ಹೀಗೊಂದು ಸಂಕ್ರಾಂತಿ

ಸಂಧ್ಯಾ ಹೊನ್ನವಳ್ಳಿ

ಸಂಕ್ರಾಂತಿ ಸುಗ್ಗಿ ಹಬ್ಬ. ರೈತರ ಮನೆಗಳಲ್ಲಿ ಸಡಗರ ಸಂಭ್ರಮ ತರುವ ಹಬ್ಬ. ಎಳ್ಳು ಬೆಲ್ಲ ತಿಂದು, ಒಳ್ಳೆ ಮಾತಾಡು ಅಂತ ಹೇಳುತ್ತಾ ನಮ್ಮ ತಮ್ಮವರೊಂದಿಗೆ ಎಳ್ಳು ಹಂಚಿಕೊಂಡು ತಿನ್ನುತ್ತಾ ಸಂತೋಷಿಸುವ ಹಬ್ಬ. ಪ್ರತ್ಯಕ್ಷ ಸೂರ್ಯ ಭಗವಾನನೇ ರಾಶಿಗತಿಯನ್ನು ಬದಲಿಸಿ, ಶಿಶಿರವನ್ನು ಹಿಂದಕ್ಕೆ ಹಾಕುತ್ತಾ, ಚೈತ್ರದ ಕಡೆಗೆ ಹಾತೊರೆದು ಸಾಗುವ ಹಬ್ಬ.

ಇಂಥಾ ಈ ಹಬ್ಬ ಒಂದ್ಸಲ ವೀಕ್ ಡೇ ಬಂದುಬಿಡ್ತು ನೋಡಿ…. 

ಬೆಳಗಿನಜಾವ ಇನ್ನೂ  ನಿದ್ದೆಯಿಂದ ಕಣ್ಣ್ ತೆರೆಯೋದಕ್ಕಿಲ್ಲ, “ಗುಡ್ ಮಾರ್ನಿಂಗ್”, “ಶುಭ ಬೆಳಿಗ್ಗೆ”, “ಹ್ಯಾಪಿ ಸಂಕ್ರಾಂತಿ”, “ಮಕರ ಸಂಕ್ರಾಂತಿಯ ಶುಭಾಶಯಗಳು” ಅಂತ ಎಳ್ಳು, ಬೆಲ್ಲ, ಕಬ್ಬು, ಸಕ್ಕ್ರೆ ಅಚ್ಚಿನ ಸಮೇತದ ಫೋಟೋಗಳು, ಮೆಸೇಜ್ಗಳು! ಎಲ್ಲಿ ಅಂತೀರಾ? ಇನ್ನೆಲ್ಲಿ? ಕರಾಗ್ರೇ ವಸತೇ ವಾಟ್ಸ್ಯಾಪ್ಪ್, ಕರ ಮಧ್ಯೆ ಫೇಸ್ಬುಕ್ಕಹ , ಕರ ಮೂಲೇ ತು ಈಮೈಲಹ, ಪ್ರಭಾತೇ ಐಫೋನ್ ದರ್ಶನಂ ಅಂತಾನೆ ಎದ್ದೇಳೋ ನಮ್ಮ ನಿಮ್ಮೆಲ್ಲರ ಕುಟುಂಬದಲ್ಲಿ ಅತಿ ಮುಖ್ಯವಾದ ಸದಸ್ಯನ ಸ್ಥಾನ ಪಡೆದುಕೊಂಡಿರುವ “ವಾಟ್ಸ್ಯಾಪ್ಪ್”ನಲ್ಲಿ .....  ಕಾಫಿ ಟೀ ಇಲ್ಡೇ ಇದ್ದರೂ ಬೆಳಗಾಗುತ್ತ್ಯೇ ಹೊರತು ನಮ್ಮ ಐಫೋನ್ ಇಲ್ದೇ  ಮಾತ್ರ ಆಗಲ್ಲ. ನಿಜ ತಾನೇ?

