಲದ ಪೂಜೆ ಪುನಸ್ಕಾರಗಳನ್ನು ವರ್ಣಿಸಲು ಅಸಾಧ್ಯ!
ಸಾವಿರಾರು ಭಕ್ತರು ನಿನ್ನ ಉದ್ಭವವನ್ನು ಎವೆಯಿಕ್ಕದೆ ನೋಡುತಿಹರು.

ಬ್ರಹ್ಮಕುಂಡಿಕೆಯಲ್ಲಿ ಜನಿಸಿದವಳೆ
ಪಾಲ್ಗಡಲಲ್ಲಿ ಮಿಂದವಳೆ ಹೇ ಕಾವೇರಿ ಮಾತೆ!
ತೀರ್ಥೋದ್ಭವ ಆಗುತ್ತಿದ್ದ ಹಾಗೆ ಅದೇನು ಹರ್ಷೋದ್ಗಾರಾ!
ಅದೇನು ಮುಗಿಲು ಮುಟ್ಟುವ ಕರತಾಡನ!
ನಿನ್ನ ಪುಣ್ಯತೀರ್ಥದಲ್ಲಿ ಮಿಂದು ಸುಖಿಸಿದವರು ಅದೆಷ್ಟು ಜನ!

ಹೇ ಕಾವೇರಿ ಮಾತೆ, ಎಲ್ಲ ಸಂಭ್ರಮವು ಮುಗಿದಿದ್ದರೆ, ಇನ್ನಾದರೂ ಇತ್ತ ಹರಿದು ಬಾ,
ನಲಿಯುತ್ತ ಬಾ, ಕುಣಿಯುತ್ತ ಬಾ, ಒಮ್ಮೆ ಧುಮ್ಮುಕ್ಕಿ ಬಾ
ಇಕ್ಕೆಲಗಳನು ತಣಿಸಿ ಬಾ
ಕೋಟಿಕೋಟಿ ಜನರ ತೃಷೆಯನು ನೀಗಲು ಬಾ
ಪಟ್ಟಣವ ಸುತ್ತಿ ಬಾ, ರಂಗನನು ದಿಟ್ಟಿಸಿ ಬಾ
ಸಂಗಮದಿ ನಿನ್ನ ಗೆಳತಿಯರನು ಕೂಡಿ ಬಾ
ಸಹಸ್ರಾರು ಜನರು ನಿನ್ನ ಪುಣ್ಯಸ್ನಾನಕ್ಕಾಗಿ ಕಾಯುತಿಹರು
ಅವರ ಪಾಪಗಳನ್ನು ನೀಗಲು ಬಾ
ಭಾಮಿನಿಮಣಿಯರು ಬಾಗಿನವ ಪಿಡಿದು ಬಾಗಿಬಾಗಿ ನೋಡುತಿಹರು
ಅವರನ್ನು ಹರಸಲು ಬಾ
ಮುಂದೆ ಕನ್ನಂಬಾಡಿಯಲ್ಲಿ ನಿನ್ನ ಬಂಧಿಸುವರು ಎಂಬ ಶಂಕೆ ಬೇಡ ತಾಯಿ
ಅದೊಂದು ರಕ್ಷಾಬಂಧನ, ಅದೊಂದು ಪ್ರೀತಿಯ ಪ್ರತೀಕ
ನಿನ್ನ ಬರುವಿಗಾಗಿ ನಂದನವನವೇ ಸೃಷ್ಟಿಯಾಗಿದೆ ತಾಯಿ
ಅದಕೆ ಜೀವಕಳೆ ತುಂಬಲು ಬಾ
ಏನು ಮಸ್ತಿ, ಏನು ಮೋಜು!
ಮೈ ನವಿರೇಳುವ ವಾತಾವರಣ!
ಹೇ ದೇವಿ, ಭಾವ ಪರವಶಳಾಗಿ ಅಲ್ಲಿಯೇ ನಿಲ್ಲದಿರು
ಮಾಂಡವ್ಯ ನಗರದ ವಕ್ಕಲು ಮಕ್ಕಳು ನಿನ್ನ ಬರುವಿಗಾಗಿ ಪರಿತಪಿಸುತಿಹರು
ನಾಡಿಗೆ ಸಿಹಿ ನೀಡುವ ಹುನ್ನಾರ ಅವರದು
ಅವರ ಮೊಗದಲಿ ಮಂದಹಾಸ ಮೂಡಲು ನಾಲೆಯಾಗಿ ಹರಿದು ಬಾ
ಗಂಡುಗಲಿಗಳ ನಾಡಿಗೆ
ಕವಿಪುಂಗವರು ಮೆರೆದ ಬೀದಿಗೆ
ಕಾಮಿನಿಯರ ಸಿರಿ ಅಂಗಳಕ್ಕೆ
ಸಂಭ್ರಮದಿ ಬಾ ತಾಯಿ

ಇದೋ ತಾಯೆ, ನಿನಗೆ ಕೋಟಿ ಕೋಟಿ ನಮನ
ಏನೆಂದು ಹೆಸರಿಸಲಿ ನಿನ್ನ?
ಪಾಪನಾಶಿನಿಯೆನ್ನಲೆ? ಪುಣ್ಯಶ್ರೀ ಎನ್ನಲೆ, ಪಾವನಿ ಎನ್ನಲೆ, ಭಾಗೀರಥಿ ಎನ್ನಲೆ
ಹೇ ಸಿರಿಗೌರಿ ಲಕ್ಷ್ಮೀ ಹತ್ತಿರ ಬಾ

ನಾಲ್ವಡಿ ಕೃಷ್ಣರ ಪೀಳಿಗೆಯ ಹರಸುತ್ತ ಬಾ
ವಿಶ್ವೇಶ್ವರಯ್ಯನವರನ್ನು ಸ್ಮರಿಸುತ್ತ ಬಾ
ಹೇ ಕಾವೇರಿ ಮಾತೆ, ಕರುನಾಡ ಜೀವನದಿಯಾಗಿ ಬಾ!


