ನಮ್ಮ ಸಂಸ್ಕೃತಿ

ಹರಿಚರಣ್
ಈ ಹೊತ್ತಿಗೆ ಬಹು ಚರ್ಚಿತವಾದ ಅಥವಾ ವಿವಾದಾತ್ಮಕ ಪದ ಎನ್ನಬೇಕಾದರೆ ಅದು ಸಂಸ್ಕೃತಿ. ಇದರ ಇಂಗ್ಲಿಷ್  ಮೂಲ ಪದವಾದ "ಕಲ್ಚರ್" ಎಂಬುದು ಇಂದಿನ ಲೋಕ ವ್ಯವಹಾರದಲ್ಲಿ ಅತಿಶಯವಾದ ಬಳಿಕೆ ಹೊಂದಿದೆ. ಈ ಪದಕ್ಕೆ ನಿರ್ದಿಷ್ಟವಾದ ಅರ್ಥ ಇಲ್ಲದಿದ್ದರೂ ಬಹುತೇಕವಾಗಿ ಒಪ್ಪಿಕೊಂಡಿರುವ ಅರ್ಥ  ಎಂದರೆ "ಗೌರವಿಸು", "ನಿಷ್ಠೆಮಾಡು " ,"ಲಕ್ಷ್ಯದಲ್ಲಿರಿಸಿಕೊ" ಎಂಬ ರೀತಿಯಲ್ಲಿ. ನಮ್ಮ ಕಾರ್ಪೊರೇಟ್ ಜಗತ್ತಿನಲ್ಲಿ " ಯಾವ ನಡವಳಿಕೆಯನ್ನು ಪ್ರಶಂಸಿಸಿ ಪ್ರೋತ್ಸಾಹಿಸುತ್ತೀವೋ ಅಥವಾ ಯಾವುದನ್ನು ಶಿಕ್ಷಿಸಿ  ಧಿಕ್ಕರಿಸುತ್ತೀವೋ" ಅದು ನಮ್ಮ ಕಲ್ಚರ್ (ಸಂಸ್ಕೃತಿ) ಆಗಿ ಉಳಿಯುವುದೆಂದು ದೃಢವಾಗಿ ನಂಬಿರುವ ಸಿದ್ದಾಂತ. ಸಾವಿರಾರು ಮೈಲಿ ನಮ್ಮ ಮಾತೃಭೂಮಿಯನ್ನು ಬಿಟ್ಟು ಇಲ್ಲಿಗೆ ವಲಸೆ ಬಂದು ತಾತ್ಕಾಲಿಕವಾಗಿಯೋ ಇಲ್ಲವೇ ಶಾಶ್ವತ ನೆಲೆ ಮಾಡಿಕೊಂಡಿರುವ ನಾವು ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವ ಬಗೆ ಹೇಗೆ ಅಥವಾ ಅದರ ಅವಶ್ಯಕತೆಯಾದರೂ ಏನು ? 

ನಮ್ಮಲ್ಲಿ  ಎಷ್ಟೋ ಮಂದಿ ನಮ್ಮ ಆಚಾರ ವಿಚಾರವನ್ನೂ, ಭಾಷಾ ಪ್ರೇಮವನ್ನೋ, ಸಂಗೀತ ಮೊದಲಾದ ಲಲಿತ ಕಲಾಭಿರುಚಿಯನ್ನೋ ಸಂಸ್ಕೃತಿಯೆಂದು ನಂಬಿರುತ್ತಾರೆ. ಆದರೆ ಅದು ಯಾವುದು ಸಂಸ್ಕೃತಿಯಾಗಿ ಪೂರ್ಣವಾಗಿ ಪರಿಗಣನೆಗೆ  ಬರದು. ಸಂಸ್ಕಾರದಿಂದ ಸಂಸ್ಕೃತಿ. "ಸಂಸ್ಕಾರ" ಎಂದರೆ ಶುದ್ಧಿಗೊಳಿಸುವುದು , ಉತ್ತಮ ಪಡಿಸುವುದು ಎಂದು ಅರ್ಥ. ಈ ಶುದ್ಧಿಯು ನಮ್ಮ ಅಂತರಂಗದ ಶುಚಿತ್ವ. ಎಲ್ಲ ಜೀವ ರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಇದರ ಪರಿಕಲ್ಪನೆ ಇರತಕ್ಕದು ಹಾಗು ಅದನ್ನು ಸಾಧಿಸಿಕೊಳ್ಳುವ ಹಂಬಲ ಇರುವುದು. ಆ ಶುದ್ಧಿಯು ಸಮಾಜದೊಂದಿಗೆ ನಮ್ಮ ನಡವಳಿಕೆಯನ್ನು ಹಿತವಾಗಿಸಿ ಒಂದು ಔಚಿತ್ಯವನ್ನು ಏರ್ಪಡಿಸುತ್ತದೆ, ಅದೇ ಸಂಸ್ಕೃತಿ. 