ಭಾರತ ದೇಶ ಬಿಟ್ಟು ಇಲ್ಲಿ ಬಂದು ನೆಲೆಸಿರೋ ನಮಗೆ ನಮ್ಮ ಯಾವುದೇ ಹಬ್ಬಗಳಿಗೂ ನಿಗದಿತ ರಜಾ ಅಂತೂ ಖಂಡಿತ ಇರುವುದಿಲ್ಲ. ಏನೋ ಒಂದೆರಡು ಹಬ್ಬಗಳು ಅಕಸ್ಮಾತ್ತಾಗಿ ವೀಕೆಂಡ್ ಬಂತು ಅಂದ್ರೆ ನಮ್ಮ ಪುಣ್ಯ. ಹಾಗಾದ್ರೆ, ಈ ದೇಶದಲ್ಲಿ ವೀಕ್ ಡೇ ಬರೋ ಹಬ್ಬಗಳನ್ನ ನಾವು ಹೇಗೆ ಆಚರಿಸುತ್ತೀವಿ ಅನ್ನೋ ಪ್ರಶ್ನೆ. ಎಲ್ಲರೂ ಸ್ಕೂಲು, ಕಾಲೇಜು, ಆಫೀಸು ಅಂತ ಓಡಲೇ ಬೇಕಲ್ಲ…. ಹಬ್ಬ ಅಂತ ಆಫೀಸಿಗೆ ಜರತಾರಿ ಸೀರೆ ಉಟ್ಟಕೊಂಡ್ ಹೋಗೋಕ್ಕ್ ಆಗುತ್ತಾ ಅಥವಾ ಇಲ್ಲಿನ ಬಿಳೀ ಸಹೋದ್ಯೋಗಿಗಳಿಗೆಲ್ಲ ಎಳ್ಳು ಬೀರೋಕ್ಕಾಗುತ್ತಾ? ಶಾಸ್ತ್ರಕ್ಕೆ ಚಕ್ ಚಕ್ ಅಂತ  ಅಮ್ಮನ ಮನೆಗೆ, ಅತ್ತೆ ಮನೆಗೆ ಫೋನ್ ಮಾಡಿ ಹಬ್ಬದ ಶುಭಾಶಯಗಳನ್ನ ಸಲ್ಲಿಸಿದ ಮೇಲೆ, ದೇವರ ಮುಂದೆ ಒಂದು ಹೆಚ್ಚು ಜೊತೆ ದೀಪ, ಒಂದು ಹೆಚ್ಚು ನಿಮಿಷ ಸ್ತೋತ್ರ, ಒಂದು ಹೆಚ್ಚು ನಮಸ್ಕಾರ ಹಾಕಿ, “ಕಾಯಕವೇ ಕೈಲಾಸ” ಅಂತ ಓಡೋದು. ಹಬ್ಬವೇ ಅಲ್ಲ ಅನ್ನೋ ಹಾಗೆ ಸಾಗೊ ಆಫೀಸಿನ ಮಾಮೂಲು ದಿನಚರಿ. ಕತ್ತೆ ಥರಾ ದುಡಿಯೋದು. ಸಾಯಂಕಾಲ ಸುಸ್ತಾಗಿ ಮನೆಗೆ ಬರೋ ಹೊತ್ತಿಗೆ ಕೇಳಿ ಬಂದವು ಕೆಲ ಪ್ರಶ್ನೆಗಳು…. “ಮಾಮ್ ಈಸ್ ಟುಡೇ ಸಂ ಇಂಡಿಯನ್ ಫೆಸ್ಟಿವಲ್?  ಆರ್ ಯು ಸ್ಸಪ್ಪೋಸ್ಡ್ ಟು ಮೇಕ್ ಸಂ ಸ್ಪೆಷಲ್ ಥಿಂಗಿ ಟು ಈಟ್?” ಶಾಲೆಯಲ್ಲಿ ಅರೆ ಬರೆ ನೋಡಿ, ಕೇಳಿದುದರ ಪ್ರಭಾವ! 