ನಮ್ಮ ಸಂಸ್ಕೃತಿ

ಹರಿಚರಣ್
ಈ ಹೊತ್ತಿಗೆ ಬಹು ಚರ್ಚಿತವಾದ ಅಥವಾ ವಿವಾದಾತ್ಮಕ ಪದ ಎನ್ನಬೇಕಾದರೆ ಅದು ಸಂಸ್ಕೃತಿ. ಇದರ ಇಂಗ್ಲಿಷ್  ಮೂಲ ಪದವಾದ "ಕಲ್ಚರ್" ಎಂಬುದು ಇಂದಿನ ಲೋಕ ವ್ಯವಹಾರದಲ್ಲಿ ಅತಿಶಯವಾದ ಬಳಿಕೆ ಹೊಂದಿದೆ. ಈ ಪದಕ್ಕೆ ನಿರ್ದಿಷ್ಟವಾದ ಅರ್ಥ ಇಲ್ಲದಿದ್ದರೂ ಬಹುತೇಕವಾಗಿ ಒಪ್ಪಿಕೊಂಡಿರುವ ಅರ್ಥ  ಎಂದರೆ "ಗೌರವಿಸು", "ನಿಷ್ಠೆಮಾಡು " ,"ಲಕ್ಷ್ಯದಲ್ಲಿರಿಸಿಕೊ" ಎಂಬ ರೀತಿಯಲ್ಲಿ. ನಮ್ಮ ಕಾರ್ಪೊರೇಟ್ ಜಗತ್ತಿನಲ್ಲಿ " ಯಾವ ನಡವಳಿಕೆಯನ್ನು ಪ್ರಶಂಸಿಸಿ ಪ್ರೋತ್ಸಾಹಿಸುತ್ತೀವೋ ಅಥವಾ ಯಾವುದನ್ನು ಶಿಕ್ಷಿಸಿ  ಧಿಕ್ಕರಿಸುತ್ತೀವೋ" ಅದು ನಮ್ಮ ಕಲ್ಚರ್ (ಸಂಸ್ಕೃತಿ) ಆಗಿ ಉಳಿಯುವುದೆಂದು ದೃಢವಾಗಿ ನಂಬಿರುವ ಸಿದ್ದಾಂತ. ಸಾವಿರಾರು ಮೈಲಿ ನಮ್ಮ ಮಾತೃಭೂಮಿಯನ್ನು ಬಿಟ್ಟು ಇಲ್ಲಿಗೆ ವಲಸೆ ಬಂದು ತಾತ್ಕಾಲಿಕವಾಗಿಯೋ ಇಲ್ಲವೇ ಶಾಶ್ವತ ನೆಲೆ ಮಾಡಿಕೊಂಡಿರುವ ನಾವು ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವ ಬಗೆ ಹೇಗೆ ಅಥವಾ ಅದರ ಅವಶ್ಯಕತೆಯಾದರೂ ಏನು ? 

ನಮ್ಮಲ್ಲಿ  ಎಷ್ಟೋ ಮಂದಿ ನಮ್ಮ ಆಚಾರ ವಿಚಾರವನ್ನೂ, ಭಾಷಾ ಪ್ರೇಮವನ್ನೋ, ಸಂಗೀತ ಮೊದಲಾದ ಲಲಿತ ಕಲಾಭಿರುಚಿಯನ್ನೋ ಸಂಸ್ಕೃತಿಯೆಂದು ನಂಬಿರುತ್ತಾರೆ. ಆದರೆ ಅದು ಯಾವುದು ಸಂಸ್ಕೃತಿಯಾಗಿ ಪೂರ್ಣವಾಗಿ ಪರಿಗಣನೆಗೆ  ಬರದು. ಸಂಸ್ಕಾರದಿಂದ ಸಂಸ್ಕೃತಿ. "ಸಂಸ್ಕಾರ" ಎಂದರೆ ಶುದ್ಧಿಗೊಳಿಸುವುದು , ಉತ್ತಮ ಪಡಿಸುವುದು ಎಂದು ಅರ್ಥ. ಈ ಶುದ್ಧಿಯು ನಮ್ಮ ಅಂತರಂಗದ ಶುಚಿತ್ವ. ಎಲ್ಲ ಜೀವ ರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಇದರ ಪರಿಕಲ್ಪನೆ ಇರತಕ್ಕದು ಹಾಗು ಅದನ್ನು ಸಾಧಿಸಿಕೊಳ್ಳುವ ಹಂಬಲ ಇರುವುದು. ಆ ಶುದ್ಧಿಯು ಸಮಾಜದೊಂದಿಗೆ ನಮ್ಮ ನಡವಳಿಕೆಯನ್ನು ಹಿತವಾಗಿಸಿ ಒಂದು ಔಚಿತ್ಯವನ್ನು ಏರ್ಪಡಿಸುತ್ತದೆ, ಅದೇ ಸಂಸ್ಕೃತಿ. 

ಸಂಸ್ಕೃತಿಯು ಜಡವಾಗಿ ಉಳಿಯದೆ ಕಾಲ ದೇಶಗಳೊಂದಿಗೆ ಮಾರ್ಪಾಡುಗೊಳ್ಳುತ್ತದೆ. ಹೊರನಾಡಿನಲ್ಲಿ  ಸಂಸ್ಕೃತಿಯನ್ನು ನಿರ್ಧಯಿಸಿಕೊಳ್ಳುವ ಕೆಲಸ ಕಷ್ಟವೆಂದು ತೋರುವುದು ಸಹಜ. ನನ್ನಂಥವರು ತಮ್ಮ ಬಹುತೇಕ ಜೀವನವನ್ನು ಒಂದು ದೇಶದಲ್ಲಿ ಕಳೆದು, ಅದರಲ್ಲೂ ಮಾನಸಿಕ ವಿಕಾಸವು ಅಲ್ಲಿಯ  ಪರಿಸರದಿಂದ ರೂಪಗೊಂಡು ಮತ್ತೊಂದು ದೇಶಕ್ಕೆ ಕಾಲಿಟ್ಟಾಗ ಒಂದು ರೀತಿಯ ಭಯವನ್ನು ಉಂಟುಮಾಡುತ್ತದೆ. ಆ ಭಯದ ಕಾರಣ ಹೊಸ ದೇಶದ ಸಂಸ್ಕೃತಿಯು ನಮ್ಮ ಮೇಲೆ ಮಾಡುವ ಪ್ರಭಾವಕಿಂತಲೂ ನಮ್ಮ ಮಕ್ಕಳ ಮೇಲೆ ಮಾಡುವ ಪರಿಣಾಮದಿಂದ. ಈ ಭಯ ಸರಿಯೇ ತಪ್ಪೇ ಎಂದು ವಾದ ಮಾಡದೇ ನಾನು ನನ್ನ ಮಟ್ಟಿಗೆ ಕಂಡು ಕೊಂಡಿರುವ ಪರಿಹಾರ ಹಾಗು ನನ್ನ ವಿಚಾರವನ್ನು ಇಲ್ಲಿ ಮಂಡಿಸುತ್ತೇನೆ. 