ಸಂಸ್ಕೃತಿಯು ಜಡವಾಗಿ ಉಳಿಯದೆ ಕಾಲ ದೇಶಗಳೊಂದಿಗೆ ಮಾರ್ಪಾಡುಗೊಳ್ಳುತ್ತದೆ. ಹೊರನಾಡಿನಲ್ಲಿ  ಸಂಸ್ಕೃತಿಯನ್ನು ನಿರ್ಧಯಿಸಿಕೊಳ್ಳುವ ಕೆಲಸ ಕಷ್ಟವೆಂದು ತೋರುವುದು ಸಹಜ. ನನ್ನಂಥವರು ತಮ್ಮ ಬಹುತೇಕ ಜೀವನವನ್ನು ಒಂದು ದೇಶದಲ್ಲಿ ಕಳೆದು, ಅದರಲ್ಲೂ ಮಾನಸಿಕ ವಿಕಾಸವು ಅಲ್ಲಿಯ  ಪರಿಸರದಿಂದ ರೂಪಗೊಂಡು ಮತ್ತೊಂದು ದೇಶಕ್ಕೆ ಕಾಲಿಟ್ಟಾಗ ಒಂದು ರೀತಿಯ ಭಯವನ್ನು ಉಂಟುಮಾಡುತ್ತದೆ. ಆ ಭಯದ ಕಾರಣ ಹೊಸ ದೇಶದ ಸಂಸ್ಕೃತಿಯು ನಮ್ಮ ಮೇಲೆ ಮಾಡುವ ಪ್ರಭಾವಕಿಂತಲೂ ನಮ್ಮ ಮಕ್ಕಳ ಮೇಲೆ ಮಾಡುವ ಪರಿಣಾಮದಿಂದ. ಈ ಭಯ ಸರಿಯೇ ತಪ್ಪೇ ಎಂದು ವಾದ ಮಾಡದೇ ನಾನು ನನ್ನ ಮಟ್ಟಿಗೆ ಕಂಡು ಕೊಂಡಿರುವ ಪರಿಹಾರ ಹಾಗು ನನ್ನ ವಿಚಾರವನ್ನು ಇಲ್ಲಿ ಮಂಡಿಸುತ್ತೇನೆ. 

ಮೊದಲಿಗೆ ಮಹಾತ್ಮಾ ಗಾಂಧಿಯವರ ಈ ಮಾತು ಸ್ಮರಣೆಗೆ ಬರುತ್ತದೆ " I do not want my house to be walled in on all sides, nor my windows to be shut. I want the cultures of all lands to blow about my house as freely as possible; but I refuse to be blown off my feet by any of them. I refuse to live in other people's houses as an interloper, a beggar or a slave."

