ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಸಂಭ್ರಮ, ಸಡಗರ


ರೇಖಾ ಪ್ರಕಾಶ್
ಹಬ್ಬ ಬಂತು ಒಹ್ ಹಬ್ಬ!!!! ಹಬ್ಬ ಬಂತು ಒಹ್ ಹಬ್ಬ!!!!
ಹಬ್ಬ!!!! ಎಂದು ಕೇಳಿದಾಕ್ಷಣ ಆಗುವ ಅನುಭವ, ಆಹಾ!!! ವರ್ಣಿಸಲಸಾಧ್ಯ. ಹಬ್ಬಗಳು ನಮ್ಮ ಪೂರ್ವಿಕರ ಸುಂದರ ಕಲ್ಪನೆಗಳು, ಬದುಕನ್ನು ಸುಂದರವಾಗಿ ಇರಿಸಲು ಮಾಡುವ ಸಂಪ್ರದಾಯಬದ್ಧ ಪ್ರಯತ್ನಗಳು. ಸಾಲು ಸಾಲು ದೀಪಗಳ ದೀಪಾವಳಿಯ ಉತ್ಸವ ಕನ್ನಡಿಗರ ಮನೆಮನೆಯಲ್ಲಾದರೆ, ರಸ್ತೆ ರಸ್ತೆಗಳಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ, ಸಡಗರ, ಉತ್ಸವ ಕರ್ನಾಟಕದ ಎಲ್ಲೆಡೆಯಲ್ಲಿ. ಅಂತೂ ನಮ್ಮ ಕನ್ನಡಿಗರಿಗೆ ಹಬ್ಬಗಳನ್ನು ಆಚರಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ, ಉಲ್ಲಾಸ, ಉತ್ಸಾಹ. ಕನ್ನಡಿಗರು ಕರ್ನಾಟಕದಲ್ಲಲ್ಲದೆ ದೂರ, ಬಹುದೂರ, ಸಾಗರದಾಚೆ ಇದ್ದರೂ ಹಬ್ಬಗಳನ್ನು ಸಂತೋಷದಿಂದ ಆಚರಿಸುವುದರಲ್ಲಿ ಕಮ್ಮಿ ಏನೂ ಇಲ್ಲ. ನಮ್ಮ ಡ್ಯಾಲಸ್ ಕನ್ನಡಿಗರು ಹಬ್ಬಗಳನ್ನು ಆಚರಿಸುವುದರಲ್ಲಿ ಎತ್ತಿದ ಕೈ ಅನ್ನುವುದಕ್ಕೆ 2018 ಸೆಪ್ಟೆಂಬರ್ನಲ್ಲಿ, ಕನ್ನಡ ವಿಶ್ವ ಸಮ್ಮೇಳನದಲ್ಲಿ ಅಕ್ಕರೆಯ ಅಕ್ಕಳನ್ನು ಸ್ವಾಗತಿಸಿ, ಆಚರಿಸಿದ ರೀತಿಯೇ ಸಾಕ್ಷಿಯಾಗಿದೆ. ಅದರಲ್ಲೂ ನಮ್ಮ ಹೆಮ್ಮೆಯ ಮಲ್ಲಿಗೆ ಕನ್ನಡ ಸಂಘದವರಿಗೆ ಜ್ಯೋತಿ ಬೆಳಗಿಸಿ, ಕನ್ನಡದ ಬಾವುಟ ಹಾರಿಸಿ, ಮಲ್ಲಿಗೆಯ ಕಂಪನ್ನು ಪಸರಿಸುವುದೆಂದರೆ ಆನಂದದ ವಿಷಯ. ದೀಪಾವಳಿಯ ಹಬ್ಬದ ಬಗ್ಗೆ ನಮ್ಮೆಲ್ಲರಿಗೂ ಬಹಳವೇ ತಿಳಿಯುವುದಿದೆ.
ಬೆಳಕಿನ ದೀಪಾವಳಿ ಹಬ್ಬವು ಸಂಭ್ರಮ, ಸಮಾನತೆ, ಸಂತಸದ ಸಂಕೇತವಾಗಿರುತ್ತದೆ.

ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದಂ
ಶತ್ರು ಬುದ್ಧಿ ವಿನಾಶಾಯ ದೀಪ ಜ್ಯೋತಿನಮೋಸ್ತುತೆ
ದೀಪ ಜ್ಯೋತಿ ಪರಬ್ರಹ್ಮ ದೀಪ ಜ್ಯೋತಿ ಜನಾರ್ಧನ
ದೀಪೋ ಹರತಿ ಪಾಪಾನಿ ಸಂಧ್ಯಾ ದೀಪ ನಮೋಸ್ತುತೇ

ನಾವು ಬೆಳಗುವ ದೀಪದ ಜ್ಯೋತಿಯು ನಮ್ಮೊಳಗಿನಲ್ಲಿ ಅವಿತಿರುವ ಅಜ್ಞಾನವನ್ನು ತೊಲಗಿಸಿ ಸುಜ್ಞಾದೆಡೆಗೆ ಕರೆದೊಯ್ಯುವ ಮಾರ್ಗದರ್ಶಿಯಾಗುತ್ತದೆ. ನಾವು ಹಚ್ಚುವ ಪಟಾಕಿಯಂತೆ ದುರ್ಗುಣಗಳು ಪಟಪಟನೆ ಸಿಡಿದು ನಾಶವಾಗಿ ಸದ್ಗುಣಗಳಿಗೆ ದಾರಿ ದೀಪವಾಗುತ್ತದೆ. ದೀಪಾವಳಿಯ ಹಬ್ಬದಲ್ಲಿ ಬೆಳಗುವ ಹಣತೆ, ಯಾವುದೇ ಬೇಧಭಾವವಿಲ್ಲದೆ ಬೆಳಕನ್ನು ಹರಡುವುದರಿಂದ ಸಮಾನತೆಯ ಸಂಕೇತವಾಗಿರುತ್ತದೆ. ಎಲ್ಲೆಡೆ ಶಾಂತಿ, ಸಮೃದ್ಧಿ ನೆಲೆಸಿ ಮಂಗಲದಾಯಕವಾಗಲೆಂದು ದೇವರಲ್ಲಿ ಬೇಡುತ್ತಾ ದೀಪಾವಳಿಯ ಶುಭ ಜ್ಯೋತಿಯನ್ನು ನಾವೆಲ್ಲರೂ ಬೆಳಗಿ, ಸಂಭ್ರಮದಿಂದ ಕಲೆತು ನಲಿದು ದೀಪಾವಳಿಯ ಹಬ್ಬವನ್ನು ಆಚರಿಸಬೇಕು.ದೀಪಾವಳಿಯಲ್ಲಿ ಹಚ್ಚುವ ಆಕಾಶದ ಬುಟ್ಟಿಗಳು, ರಂಗು ರಂಗಿನ ರಂಗೋಲಿ, ಬಣ್ಣ ಬಣ್ಣದ ದೀಪಗಳು ಸಂತಸದ ಪ್ರತೀಕ. ಆಕಾಶ ಬುಟ್ಟಿಯಲ್ಲಿ ದೀಪವಿಟ್ಟು ಆಕಾಶದಲ್ಲಿ ಹಾರಿಬಿಟ್ಟರೆ, ಗತಿಸಿದ ಹಿರಿಯರಿಗೆ ಶಾಂತಿ ಸಿಗುವುವುದೆನ್ನುವ ನಂಬಿಕೆ ಕೂಡ ನಮ್ಮಲ್ಲಿದೆ. ಕಾರ್ತಿಕ ಮಾಸದಲ್ಲಿ ರೀತಿ ದೀಪ ಹಚ್ಚುವುದರಿಂದ, ಸತ್ತ ನಂತರ ಆತ್ಮ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವಾಗ ಕಾರ್ತೀಕದಲ್ಲಿ ಹಚ್ಚಿಟ್ಟ ಜ್ಯೋತಿ ಬೆಳಕು ತೋರುತ್ತದೆ ಎಂಬುದು ಜನಪದರ ನಂಬಿಕೆ.
ನಮ್ಮ ಸಂಪ್ರದಾಯದಲ್ಲಿ ಪ್ರತಿದಿನವೂ ದೇವರಿಗೆ ದೀಪ ಬೆಳಗುವುದರಿಂದ ಶುಭವಾಗುವುದೆನ್ನುವ ನಂಬಿಕೆ ಜನರಲ್ಲಿ ಬೇರೂರಿದೆ. ಇನ್ನು ದೀಪಾವಳಿಯ ದಿನ ಬೆಳಗುವ ದೀಪ ಇನ್ನೂ ಮಹತ್ವ ಪೂರ್ಣವಾಗಿದೆ.ಬಾಹ್ಯನೋಟಕ್ಕೆ ದೀಪಾವಳಿ, ದೀಪ ಹಚ್ಚುವ ಮತ್ತು ಪಟಾಕಿ ಸುಡುವ ಹಬ್ಬದಂತೆ ಕಂಡರೂ, ಅದರ ನಿಜವಾದ ಅರ್ಥ ಕಲ್ಪನೆಗೂ ಮೀರಿದೆ.

ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ...ಓಂ ಶಾಂತಿ, ಶಾಂತಿ ಶಾಂತಿಃ

ಮ೦ಗಳಕರವಾದ ದೀಪಾವಳಿಯ ಸ೦ದರ್ಭದಲ್ಲಿ, ಹೆಚ್ಚಿನ ಅಭ್ಯುದಯ ಹಾಗೂ ಸ೦ಪತ್ತನ್ನು ಸಾಧಿಸುವುದಕ್ಕಾಗಿ, ಸ೦ಪತ್ತು ಹಾಗೂ ಧನಸಮೃದ್ಧಿಯ ಅಧಿದೇವತೆಯಾದ ಲಕ್ಷ್ಮೀ ದೇವಿಯನ್ನುಶ್ರದ್ಧಾಭಕ್ತಿಯಿ೦ದ ಆರಾಧಿಸಲಾಗುತ್ತದೆ. ಹೆಚ್ಚಿನ ಸ೦ಪತ್ತಿಗಾಗಿ ಪೂಜೆಯನ್ನು ಕೈಗೊಳ್ಳುವ ದಿನವು ಧನತ್ರಯೋದಶಿಯಾಗಿರುತ್ತದೆ. ದೀಪಾವಳಿ ಹಬ್ಬವನ್ನು ಭಗವತಿಯಾದ ಕಾಳೀದೇವಿಯನ್ನು ಆರಾಧಿಸುವುದರ ಮೂಲಕವೂ ಆಚರಿಸಲಾಗುತ್ತದೆ.

ದೀಪಗಳ ಸಾಲು ಬೆಳಗುವ ಹಣತೆಗಳು.
ಪಾವಿತ್ರತೆ ಹೆಚ್ಚಿಸುವ ನಡತೆಗಳು.
ವಂದನೆಯ ಕರಗಳ ವೃದ್ಧಿಸುವ, ದೀಪಾವ
ಳಿಯ ಹಬ್ಬದ ಸಡಗರವ ಆಚರಿಸುವ,
ಬೆಳಗುವ ಜ್ಯೋತಿಯ, ಕಾರ್ತಿಕ ದೀಪವ.

ಸಂಪ್ರದಾಯಬದ್ಧ ಅರಿಶಿನ, ಕುಂಕುಮ ಹೂವಿನೊಡನೆ, ರಂಗು ರಂಗಿನ ರಂಗೋಲಿಯಿಂದ ಅಲಂಕೃತವಾದ ಅಂಗಳದ ತುಂಬಾ ಬೆಳಕು ಚೆಲ್ಲುವ ಹಣತೆಯ ದೀಪಗಳು, ದೀಪಾವಳಿಯ ಸೊಬಗನ್ನು ಹೆಚ್ಚಿಸಿ, ಹಬ್ಬದ ಸಡಗರಕ್ಕೆ ಮೆರಗು ನೀಡುತ್ತದೆ. ಆಹಾ!!! ಬಾಯಲ್ಲಿ ನೀರೂರಿಸುವ ದೀವಳಿಗೆಯ ಹೋಳಿಗೆ, ಹಲವುಬಗೆಯ ಸಿಹಿ ತಿಂಡಿಗಳಂತೂ ಹಬ್ಬದ ರಂಗನ್ನು ಮತ್ತಷ್ಟು ಏರಿಸುತ್ತದೆ. ದೀಪಾವಳಿಗಾಗಿ ಧರಿಸಿದ ಹೊಸ ವಸ್ತ್ರಗಳು ಮತ್ತು ಲಕ್ಷ್ಮೀ ಪೂಜೆಗಾಗಿ ಖರೀದಿಸಿದ ಆಭರಣಗಳು ದೀವಳಿಗೆಯ ಹೊಳಪನ್ನು ಹೆಚ್ಚಿಸುತ್ತವೆ. ಅಂತೂ ದೀಪಾವಳಿಯ ಸಾಲು ಸಾಲು ದೀಪಗಳೊಡನೆ, ನಮ್ಮೆಲ್ಲರ ಆಸೆ ಆಕಾಂಕ್ಷೆಗಳು ಸ್ಪರ್ಧಿಸುತ್ತವೆ. ಸಾಂಪ್ರದಾಯಿಕ ದೀಪಾವಳಿಯು ಸಂಭ್ರಮ, ಸಂತೋಷ, ಉತ್ಸಾಹ, ಸಮಾನತೆಯ ಸಂಕೇತವಾದ ಹಬ್ಬವಾಗಿ ದೇಶ ವಿದೇಶಗಳಲ್ಲೂ ಸಡಗರದಿಂದ ಆಚರಿಸುವಂತಾಗಿದೆ. ಇಂತಹ ಚೈತನ್ಯ ಮೂಡಿಸುವ ಮಂಗಲಪ್ರದವಾದ ದೀಪಾವಳಿಯ ದೀಪ ಜ್ಯೋತಿಯು ನಿಮ್ಮೆಲ್ಲರಿಗೂ ಸಕಲ ಸುಖ ಸಂತೋಷಗಳನ್ನು ತರಲಿ.