ಮೊದಲಿಗೆ ಮಹಾತ್ಮಾ ಗಾಂಧಿಯವರ ಈ ಮಾತು ಸ್ಮರಣೆಗೆ ಬರುತ್ತದೆ " I do not want my house to be walled in on all sides, nor my windows to be shut. I want the cultures of all lands to blow about my house as freely as possible; but I refuse to be blown off my feet by any of them. I refuse to live in other people's houses as an interloper, a beggar or a slave."

ನಮ್ಮ ಬುದ್ಧಿಶಕ್ತಿಯು  ಮಕ್ಕಳಿಗಿಂತ ಕೊಂಚ ದೃಢವಾಗಿರುವುದರಿಂದ ( ಆ ನಂಬಿಕೆಯಿಂದ :)) ನಾವು ಹೊಸ ಆಚಾರ ವಿಚಾರವನ್ನು ನಮ್ಮ ಅಭಿರುಚಿ, ಧರ್ಮ ಚಿಂತನೆಯ ಪರಿಜ್ಞಾನದ ಜಾಲರಿಯಿಂದ ಸೋಸಿ ಅಳವಡಿಸಿ ಸಮತೋಲನವನ್ನು ಹೊಂದುವಲ್ಲಿ  ಯಶಸ್ವಿಗೊಳುತ್ತೇವೆ. ಆದರೆ ಮಕ್ಕಳ ವಿಚಾರದಲ್ಲಿ ಅವರ ಮಾನಸಿಕ ವಿಕಸನವು ಹಾಗು ಜನ ಸಂಪರ್ಕವು ಬೇರೊಂದು ಸಂಸ್ಕೃತಿಯನ್ನು ಅವಲಂಬಿಸಿರುವ ಜನರೊಂದಿಗೆ ನಡೆಯುವದರಿಂದ ನಮ್ಮ ತಳಮಳ ಹೆಚ್ಚುತ್ತದೆ. ಅವರು ನಮ್ಮ ಸಂಸ್ಕೃತಿಯ ಅಧಿಕೇಂದ್ರದಿಂದ ದೂರವಿರುವಂತೆ ಭಾಸವಾಗುತ್ತದೆ. ಅದಕ್ಕೆ ಕಾರಣ ಪಾಶ್ಚಿಮಾತ್ಯ ಹಾಗು ಈಶಾನ್ಯ ದೇಶಗಳು ಬೆಳದು ಬಂದ ಹಾದಿ. ಪಾಶ್ಚಿಮಾತ್ಯ ದೇಶಗಳು ವ್ಯಕ್ತಿ ಸ್ವಾತಂತ್ರ್ಯ್ರ, ಅವನ ಸುಖಾನುಭವಗಳಿಗೆ ಮನ್ನಣೆ ನೀಡಿದರೆ, ಈಶಾನ್ಯ ದೇಶಗಳು ಸಮಾಜದ ಹಿತೈಶೆ , ಒಟ್ಟಾರೆ ಒಂದು ಕುಟುಂಬ, ಗ್ರಾಮ ಹಾಗು ದೇಶದ ಬಗ್ಗೆ ಒತ್ತು ಕೊಡುತ್ತದೆ. ಇದರ ಜೊತೆಗೆ ಭಾರತ ದೇಶದಂಥ  ಪುರಾತನ ನಾಗರಿಕತೆ, ಕಾಲಚಕ್ರ ಉರುಳಿದಂತೆ ಅದರ ಮೇಲೆ ಆದ ವಿವಿಧ ಮತ, ಪ್ರಾಂತ್ಯ ಹಾಗು ಜನಾಂಗದ ಆಕ್ರಮಣವನ್ನು ಸಹಿಷ್ಣಿಸಿ

ಬೆಳಸಿಕೊಂಡಿರುವ ಸಂಸ್ಕೃತಿಯನ್ನು ಇನ್ನು ಯೌವನದಲ್ಲಿರುವ ನಾಗರಿಕತೆಗೆ ಹೋಲಿಸುವದು ಅಷ್ಟು ಸರಿಯಲ್ಲವೆಂದು ತೋರುತ್ತದೆ. ಉದಾಹರಣೆಗೆ ಮನೋವಿಜ್ಞಾನದಲ್ಲಿ ಗೋಚರವಾಗುತ್ತಿರುವ ಎಷ್ಟೋ ಸಿದ್ದಾಂತಗಳನ್ನು  ಉಪನಿಷತ್ ನಲ್ಲಿ  ಕಾಣಬಹುದು. (Maslow's hierarchy of needs which came in 20th century very much echoes the thoughts of Taittiriya upanishad or Empathy which is gaining so much momentum has been there as a concept of anubuthi in India for a long time). 

ಮಕ್ಕಳಿಗೆ  ಉತ್ತಮವಾದ ಸಂಸ್ಕೃತಿಯನ್ನು ಕೊಡುವುದೆಂದರೆ ಪಾಶ್ಚಿಮಾತ್ಯದಲ್ಲಿ ಒತ್ತು ಕೊಡುವ ಪುರುಷ ಪ್ರಯತ್ನ, ವೈಜ್ಞಾನಿಕ ಚಿಂತನೆ ಹಾಗು ನಮ್ಮ ಅಂತರಂಗದ ಬೆಳವಣಿಗೆಗೆ ಸೂಕ್ತವಾಗಿ ಒದಗಿಬರುವ ನಮ್ಮ ಆಧ್ಯಾತ್ಮಿಕ ಚಿಂತನೆಯಿಂದ ಅಭಿಮಂತ್ರಿಸುವುದು. 

