ಗುರುಪ್ರಸಾದ್ ವೆಂಕಟರಾಮು
ಡಾ. ಗುರುಪ್ರಸಾದ್ ಕಾಗಿನೆಲೆಯವರು ಬರೆದಿರುವ ಹಿಜಾಬ್ ಕಾದಂಬರಿಯನ್ನು ಓದಿ ನನ್ನ ಅನಿಸಿಕೆಯನ್ನು ಹಂಚಿಕೊಳ್ಳಬಯಸುತ್ತೇನೆ.
ಕನ್ನಡ ಸಾಹಿತ್ಯದಲ್ಲಿ ಇಂದಿನ ಕಾಲಮಾನಕ್ಕೆ ಪ್ರಸ್ತುತ ಎನಿಸುವ ಬರಹಗಳ ಬಾಹುಳ್ಯ ಕಡಿಮೆ ಎಂದರೂ ತಪ್ಪಿರಲಿಕ್ಕಿಲ್ಲ. ಈ ಕೊರತೆಯನ್ನು ನೀಗಿಸುವ ದಿಕ್ಕಿನಲ್ಲಿ ಹಿಜಾಬ್ ಒಂದು ಯಶಸ್ವೀ ಕೃತಿ. ಹೊರದೇಶಗಳಲ್ಲಿ, ಅದರಲ್ಲೂ ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರ ಮನಮುಟ್ಟುವ ವಿಷಯಗಳು ಈ ಕಾದಂಬರಿಯಲ್ಲಿವೆ.
ವಲಸಿಗರ ಸಮಸ್ಯೆಗಳು, ವೀಸಾ, ಗ್ರೀನ್ ಕಾರ್ಡುಗಳ ತಲೆ ಬಿಸಿ, ಭಾವನಾತ್ಮಕ ದ್ವಂದ್ವಗಳು, ಧಾರ್ಮಿಕ ನಂಬಿಕೆಗಳು, ಸಂಘರ್ಷಗಳು ಹೀಗೆ ಗಂಭೀರ ವಿಷಯಗಳ ಸುತ್ತ ಸುತ್ತುವ ಹಿಜಾಬ್ ಕೊನೆಗೆ ಆತಂಕವಾದ, ಮತೀಯವಾದ, ಜನಾಂಗೀಯ ನಿಂದನೆ, ಶ್ವೇತವರ್ಣೀಯರಲ್ಲಿ ಹೆಚ್ಚುತ್ತಿರುವ ಅಸಮಧಾನಗಳವರೆಗೆ ಮುಟ್ಟುತ್ತದೆ. ಯಾವುದೇ ನಾಟಕೀಯತೆ ಅಥವಾ ಅಬ್ಬರಗಳಿಲ್ಲದೆ ಬಹಳ ಸಹಜವಾಗಿ ಕಥೆ ಹೇಳಿದ್ದಾರೆ ಲೇಖಕರು. ಈ ಸಹಜ ಶೈಲಿಯೇ ನನ್ನನ್ನು ಹಿಡಿದಿಟ್ಟುಕೊಂಡಿದ್ದು ಹಾಗೂ ಚಿಂತನೆಗೆ ಹಚ್ಚಿದ್ದು.
ಸತ್ಯ ಸಂಗತಿಗಳೂ, ಕಾಲ್ಪನಿಕ ವಿಷಯಗಳೂ ಬಹಳ ನಾಜೂಕಾಗಿ ಹೆಣೆಯಲ್ಪಟ್ಟಿವೆ. ಯಾವುದು ಸತ್ಯ, ಯಾವುದು ಕಲ್ಪನೆ ಎಂದು ಯೋಚಿಸುತ್ತಲೇ ರೋಮಾಂಚನವಾಯಿತು ನನಗೆ. (ಅಮೋಕಾ ಎಂಬ ಊರು ನಿಜಕ್ಕೂ ಇದೆಯಾ?, ಮಿನ್ನೆಸೋಟಾದಲ್ಲಿರುವ ಸೊಮಾಲಿಗಳ ಕಥೆ ಏನು ? ಎಂದು ಗೂಗಲ್ ನಲ್ಲಿ ಹುಡುಕಿದ್ದು ಸುಳ್ಳಲ್ಲ !)
ಕೊನೆಯ ಅಧ್ಯಾಯವಂತೂ ಬಹಳ ಪರಿಣಾಮಕಾರಿಯಾಗಿದೆ. ಕಾದಂಬರಿಯುದ್ದಕ್ಕೂ ಒಳಗೇ ಹರಿಯುವ ತಳಮಳಗಳಿಗೆ ಉತ್ತಮ ರೂಪಕವನ್ನು ಕಟ್ಟಿಕೊಡಲಾಗಿದೆ.
ಅಮೆರಿಕಾ ಎಂಬ ಮಾಯಾವಿ ದೇಶವನ್ನು ಅರಿತುಕೊಂಡವರಾರು? ಅವರವರು ದಕ್ಕಿಸಿಕೊಂಡಷ್ಟೇ ಅವರ ಪಾಲು ಎನ್ನುವ ಭಾವ ನನಗೆ ಆಪ್ತವಾಯಿತು.
ಬಹುಪಾಲು ವೃತ್ತಿ ಜೀವನದ ಮೂಲಕವೇ ಅಮೆರಿಕವನ್ನು ಅನುಭವಿಸುವ ನನಗೆ, ನನ್ನಂಥವರಿಗೆ ಒಂದು ಹೊಸ ದೃಷ್ಟಿಕೋನವನ್ನು ಹೊಳೆಸುತ್ತದೆ ಈ ಕಾದಂಬರಿ. ಅಮೆರಿಕನ್ನಡಿಗರೆಲ್ಲರೂ ಕೊಂಡು ಓದಲೇಬೇಕಾದ ಕೃತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