ದೀಪ ಜ್ಯೋತಿ ಬೆಳಗಲಿ,
ಸ್ನೇಹ ಪ್ರೀತಿ ಬೆಳೆಯಲಿ,
ಸಂಬಂಧ ಭಾಂಧವ್ಯ ಬೆಸೆಯಲಿ,
ಬೆಳಕ ಕಿರಣ ಹೊಳೆಯಲಿ,
ದೀಪ ಪ್ರಕಾಶ ಪ್ರಜ್ವಲಿಸಲಿ,
ದೀಪಾವಳಿಯ ಸಂಭ್ರಮ ಎಲ್ಲೆಲ್ಲೂ ಹರಡಲಿ.

ಹರಿದ್ರಾ ಕುಂಕುಮ, ಹಣತೆಯ ಬೆಳಕಿನ ಸಂಕೇತವಾದ ದೀಪಾವಳಿ ಹಬ್ಬದಂತೆ, ಹಳದಿ ಕೆಂಪು ಬಾವುಟ ಮತ್ತು ದೀಪೋತ್ಸವದಿಂದ ರಂಗು ಭರಿತ ಕನ್ನಡ ನಾಡ ಹಬ್ಬ ಕನ್ನಡಿಗರ ನೆಚ್ಚಿನ ಕನ್ನಡ ರಾಜ್ಯೋತ್ಸವ. ಬೆಳಗಿ ನಮ್ಮೀ ದೀವೀಗೆ, ನಮ್ಮ ದೀವಳಿಗೆಯಂತೆ, ಹಚ್ಚೇವು ಕನ್ನಡದ ದೀಪ, ಕರುನಾಡ ದೀಪ, ಒಲವೆತ್ತಿ ತೋರುವ ದೀಪ ಎಂದು ಹಾಡಿ ನಲಿಯುವ ಹಬ್ಬಗಳು, ನಮ್ಮೆಲ್ಲರಿಗೂ ಸಂಭ್ರಮದ ಅಲೆ ಎಬ್ಬಿಸಿ, ಮನದ ತುಂಬಾ ಆನಂದದ ಹೊಳೆ ಹರಿಸಿ, ನವ ಚೈತನ್ಯ ಮೂಡಿಸುತ್ತದೆ. ನಮ್ಮ ಸಂಸ್ಕೃತಿಯಲ್ಲಿ, ಸಾಂಪ್ರದಾಯಿಕ ಹಬ್ಬಗಳನ್ನು ಬರೀ ಮನೆ ಮನೆಯಲ್ಲಿ ಆಚರಿಸುವುದಲ್ಲದೆ, ನಾಡ ಹಬ್ಬಗಳನ್ನೂ ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಆಚರಿಸುವ ಮನಸ್ಸನ್ನು ಹೊಂದಿದ್ದಾರೆಂದರೆ ಹಬ್ಬದ ಅರ್ಥ ಎಷ್ಟರಮಟ್ಟಿಗಿದೆಯೆಂದು ತಿಳಿಯುತ್ತದೆ. ಅಬ್ಬಾ!! ಹಬ್ಬ ಬಂತು ಒಹ್ ದೀಪೋತ್ಸವ!! ಹಬ್ಬಾ ತಂತೂ ವಾಹ್ ಮಹೋತ್ಸವ!!!!

ನಿಮ್ಮೆಲ್ಲರಿಗೂ ಬೆಳಕಿನ ದೀಪಾವಳಿಯ ಮತ್ತು ಕನ್ನಡದ ಜ್ಯೋತಿ ಬೆಳಗಿಸುವ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ನಿಮ್ಮ ಪ್ರೀತಿಯ ಗೆಳತೀ,
ರೇಖಾ ಪ್ರಕಾಶ್.