ಕಡೆಯದಾಗಿ ನಾನು ಹೇಳಬಯಸುವುದೇನೆಂದರೆ ನಮ್ಮ ಸಂಸ್ಕೃತಿಯೊಂದಿಗೆ ಗುರುತಿಸಿಕೊಳ್ಳಲು, ಬಾಹ್ಯ ಪ್ರದರ್ಶನಕ್ಕಿಂತಲೂ ಹೆಚ್ಚಾಗಿ ನಮ್ಮ ಅಂತಃಕರಣದಲ್ಲಿ ನಿಲ್ಲಿಸಿ ಬೆಳಸುವುದು ಅತ್ಯವಶ್ಯ.


ನಿರೀಕ್ಷೆ

ಪೂರ್ಣಿಮಾ ಸುಬ್ರಹ್ಮಣ್ಯ 
ಅನಾದಿ ಕಾಲದಿಂದಲೂ 
ಅವನಿ,
ಇಬ್ಬನಿಯ ಮಣಿಗಳನ್ನಾರಿಸುತ್ತಲೇ ಇದ್ದಾಳೆ,
ಹಾರವಾಗಲೇ ಇಲ್ಲ !

ಅನಾದಿ ಕಾಲದಿಂದಲೂ 
ರಜನಿ,
ಚುಕ್ಕೆಗಳನ್ನಿಡುತ್ತಲೇ  ಇದ್ದಾಳೆ,
ಚಿತ್ರವಾಗಲೇ  ಇಲ್ಲ !

ಸಣ್ಣ ಪುಟ್ಟ ನಿರೀಕ್ಷೆಗಳು 
ಫಲಿಸದೆ , ಕೊರಗುವ 
ನನ್ನ ಮರುಳಿಗೆ 
ನಗೆ ಬಂತು !

ಮುಂಜಾನೆ ಅವನಿಗೆ 
ಇಬ್ಬನಿಯನೆತ್ತಿಕೊಟ್ಟೆ!
ರಾತ್ರಿ ರಜನಿಗೆ 
ಚುಕ್ಕೆಗಳನೆಣಿಸಿಕೊಟ್ಟೆ


ದೀಪಾವಳಿ - ರಾಜ್ಯೋತ್ಸವ ವರದಿ

                                                                                                             ರೇಖಾ ಪ್ರಕಾಶ್

"ಸಂಭ್ರಮ ಸಡಗರದಿಂದ ತುಂಬಿ ತುಳುಕಿದ ಕನ್ನಡದ ಕಂಪನ್ನು ಪಸರಿಸಿ ಆಚರಿಸಿದ ಕನ್ನಡ ರಾಜ್ಯೋತ್ಸವ
                                            ಮತ್ತು
   ದೀಪಗಳ ಜ್ಯೋತಿಯನ್ನು ಬೆಳಗಿ, ಜ್ಞಾನದ ಬೆಳಕಿನೆಡೆ ನಡೆದು ಆಚರಿಸಿದ ದೀಪಾವಳಿ ಹಬ್ಬ”.       

ಸಂಭ್ರಮದ ದೀಪಾವಳಿ ಹಬ್ಬದ ದೀಪಗಳ ಜ್ಯೋತಿಯು ಮತ್ತೊಮ್ಮೆ ನಮ್ಮ ಮಲ್ಲಿಗೆ ಕನ್ನಡ ಸಂಘದಲ್ಲಿ ಬೆಳಗಿತು. ಈ ಬಾರಿಯ ದೀಪಾವಳಿ ಹಬ್ಬದ ಆಚರಣೆ “ ದಿ ಐಸ್ಮನ್ ಸೆಂಟರ್ ಆಫ್ ಆರ್ಟ್ಸ್ " ನಲ್ಲಿ ವಿಜೃಂಭಣೆಯಿಂದ ನಡೆಯಿತು.

    “ ತೋರಣದ  ತಳಿರಲ್ಲಿ, ಹೊಸಿಲ ಹಣತೆಗಳಲಿ

       ಬಾಣ ಬಿರುಸುಗಳಲ್ಲಿ ನಲಿವು ಮೂಡಿ ..

      ಕತ್ತಲೆಯ ಪುಟಗಳಲಿ ಬೆಳಕಿನ ಅಕ್ಷರಗಳಲಿ

       ದೀಪಗಳ ಸಂದೇಶ ಥಳಥಳಿಸಲಿ....

      ಬೆಳಕಿನ ಅಸ್ತಿತ್ವವನೆ ಅಣಕಿಸುವ ಕತ್ತಲೆಗೆ

       ತಕ್ಕ ಉತ್ತರವಿಲ್ಲಿ ಕೇಳಿ ಬರಲಿ”

 “ದೀಪಾವಳಿಯ ಜ್ಯೋತಿ ಅಭಯ ಹಸ್ತವನೆತ್ತಿ ಎಲ್ಲರಿಗೂ ಎಲ್ಲಕ್ಕೂ  ಶುಭಕೋರಲಿ”

 ಅಂಧಕಾರವ ತೊಲಗಿಸಿ ಜ್ಞಾನದ ದೀವಿಗೆಯ ಹಚ್ಚಿ ಬೆಳಕಿನೆಡೆಗೆ ದಾರಿ ತೋರುವ ನಮ್ಮ ದೀಪಾವಳಿಯ ಹಬ್ಬವನ್ನು ಮತ್ತು ಕನ್ನಡದ ಧ್ವಜಕ್ಕೆ ಗೌರವವನ್ನುತೋರಿ, ಕನ್ನಡದ ನಡೆ ನುಡಿಯನ್ನು ಎತ್ತಿ ತೋರಿ, ಕನ್ನಡದ ಪ್ರೇಮವನು ಸವಿದು , ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಿಸಿದ ನಮ್ಮ ಮಲ್ಲಿಗೆ ಕನ್ನಡ ಸಂಘಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು.  “ ಬೆಳಗು ಬಾ ಹಣತೆಯನು, ಬೆಳಗು ಬಾ ಜ್ಯೋತಿಯನು ಎದೆಯ ಮಂದಿರದಲ್ಲಿ, ಜಗಕೆ ಬೆಳಕಾಗುವೀ ಶುಭ ಘಳಿಗೆಯಲ್ಲಿ, ದಿವ್ಯ ದೀಪಾವಳಿಯ ಶುಭ ಲಗ್ನದಲ್ಲಿ"  ಅನ್ನುವ ಕವಿಯೋಕ್ತಿಯಂತೆ ಎಲ್ಲರೂ  ಸಾಲಂಕೃತ ಅಲಂಕಾರದಿಂದ ಸಿಂಗರಿಸಿಕೊಂಡು, ಹೆಜ್ಜೆ ಹೆಜ್ಜೆಗೆ ಸಾಲು ಸಾಲು ದೀಪ ಬೆಳಗಿ , ಜ್ಞಾನದಬೆಳಕು ನೀಡಲೆಂದು ಬೇಡಿ, ಸಂತೋಷದಿಂದ ಆಚರಿಸಿದ ಈ ಹಬ್ಬವು ಎಲ್ಲರ ಮನಸಿನಲ್ಲಿ ಉತ್ಸಾಹದ ಚಿಲುಮೆಯನ್ನು ಎಬ್ಬಿಸಿತೆಂದರೆ ಆಶ್ಚರ್ಯವಿಲ್ಲ .