ಮಕ್ಕಳು ಪಾಪ ತಾವಾಗೇ ಕೇಳ್ತಿದ್ದಾರಲ್ಲ, ಶಾಸ್ತ್ರಕ್ಕಾದರೂ ಸಂಕ್ರಾಂತಿಯ ಆ “ಎಡಿಬಲ್ ಥಿಂಗಿ” ಅಂದ್ರೆ ಎಳ್ಳು ಬೆಲ್ಲ ಮಾಡಿ ಕೊಡೋಣ ಅನ್ನೋಷ್ಟರಲ್ಲಿ  ಮನೆಯ ಕರೆಗಂಟೆಯ ಶಬ್ದ. ನಮ್ಮ ಬೀದಿಯ ಮೂರನೇ ಮನೆಯ ಕನ್ನಡದ ಹುಡುಗಿಯರು. ಅಕ್ಕ ೧೨-೧೩ ವರ್ಷ ಇರಬಹದು. ಕರೀ ಬಣ್ಣದ “ಲೆಗ್ಗಿಂಗ್ಸ್” ಹಾಗು ಮಾಸಲು ಬಣ್ಣದ ಟೀಶರ್ಟ್ ತೊಟ್ಟು, ಸ್ಕೂಲೂ, ಹೋಮ್ ವರ್ಕ್ ಎಲ್ಲದರ ಭಾರದಿಂದ ಸೋತು ಸೊರಗಿದ ಮುಖ, ಕೆದರಿದ ತಲೆ ಹೊತ್ತು, ಕೈಯ್ಯಲ್ಲಿನ ತಟ್ಟೇಲಿ ಕಬ್ಬು, ಎಳ್ಳು ಬೆಲ್ಲ, ಸಕ್ಕ್ರೆ “ಕ್ಯೂಬ್ಸ್” ಇಟ್ಕೊಂಡು ನಿಂತಿದ್ದಳು. ತನ್ನ ಆಂಗ್ಲ “ಆಕ್ಸೆನ್ಟ್”ನಲ್ಲಿ,   “ಆಂಟಿ ಹಾಯ್. ಆಮ್… ಆಮ್… ಮೈ ಮಾಮ್ ಆಸ್ಕ್ಡ್ ಅಸ್  ಟು ಗೋ ಬೀರ್ ಎಲ್ ಟು ಯು.....ಸೋ...... “ ಅಂತ ತಟ್ಟೆ ಮುಂದೆ ಮಾಡಿದಳು.  ಅಷ್ಟರಲ್ಲೇ ಅವಳ ೪ ವರ್ಷದ ಚೋಟುದ್ದ ತಂಗಿ, ಜರತಾರಿ ಲಂಗ, ರವಿಕೆ, ಬಳೇ, ಗೆಜ್ಜೇ, ಹೊಳೆಯುವ ಬಿಂದಿ ಎಲ್ಲ ತೊಟ್ಟಕೊಂಡು, ಸ್ವಚ್ಛ ಕನ್ನಡದಲ್ಲಿ “ಅಕ್ಕಾ… ಎಲ್ ಅಲ್ಲ, ಎಳ್ಳು” ಅಂತ ಅಕ್ಕನ ಕನ್ನಡ ತಿದ್ದಿ ನಕ್ಕಳು. ಇನ್ನೂ ಶಾಲೆಯ ಬಿಸಿ ಶಾಖ ತಟ್ಟದ, ಅಂಗ್ಲ ಆಕ್ಸೆನ್ಟ್ ಇಲ್ಲದ, ಸ್ವಚ್ಛ ಕನ್ನಡ ಮಾಸಿರದ ಮುದ್ದು ಹುಡುಗಿ. 

ಅಲೆಲೆಲೆಲೇ ಅಂತ ಆಶ್ಚರ್ಯ ಪಡುತ್ತಾ, ಇಬ್ಬರಿಗೂ “ಥ್ಯಾಂಕ್ಯೂ ಥ್ಯಾಂಕ್ಯೂ, ಸೋ ಸ್ವೀಟ್ ಆಫ್ ಯು” ಅಂತ ಹೇಳ್ತಾ, “ನಾನಿನ್ನೂ ಈಗ ಮನೆಗೆ ಬಂದೆ ಮರೀ, ನಮ್ಮನೆ ಎಳ್ಳು ಇನ್ನು ತಯಾರಾಗಿಲ್ಲ. ಆಮೇಲೆ ಕೊಡ್ತೀನಿ ಅಂತ ಅಮ್ಮನಿಗೆ ಹೇಳಿ” ಅಂತ ಇಬ್ಬರ ಕೈಗಳಿಗೂ “ಕ್ಯಾಂಡಿ” ತುರುಕಿ, ಹಲ್ ಕಿಸಿದು ಕಳಿಸಿದೆ.  ಇಷ್ಟು ಬೇಗ ಅದ್ಹೇಗೆ ಎಲ್ಲಾ ಅಣಿ ಮಾಡಿ ಕಳಿಸಿದಳು ಅವಳು ಅಂತ ಗೊಣಗುತ್ತಲೇ  ಅಡಿಗೆ ಮನೆ ಕಡೆ ಹೊರಟೆ.  