ನಮ್ಮ ಬುದ್ಧಿಶಕ್ತಿಯು  ಮಕ್ಕಳಿಗಿಂತ ಕೊಂಚ ದೃಢವಾಗಿರುವುದರಿಂದ ( ಆ ನಂಬಿಕೆಯಿಂದ :)) ನಾವು ಹೊಸ ಆಚಾರ ವಿಚಾರವನ್ನು ನಮ್ಮ ಅಭಿರುಚಿ, ಧರ್ಮ ಚಿಂತನೆಯ ಪರಿಜ್ಞಾನದ ಜಾಲರಿಯಿಂದ ಸೋಸಿ ಅಳವಡಿಸಿ ಸಮತೋಲನವನ್ನು ಹೊಂದುವಲ್ಲಿ  ಯಶಸ್ವಿಗೊಳುತ್ತೇವೆ. ಆದರೆ ಮಕ್ಕಳ ವಿಚಾರದಲ್ಲಿ ಅವರ ಮಾನಸಿಕ ವಿಕಸನವು ಹಾಗು ಜನ ಸಂಪರ್ಕವು ಬೇರೊಂದು ಸಂಸ್ಕೃತಿಯನ್ನು ಅವಲಂಬಿಸಿರುವ ಜನರೊಂದಿಗೆ ನಡೆಯುವದರಿಂದ ನಮ್ಮ ತಳಮಳ ಹೆಚ್ಚುತ್ತದೆ. ಅವರು ನಮ್ಮ ಸಂಸ್ಕೃತಿಯ ಅಧಿಕೇಂದ್ರದಿಂದ ದೂರವಿರುವಂತೆ ಭಾಸವಾಗುತ್ತದೆ. ಅದಕ್ಕೆ ಕಾರಣ ಪಾಶ್ಚಿಮಾತ್ಯ ಹಾಗು ಈಶಾನ್ಯ ದೇಶಗಳು ಬೆಳದು ಬಂದ ಹಾದಿ. ಪಾಶ್ಚಿಮಾತ್ಯ ದೇಶಗಳು ವ್ಯಕ್ತಿ ಸ್ವಾತಂತ್ರ್ಯ್ರ, ಅವನ ಸುಖಾನುಭವಗಳಿಗೆ ಮನ್ನಣೆ ನೀಡಿದರೆ, ಈಶಾನ್ಯ ದೇಶಗಳು ಸಮಾಜದ ಹಿತೈಶೆ , ಒಟ್ಟಾರೆ ಒಂದು ಕುಟುಂಬ, ಗ್ರಾಮ ಹಾಗು ದೇಶದ ಬಗ್ಗೆ ಒತ್ತು ಕೊಡುತ್ತದೆ. ಇದರ ಜೊತೆಗೆ ಭಾರತ ದೇಶದಂಥ  ಪುರಾತನ ನಾಗರಿಕತೆ, ಕಾಲಚಕ್ರ ಉರುಳಿದಂತೆ ಅದರ ಮೇಲೆ ಆದ ವಿವಿಧ ಮತ, ಪ್ರಾಂತ್ಯ ಹಾಗು ಜನಾಂಗದ ಆಕ್ರಮಣವನ್ನು ಸಹಿಷ್ಣಿಸಿ

ಬೆಳಸಿಕೊಂಡಿರುವ ಸಂಸ್ಕೃತಿಯನ್ನು ಇನ್ನು ಯೌವನದಲ್ಲಿರುವ ನಾಗರಿಕತೆಗೆ ಹೋಲಿಸುವದು ಅಷ್ಟು ಸರಿಯಲ್ಲವೆಂದು ತೋರುತ್ತದೆ. ಉದಾಹರಣೆಗೆ ಮನೋವಿಜ್ಞಾನದಲ್ಲಿ ಗೋಚರವಾಗುತ್ತಿರುವ ಎಷ್ಟೋ ಸಿದ್ದಾಂತಗಳನ್ನು  ಉಪನಿಷತ್ ನಲ್ಲಿ  ಕಾಣಬಹುದು. (Maslow's hierarchy of needs which came in 20th century very much echoes the thoughts of Taittiriya upanishad or Empathy which is gaining so much momentum has been there as a concept of anubuthi in India for a long time). 

ಮಕ್ಕಳಿಗೆ  ಉತ್ತಮವಾದ ಸಂಸ್ಕೃತಿಯನ್ನು ಕೊಡುವುದೆಂದರೆ ಪಾಶ್ಚಿಮಾತ್ಯದಲ್ಲಿ ಒತ್ತು ಕೊಡುವ ಪುರುಷ ಪ್ರಯತ್ನ, ವೈಜ್ಞಾನಿಕ ಚಿಂತನೆ ಹಾಗು ನಮ್ಮ ಅಂತರಂಗದ ಬೆಳವಣಿಗೆಗೆ ಸೂಕ್ತವಾಗಿ ಒದಗಿಬರುವ ನಮ್ಮ ಆಧ್ಯಾತ್ಮಿಕ ಚಿಂತನೆಯಿಂದ ಅಭಿಮಂತ್ರಿಸುವುದು. 

ಕಡೆಯದಾಗಿ ನಾನು ಹೇಳಬಯಸುವುದೇನೆಂದರೆ ನಮ್ಮ ಸಂಸ್ಕೃತಿಯೊಂದಿಗೆ ಗುರುತಿಸಿಕೊಳ್ಳಲು, ಬಾಹ್ಯ ಪ್ರದರ್ಶನಕ್ಕಿಂತಲೂ ಹೆಚ್ಚಾಗಿ ನಮ್ಮ ಅಂತಃಕರಣದಲ್ಲಿ ನಿಲ್ಲಿಸಿ ಬೆಳಸುವುದು ಅತ್ಯವಶ್ಯ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