 ಈ ಬಾರಿಯ ಹಬ್ಬದ ವಿಶೇಷತೆ ಏನೆಂದರೆ ಈ ಕಾರ್ಯಕ್ರಮವು ಉತ್ತರ ಕರ್ನಾಟಕದ ಸೊಬಗನ್ನು ಎತ್ತಿಹಿಡಿದಿತ್ತು. ಹಬ್ಬದ ಆರಂಭವನ್ನು ನಮ್ಮ ಧಾರವಾಡದ ಬೆಡಗಿ ಅನುಬೆನಕಟ್ಟಿಯವರು ಉತ್ತರ ಕರ್ನಾಟಕದ ಮಾತಿನ ಶ್ಯಲಿಯಲ್ಲೇ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಅದರ ಸೊಬಗು ಜೇನು ಸಕ್ಕರೆ ಬೆರೆತಂತೆ ಮಧುರವಾಗಿತ್ತು. ಕುಂದಾ, ಪೇಡಗಳ ಸಿಹಿ ರುಚಿಯನ್ನು ಅವರ ಮಾತಿನಲ್ಲೇ ಬೆರೆಸಿ ಎಲ್ಲರಿಗೂ ಹಂಚಿದಂತಿತ್ತು ಆ ಭಾಷೆಯ ಸೊಬಗು. 

 ಈ ದೀಪಾವಳಿ ಮತ್ತು ರಾಜ್ಯೋತ್ಸವದಲ್ಲಿ , ಡಲ್ಲಾಸ್ ಕನ್ನಡಿಗರಿಗೆ ಬಹು ಸಂತೋಷ ಕೊಟ್ಟ ವಿಷಯವೇನೆಂದರೆ ಮುಂದಿನ ೧೦ನೇ “ಅಕ್ಕ“ ಕನ್ನಡ ಸಮ್ಮೇಳನ ೨೦೧೮ , ನಮ್ಮ ಈ ಸುಂದರ ಡಲ್ಲಾಸ್  ನಗರದಲ್ಲಿ ನಡೆಸಲು ನಿಶ್ಚಯಿಸಿದೆಯೆಂದು “ ಅಕ್ಕ” ಛೇರ್ಮನ್ ,  ಶ್ರೀ.ಅಮರ್ ನಾಥ್ ಗೌಡ ಅವರು ಘೋಷಿಸಿದಾಗ , ಅತ್ಯಂತ ಉತ್ಸುಕರಾದ  ನಮ್ಮ ಕನ್ನಡಿಗರೆಲ್ಲರೂ ತುಂಬು ಹೃದಯದಿಂದ  ತಮ್ಮ  ಸಂತೋಷವನ್ನು ಚಪ್ಪಾಳೆಯ ಸದ್ದಿನಿಂದ ಸಭಾಂಗಣವನ್ನು ತುಂಬಿಸಿದರು. ನಮ್ಮ ಮಲ್ಲಿಗೆ ಕನ್ನಡ ಸಂಘ, ಶ್ರೀ. ಶ್ರೀವತ್ಸ ರಾಮನಾಥರವರ ನೇತೃತ್ವದಲ್ಲಿ ಯಶಸ್ವೀ ಹೆಜ್ಜೆ ಮುಂದೆ ಮುಂದೆ ಇಡುತ್ತಿದೆಯೆಂದರೆ  ಎಲ್ಲ ಕನ್ನಡಿಗರಿಗೂ ಹೆಮ್ಮೆಯ ವಿಷಯ.“ ಬನ್ನಿ  ಬನ್ನಿ ಬನ್ನಿ” ಡಲ್ಲಾಸ್ ಕನ್ನಡಿಗರೇ , ಎಲ್ಲರೂ ಸೇರಿ ಒಂದಾಗಿ ಕನ್ನಡದ ಕಂಪನ್ನು ಡಲ್ಲಾಸ್ನಲ್ಲಿ ಮುಂಬರುವ “ ಅಕ್ಕ” ಕಾರ್ಯಕ್ರಮದಲ್ಲಿ ಬೀರೋಣ. 

 ಈ ಬಾರಿ ಕಾರ್ಯಕ್ರಮಕ್ಕೆ ಮುದ್ದು ಮಕ್ಕಳಿಗೆ ಪ್ರಾಧಾನ್ಯ ನೀಡಿ, ಅವರಿಗೆ ಕನ್ನಡ ಭಾಷಾಪ್ರೇಮವನ್ನು ತೋರುವಂತೆ ಮಾಡಿದ್ದು , ಮಲ್ಲಿಗೆಸಂಘದ ಬಗ್ಗೆ ಹೆಮ್ಮೆ ಪಡುವಂತಾಯಿತು." ಎಂದೆಂದಿಗೂ ನೀ ಕನ್ನಡವಾಗಿರು” ಕನ್ನಡ ಗೋವಿನ ಓ ಮುದ್ದಿನ ಕರು,ಕನ್ನಡವೊಂದಿದ್ದರೆ ನೀ ನಮಗೆ ಕಲ್ಪತರು",  ಎನ್ನುವಂತೆ ಇತ್ತು. ಪುಟ್ಟ ಪುಟ್ಟ ಹೆಜ್ಜೆಯನಿಟ್ಟು ಮುಂದೆ ಮುಂದೆ ನಡೆಯಲು ಮುದ್ದುಮಕ್ಕಳಿಗೆ ಪ್ರೇರಣೆ ಮಾಡಿದ್ದು ಮನಸಿಗೆ ಮುದ ಕೊಟ್ಟಿತ್ತು. ಪುಟ್ಟು ಪುಟಾಣಿಗಳ ಸುಮಧುರ ಕನ್ನಡದ ಭಾವಗೀತೆಗಳು, ಚಿತ್ರಗೀತೆಗಳು, ಜಾನಪದ ಗೀತೆಗಳು, ದೇಶ ಭಕ್ತಿ ಗೀತೆಗಳು, ಶಾಸ್ತ್ರೀಯ ನೃತ್ಯಗಳು , ಈಗಿನಕಾಲದ ನವೀನ ರೀತಿಯ ನೃತ್ಯಗಳು, ಎಷ್ಟು  ಚೆನ್ನಾಗಿ ಮೂಡಿಬಂತೆಂದರೆ , ಸಭಿಕರೆಲ್ಲರೂ ಚಪ್ಪಾಳೆ ತಟ್ಟಿ ಪುಟಾಣಿಗಳನ್ನು ಪ್ರೋತ್ಸಾಹಿಸಿದರು.

