ಕಾವೇರಿ ಮಾತೆ - ಒಂದು ಪದ್ಯ-ಗದ್ಯ

ಶ್ರೀಮತಿ. ಕೆ. ಎಲ್. ಸುಬ್ಬಲಕ್ಷ್ಮಮ್ಮ

ಹೇ ಕಾವೇರಿ ಮಾತೆ, ನಿನ್ನ ಹುಟ್ಟು ಹಬ್ಬದ
ಸಂಭ್ರಮವ ಏನೆಂದು ವರ್ಣಿಸಲಿ ??
ಭಾಗಮಂಡಲದ ಪೂಜೆ ಪುನಸ್ಕಾರಗಳನ್ನು ವರ್ಣಿಸಲು ಅಸಾಧ್ಯ!
ಸಾವಿರಾರು ಭಕ್ತರು ನಿನ್ನ ಉದ್ಭವವನ್ನು ಎವೆಯಿಕ್ಕದೆ ನೋಡುತಿಹರು.

ಬ್ರಹ್ಮಕುಂಡಿಕೆಯಲ್ಲಿ ಜನಿಸಿದವಳೆ
ಪಾಲ್ಗಡಲಲ್ಲಿ ಮಿಂದವಳೆ ಹೇ ಕಾವೇರಿ ಮಾತೆ!
ತೀರ್ಥೋದ್ಭವ ಆಗುತ್ತಿದ್ದ ಹಾಗೆ ಅದೇನು ಹರ್ಷೋದ್ಗಾರಾ!
ಅದೇನು ಮುಗಿಲು ಮುಟ್ಟುವ ಕರತಾಡನ!
ನಿನ್ನ ಪುಣ್ಯತೀರ್ಥದಲ್ಲಿ ಮಿಂದು ಸುಖಿಸಿದವರು ಅದೆಷ್ಟು ಜನ!

ಹೇ ಕಾವೇರಿ ಮಾತೆ, ಎಲ್ಲ ಸಂಭ್ರಮವು ಮುಗಿದಿದ್ದರೆ, ಇನ್ನಾದರೂ ಇತ್ತ ಹರಿದು ಬಾ,
ನಲಿಯುತ್ತ ಬಾ, ಕುಣಿಯುತ್ತ ಬಾ, ಒಮ್ಮೆ ಧುಮ್ಮುಕ್ಕಿ ಬಾ
ಇಕ್ಕೆಲಗಳನು ತಣಿಸಿ ಬಾ
ಕೋಟಿಕೋಟಿ ಜನರ ತೃಷೆಯನು ನೀಗಲು ಬಾ
ಪಟ್ಟಣವ ಸುತ್ತಿ ಬಾ, ರಂಗನನು ದಿಟ್ಟಿಸಿ ಬಾ
ಸಂಗಮದಿ ನಿನ್ನ ಗೆಳತಿಯರನು ಕೂಡಿ ಬಾ
ಸಹಸ್ರಾರು ಜನರು ನಿನ್ನ ಪುಣ್ಯಸ್ನಾನಕ್ಕಾಗಿ ಕಾಯುತಿಹರು
ಅವರ ಪಾಪಗಳನ್ನು ನೀಗಲು ಬಾ
ಭಾಮಿನಿಮಣಿಯರು ಬಾಗಿನವ ಪಿಡಿದು ಬಾಗಿಬಾಗಿ ನೋಡುತಿಹರು
ಅವರನ್ನು ಹರಸಲು ಬಾ
ಮುಂದೆ ಕನ್ನಂಬಾಡಿಯಲ್ಲಿ ನಿನ್ನ ಬಂಧಿಸುವರು ಎಂಬ ಶಂಕೆ ಬೇಡ ತಾಯಿ
ಅದೊಂದು ರಕ್ಷಾಬಂಧನ, ಅದೊಂದು ಪ್ರೀತಿಯ ಪ್ರತೀಕ
ನಿನ್ನ ಬರುವಿಗಾಗಿ ನಂದನವನವೇ ಸೃಷ್ಟಿಯಾಗಿದೆ ತಾಯಿ
ಅದಕೆ ಜೀವಕಳೆ ತುಂಬಲು ಬಾ
ಏನು ಮಸ್ತಿ, ಏನು ಮೋಜು!
ಮೈ ನವಿರೇಳುವ ವಾತಾವರಣ!
ಹೇ ದೇವಿ, ಭಾವ ಪರವಶಳಾಗಿ ಅಲ್ಲಿಯೇ ನಿಲ್ಲದಿರು
ಮಾಂಡವ್ಯ ನಗರದ ವಕ್ಕಲು ಮಕ್ಕಳು ನಿನ್ನ ಬರುವಿಗಾಗಿ ಪರಿತಪಿಸುತಿಹರು
ನಾಡಿಗೆ ಸಿಹಿ ನೀಡುವ ಹುನ್ನಾರ ಅವರದು
ಅವರ ಮೊಗದಲಿ ಮಂದಹಾಸ ಮೂಡಲು ನಾಲೆಯಾಗಿ ಹರಿದು ಬಾ
ಗಂಡುಗಲಿಗಳ ನಾಡಿಗೆ
ಕವಿಪುಂಗವರು ಮೆರೆದ ಬೀದಿಗೆ
ಕಾಮಿನಿಯರ ಸಿರಿ ಅಂಗಳಕ್ಕೆ
ಸಂಭ್ರಮದಿ ಬಾ ತಾಯಿ

ಇದೋ ತಾಯೆ, ನಿನಗೆ ಕೋಟಿ ಕೋಟಿ ನಮನ
ಏನೆಂದು ಹೆಸರಿಸಲಿ ನಿನ್ನ?
ಪಾಪನಾಶಿನಿಯೆನ್ನಲೆ? ಪುಣ್ಯಶ್ರೀ ಎನ್ನಲೆ, ಪಾವನಿ ಎನ್ನಲೆ, ಭಾಗೀರಥಿ ಎನ್ನಲೆ
ಹೇ ಸಿರಿಗೌರಿ ಲಕ್ಷ್ಮೀ ಹತ್ತಿರ ಬಾ

ನಾಲ್ವಡಿ ಕೃಷ್ಣರ ಪೀಳಿಗೆಯ ಹರಸುತ್ತ ಬಾ
ವಿಶ್ವೇಶ್ವರಯ್ಯನವರನ್ನು ಸ್ಮರಿಸುತ್ತ ಬಾ
ಹೇ ಕಾವೇರಿ ಮಾತೆ, ಕರುನಾಡ ಜೀವನದಿಯಾಗಿ ಬಾ!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