 ಅತಿ ಸುಂದರವಾಗಿ ವರ್ಣಿಸಿ ನೃತ್ಯ ರೂಪಕವಾಗಿ ತೋರಿಸಿದ ಪಂಚಭೂತಗಳ ಪರಿಚಯ, ಹವನ ಮಾಡಿ ಅಗ್ನಿದೇವನನ್ನು ಕರೆದ ರೀತಿ, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಧಾರೆ ಎರೆದಂತಿತ್ತು. ಮುದ್ದಿನ ಮಕ್ಕಳಿಗೆ ಸುಗಮ ಸಂಗೀತ “ ಎಲೆ ಗಳು ನೂರಾರು ಭಾವದ ಎಳೆಗಳು ನೂರಾರು” ಎಂಬ ಅರ್ಥ ಪೂರ್ಣ,ದೀರ್ಘ ಗೀತೆಯನ್ನು ಬಾಯಿಪಾಠ ಮಾಡಿಸಿ ಶ್ರುತಿ, ತಾಳ ಬದ್ದವಾಗಿ ಹಾಡಿಸಿದ್ದಲ್ಲದೆ, ಮಕ್ಕಳಿಗೆ ಕವನದ ಬಗ್ಗೆ ಅಭಿಮಾನ ಮೂಡಿಸಿದ್ದು , ಸಭಿಕರೆಲ್ಲರಿಗೂ ಖುಷಿಕೊಟ್ಟ ವಿಷಯ.  ದೇಶಭಕ್ತಿ ಗೀತೆ “ ಜೈ ಭಾರತ ಜನನಿಯ ತನುಜಾತೇ “ ಹಾಡಿನಲ್ಲಿ ಸಂಸ್ಕೃತಿಯನ್ನು ಎತ್ತಿ ತೋರಿಸುವ ಡೋಲು ಕುಣಿತ, ಕಂಸಾಳೆ ಪದ,ಯಕ್ಷಗಾನ , ಎಲ್ಲ ರೀತಿಯ ನೃತ್ಯಗಳ ಸೊಬಗನ್ನು ಸೇರಿಸಿ , ಸಂಗೀತ ಮತ್ತು ನೃತ್ಯ ಸಮ್ಮಿಶ್ರಣ ಮಾಡಿ, ಅದರ ಸವಿಯನ್ನು ಒಟ್ಟೊಟ್ಟಿಗೆ ಸಭಿಕರಿಗೆ ರಸದೌತಣ ಮಾಡಿಸಿದ್ದಲ್ಲದೆ , ಪುಟ್ಟ ಮಕ್ಕಳಿಗೆ ಭಾರತ ದೇಶದ ಬಗ್ಗೆ ಒಲವು ಮೂಡಿಸಿದ್ದು, ಅತ್ಯದ್ಭುತ ಪ್ರಯತ್ನ. ಕನ್ನಡದ ಹಳೆಯ ಸುಮಧುರ ಚಿತ್ರ ಗೀತೆಗಳನ್ನೊಳಗೊಂಡ ಮಕ್ಕಳ ಮತ್ತು ಅಮ್ಮಂದಿರ ನೃತ್ಯರೂಪಕ , ಸುಂದರ ರಸ ಸಂಜೆಗೆ ಹಲವಾರು ರಂಗು ಕೊಟ್ಟು  ಸುಂದರತೆಯನ್ನು ಹೆಚ್ಚಿಸಿ ಎಲ್ಲರ ಮನಸೆಳೆಯಿತು. ಹಲವಾರು ನೃತ್ಯ, ಸಂಗೀತ, ನಾಟಕಗಳು ಹಬ್ಬಕ್ಕೆ ರಂಗೇರಿಸಿ, ಮನಕ್ಕೆ ಮುದವೇ ರಿಸಿ, ರಾಜ್ಯೋತ್ಸವಕ್ಕೆ ಹೊಸ ರೂಪವನ್ನೇ ಕೊಟ್ಟು, ಮಲ್ಲಿಗೆ ಕನ್ನಡಸಂಘದ ಹೆಮ್ಮೆಯನ್ನುಹೆಚ್ಚಿಸಿತು. 

 ನಮ್ಮ ಕರ್ನಾಟಕದ ಹೆಮ್ಮೆಯ ಗಾಯಕರಾದ ಶ್ರೀ. ಗಣೇಶ್ ದೇಸಾಯಿಯವರ ಸುಗಮ ಸಂಗೀತ , ರಸಸಂಜೆಗೆ ಇಂಪು ತುಂಬಿಸಿ ಕಾಮನಬಿಲ್ಲಿನ ರಂಗಿನ ಬೆಡಗು ಮೂಡಿಸಿತು. ಅವರ ಸುಮಧುರ ಕಂಠದಿಂದ ಹೊರ ಹೊಮ್ಮಿದ “ ಹರಿ ಕುಣಿದಾ ನಮ್ಮ ಹರಿ ಕುಣಿದಾ” ಎಲ್ಲರನ್ನೂ ಸಂಗೀತದ ಅಲೆಯಲ್ಲಿ ಕುಣಿಸಿತು.ಅವರು ಬರೀ ಸಂಗೀತವಲ್ಲದೆ ಸಾಹಿತ್ಯವನ್ನು ವರ್ಣಿಸಿ, ಎಲ್ಲರಿಗೂಅರ್ಥಮಾಡಿಸಿ , ಹಾಡು ಹೇಳುವ ರೀತಿ ಅತ್ಯದ್ಭುತ ..... “ಕೋಡಗನ ಕೋಳಿ ನುಂಗಿತ್ತ ತಂಗೀ” ಹಾಡಿಗೆ ಎಲ್ಲರೂ ಆನಂದಗೊಂಡು , ಅವರ ಜೊತೆಗೂಡಿ ತಾಳ ಹಾಕಿ ನಲಿದು ನಾಟ್ಯವಾಡಿದ್ದು , ಅವರ ಕಂಠ ಸಿರಿಯನ್ನು  ಅನುಭವಿಸಿದ್ದಕ್ಕೆ ಸಾಕ್ಷಿಯಾಗಿತ್ತು. ಶ್ರೀ  ದೇಸಾಯಿಯವರಿಗೆ ನಮ್ಮೆಲ್ಲರ ಹೃದಯ ಪೂರ್ವಕ ಅಭಿನಂದನೆಗಳು. 

 ದೀಪಾವಳಿಯ ಉತ್ತರ ಕರ್ನಾಟಕದ ವಿಶೇಷ  ಊಟವಂತೂ ಎಲ್ಲರಿಗೂ ರಸ ದೌತಣವಾಗಿತ್ತು. ಅಂತೂ ಕಣ್ಣಿಗೆ ಹಬ್ಬ, ಕಿವಿಗೆ ಇಂಪು, ಸೊಗಸಾದ ಭೋಜನ, ಎಲ್ಲವು ಸೇರಿ , ನಮ್ಮ ಕನ್ನಡಿಗರಿಗೆ ಮರೆಯದ ದೀಪಾವಳಿ ಆಯಿತು. ಗೆಳೆಯರೇ , ಗೆಳತಿಯರೆ , ಮುಂದಿನ ಹಬ್ಬ ಆಚರಿಸುವವರೆಗೂ ಕಾಯೋಣವೇ? 

“ ಜೈ ಕರ್ನಾಟಕ, ಜೈ ಮಲ್ಲಿಗೆ ಕನ್ನಡ ಸಂಘ”

 ಧನ್ಯವಾದಗಳು. 

ಲಾಲ್ ಬಾಗ್ ನ ಗರ್ಭ ಗುಡಿ

ನವ್ಯ ಎಸ್. 


ರಾಷ್ಟ್ರಕವಿ ಕುವೆಂಪು ಅವರು ಲಾಲ್ ಬಾಗ್ ನ್ನು "ದೇವಾಲಯವೀ ಹೂವಿನ ತೋಟಂ" ಎಂದು ಕರೆದಿದ್ದಾರೆ . ಈ ದೇವಾಲಯದ ಗರ್ಭ ಗುಡಿಯೇ ಗಾಜಿನ ಮನೆ ಅಥವಾ ಗ್ಲಾಸ್ ಹೌಸ್ . ಹೇಗೆ ವಾರ್ಷಿಕ ಉತ್ಸವಗಳಲ್ಲಿ  ಗರ್ಭಗುಡಿಯನ್ನು ವಿಶೇಷವಾಗಿ ಅಲಂಕರಿಸುತ್ತಾರೋ ಹಾಗೆ ಇದೂ ಪುಷ್ಪೋತ್ಸವದಲ್ಲಿ ವರ್ಣರಂಜಿತವಾಗಿ ವಿಭಿನ್ನ ಶೋಭೆಯನ್ನೇ ಪಡೆದುಬಿಡುತ್ತದೆ . ಇನ್ನು ಈ ಬಾರಿಯ ಹೂವಿನ ದೋಣಿಯಂತೆ ಪ್ರತಿ ವರ್ಷವೂ ಬಹುತೇಕ ಗುಲಾಬಿ ಹೂಗಳಿಂದಲೇ ರೂಪಿಸಲ್ಪಡುವ ರಚನೆಗಳಂತೂ ಗುಡಿಯೊಳಗಿನ ಮೂರ್ತಿಯಂತೆ ಕಂಗೊಳಿಸುತ್ತದೆ .. 

ಈ ಗಾಜಿನ ಮನೆಯ ರಚನೆಯಾಗುವುದಕ್ಕೆ ಎರಡು ದಶಕಗಳ ಮುಂಚೆಯೇ , ಇದರ ಎದುರಿಗೆ ಇರುವ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ 1867ರ ಫೆಬ್ರುವರಿ 16 ರಂದು ಪ್ರಥಮ ಪುಷ್ಪ ಪ್ರದರ್ಶನವು ನಡೆಯಿತು . ಅದೇ ವರ್ಷ ಡಿಸೆಂಬರ 31 ರಂದು ಎರಡನೇ ಪ್ರದರ್ಶನವೂ ,1868ರ ಸೆಪ್ಟೆಂಬರ ,1869 ರ ಫೆಬ್ರುವರಿಯಲ್ಲಿ ಮೂರು ಮತ್ತು ನಾಲ್ಕನೇ ಪ್ರದರ್ಶನಗಳೂ ಆಯೋಜಿತಗೊಂಡವು . 1870ರ   ಪ್ರದರ್ಶನದಲ್ಲಿ ಮೈಸೂರು ಸಂಸ್ಥಾನದ್ದೇ ಆದ ದನಕರುಗಳು , ಕುರಿಗಳು , ಕುದುರೆಗಳು ದವಸ ಧಾನ್ಯಗಳೂ ಇದ್ದವು . ಮುಂದಿನ ವರ್ಷಗಳಲ್ಲಿ ಮಳೆಯಿಂದಾಗಿ ಟೆಂಟ್ ಗಳ ವ್ಯವಸ್ಥೆ ಮಾಡಲಾಯಿತು . ಇದರ ಶಾಶ್ವತ ವ್ಯವಸ್ಥೆಗಾಗಿ 1890 ರಲ್ಲಿ ಇಲ್ಲಿನ ಮುಖ್ಯಸ್ಥರಾಗಿದ್ದ ಜಾನ್ ಕೆಮರಾನ್ ರವರ ಆದೇಶದಂತೆ ಲಂಡನ್ ನ ಕ್ರಿಸ್ಟಲ್ ಪ್ಯಾಲೇಸ್ ಮಾದರಿಯಲ್ಲಿ ಇಂಗ್ಲೆಂಡಿನ ಮೆಕ್ ಫರ್ಲಾನ್ ಕಂಪನಿ, ಗ್ಲ್ಯಾಸ್ಕೋ , ಇವರು ಈ ಗಾಜಿನ ಮನೆಯನ್ನು ನಿರ್ಮಿಸಿದರು . ಇಂದಿಗೂ ಮುಖ್ಯ ಪ್ರವೇಶ ದ್ವಾರದ ಗೇಟುಗಳು ಮತ್ತು ಇಲ್ಲಿನ ಕಂಬಗಳ ಮೇಲೇ ಈ ಹೆಸರಿರುವುದನ್ನು ಕಾಣಬಹುದು . ಮೊದಲು ಇದನ್ನು ಆಲ್ಬರ್ಟ್ ವಿಕ್ಟರ ಕನ್ಸರ್ವೇಟೊರಿ ಎಂದು ಕರೆದರೂ ನಂತರ ಗ್ಲಾಸ್ ಹೌಸ್ ಎಂದೇ ಪ್ರಸಿದ್ಧವಾಯಿತು . 1935 ರಲ್ಲಿ ರಾವ್ ಬಹಾದ್ದೂರ್ ಹೆಚ್. ಸಿ. ಜವರಾಯ ಅವರು ಮುಖ್ಯಸ್ಥರಾಗಿದ್ದಾಗ ಇದರ ಪೂರ್ವಕ್ಕೆ ಇನ್ನೊಂದು ಭಾಗವನ್ನು ಸೇರಿಸಿದರು . ಮೂಲ ರಚನೆಗೆ ಎಲ್ಲ ರೀತಿಯಲ್ಲೂ ಸರಿಹೊಂದುತ್ತಿದ್ದ ಇದರ ನಿರ್ಮಾಣದಲ್ಲಿ ಸಂಪೂರ್ಣವಾಗಿ ಭದ್ರಾವತಿಯ ಮೈಸೂರು ಐರನ್ ವರ್ಕ್ಸ್ ಕಾರ್ಖಾನೆಯಲ್ಲಿ ತಯಾರಾದ ವಸ್ತುಗಳನ್ನೇ ಬಳಸಲಾಯಿತು . 

1891 ರಲ್ಲಿ ಗಾಜಿನ ಮನೆಯಲ್ಲೇ ಪ್ರಥಮ ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಯಿತು . ಆದರೆ ಮುಂದೆ ಬರಗಾಲ ಮತ್ತು ಪ್ಲೇಗ್ ನಿಂದಾಗಿ  ಕ್ರಮವಾಗಿ ಪ್ರದರ್ಶನಗಳು ನಡೆಯಲಿಲ್ಲ .1906 ರಲ್ಲಿ ವೇಲ್ಸ್ ನ ರಾಜಕುಮಾರ ಬೆಂಗಳೂರಿಗೆ ಬಂದಾಗ ಅವರ ಗೌರವಾರ್ಥ ನಡೆದು ಮತ್ತೆ ಈ ಪ್ರದರ್ಶನಗಳು ವ್ಯವಸ್ಥಿತವಾದವು .1912 ರಲ್ಲಿ ಜಿ.ಹೆಚ್.  ಕೃ೦ಬಿಗಲ್ ರವರು ಮುಖ್ಯಸ್ತರಾಗಿದ್ದಾಗ ನಡೆದ ಪ್ರದರ್ಶನದಲ್ಲಿ ಬಾಲಕಿಯರಿಗಾಗಿ ಹೂಗಳಿಂದ ಅಲಂಕೃತವಾದ ಬೈಸಿಕಲ್ ಪರೇಡನ್ನು ಏರ್ಪಡಿಸಿದ್ದರು . ಅವರ 12 ವರ್ಷದ ಪುತ್ರಿ ಹಿಲ್ಡಾ ಕೂಡ ಇದರಲ್ಲಿ ಪಾಲ್ಗೊಂಡಿದ್ದಳು .. 

ಈ ಗಾಜಿನ ಮನೆಗೆ ನೂರು ವರ್ಷಗಳು ತುಂಬಿದಾಗ ಅದರ ನೆನಪಾಗಿ ಮೈಸೂರು ಹಾರ್ಟಿಕಲ್ಟುರಲ್ ಸೊಸೈಟಿಯು ಗ್ಲಾಸ್ ಹೌಸ್ - ದಿ ಜ್ಯುವೆಲ್ ಆ ಲಾಲ್ ಬಾಗ್ ಎಂಬ ಒಂದು ಗ್ರಂಥವನ್ನು ಪ್ರಕಟಿಸಿತು . ಇದು ಸುಂದರ ಮತ್ತು ಪವಿತ್ರ ಗರ್ಭ ಗುಡಿಗೆ ಸಲ್ಲಿಸಿದ ಸೂಕ್ತ ಗೌರವವಷ್ಟೇ ಅಲ್ಲದೆ ಉಪಯುಕ್ತ ಚಿತ್ರ ಮತ್ತು ಲೇಖನಗಳನ್ನು ಉಳ್ಳ ದಾಖಲೆಯೂ ಹೌದು . 



Lucia - First kannada movie

ಯಾಮಿನಿ ಜೋಯಿಸ್ 

The first Kannada movie I watched was “Lucia” by Pawan Kumar.

This movie is about a young man by name Nikki. Nikki is an insomniac who just can’t fall asleep at night. One night, he meets a drug dealer and starts taking a drug called “Lucia” which was supposed to help him fall asleep. After taking the drug, Nikki starts seeing lucid dreams and starts dreaming of himself as a famous movie star, Nikhil. 

As the story progresses, the audience will begin to be confused between two characters. Who is living the reality? and who is in the dream? It is left to the audience’s ingenuity. It is for them to figure out what is reality and what is dream.

This movie combined many elements together; comedy, mystery, romance and some thriller. I enjoyed this movie very much because not only was it very funny, but the plot kept me guessing throughout. Finally, message from the movie is that “Everyone wants to be someone else”. Nikki wishes to be the famous movie star whereas the movie star wants to live a simple life like Nikki. 

To be honest, I was quite confused in the middle. But by the end, when I understood it completely,  I had to say, “Ohhhhhh!”.  Please do watch this movie when you have chance, it is an unique experience.