ಅಷ್ಟರಲ್ಲಿ ಗಂಡನ ಧ್ವನಿ… “ನಮ್ಮನೇದಂತೂ ತಯಾರಾಗಿಲ್ಲ, ಅವರ ಮನೆದಾದ್ರು ಕೊಡೇ, “ಬೀರ್ ದ ಎಲ್” ಅಂತ ಕೊಟ್ಟು ಹೋದ್ರಲ್ಲ ಮಕ್ಕಳು.  ಭೇಷ್ ಭೇಷ್, ಮೆಚ್ಚಬೇಕ್ಕಾದ್ದೇ….”   ಕೋಪ ಬರ್ತಾ ಇರೋ ಹೊತ್ತಿಗೆ ಸರಿಯಾಗಿ ಫೋನ್ ಶಬ್ದ. ಅತ್ತೇ  ಮನೇದು …. ಫೋನ್ ತೊಗೊಂಡ ಗಂಡ,  “ಹಲೋ ಅಮ್ಮಾ…. “ ಅಂತ ಅಮ್ಮನ ಹತ್ತ್ರ ತಮ್ಮ ಮನೆಯ ಸಂಕ್ರಾಂತಿ ಹಬ್ಬದ ಕಥೇ ಹೇಳಲು ಶುರು ಮಾಡಿದರು.  “ಹೂ ಅಮ್ಮ… ನಿಮಗೂ ಎಲ್ಲರಿಗೂ ಅಷ್ಟೇ, ಹ್ಯಾಪಿ ಸಂಕ್ರಾಂತಿ. ವೀಕ್ ಡೇ ಅಲ್ವಾ? ಬೆಳಿಗ್ಗೆ ಇಂದ ನಂಗೆ ಆಫೀಸಿನಲ್ಲಿ ಸಿಕ್ಕಾಪಟ್ಟೆ ಕೆಲ್ಸಮ್ಮಾ ((ನಂಗಿನ್ನೇನು?)). ಉಸಿರಾಡಕ್ಕೂ ಪುರುಸೊತ್ತಿಲ್ಲ, ಊಟ ಕೂಡಾ ಐದು ನಿಮಿಷದಲ್ಲಿ ನುಂಗಿದೆ ಗೊತ್ತಾ ? ((ನಾನೇನ್ ಮತ್ತೆ ಸರವಣ ಭವನ್ ಗಾ ಹೋಗಿದ್ದೆ?)). ಇನ್ನೂ ಈಗ ತಾನೇ ಮನೇಗ್ ಬರ್ತಾ ಇದ್ದೀನಿ ((ನಂಗೇನ್ ಹಾಫ್ ಡೇ ಇತ್ತಾ ?)) ಎಳ್ಳು ಬೆಲ್ಲ ಊಟ ಏನೂ ರೆಡಿ ಇಲ್ಲಮ್ಮಾ …” ಅಂತ ಇವರ ಸೋಬೇ ರಾಗ ಮುಂದುವರೆದಿತ್ತು.  “ನಿನ್ನ ಕೈಯ್ಯಿನ ಎಳ್ಳು ಬೆಲ್ಲ ನಂಗೆ ಇಲ್ಲಿ ಎಲ್ಲಿ ಸಿಗಬೇಕು ಹೇಳಮ್ಮಾ. ಇವಳಿಗೆ ಯಾವುದಕ್ಕೂ ಟೈಮೇ ಇರೋದಿಲ್ಲ ((ಗಂಡ ಏನಾದ್ರು ಸಹಾಯ ಮಾಡಿದ್ರೆ ತಾನೇ)). ಪುಣ್ಯಕ್ಕೆ ನಮ್ಮ ಬೀದಿಯ ಇನ್ನೊಬ್ಬ ಕನ್ನಡದವಳು ಅದೆಷ್ಟು ಚೆನ್ನಾಗಿ ಮಕ್ಕಳ ಹತ್ರ ಎಳ್ಳು ಬೆಲ್ಲ ತಯಾರು ಮಾಡಿ ಕಳಿಸಿದ್ಲು ಗೊತ್ತಾಮ್ಮಾ , ತುಂಬಾ ರುಚಿಯಾಗಿದೆ ((ಹೌದೌದು… ಬೇರೇ ಮನೇದು ರುಚಿಯಾಗಿಲ್ದೇ ಇರುತ್ತಾ ಮತ್ತೇ  )). 

ಅಂತೂ ಅಮ್ಮನ ಮುಂದೆ ಮಗನ ಗೋಳು ಕಥೆ ಮುಗಿಯುವಂತೆ ಕಾಣಲಿಲ್ಲ. ಹಸುವಿನಂಥಾ ಮಗನ್ನ ಹುಲಿಯಂಥಾ ಸೊಸೆ ಕೈಲಿ ಕೊಟ್ಟುಬಿಟ್ನಾ? ಹಬ್ಬದ ದಿನ ಪಾಪ ಬೇರೆಯವರ ಮನೆ ಎಳ್ಳು ಬೆಲ್ಲ ತಿನ್ನುವಂತೆ ಮಾಡಿದ್ಲಲ್ಲಾ ಅಂತ ಆ ಮಾತೃ ಹೃದಯ ವಿಲವಿಲಾ ಅಂತ ಒದ್ದಾಡಿ ಹೋಯ್ತೆನೋ! ಇರಲಿ ಇರಲಿ ಇದ್ದಿದ್ದೇ ಅಂದುಕೊಂಡು, ಮಕ್ಕಳ ಹೋಮ್ ವರ್ಕ್ ವಿಚಾರಿಸುತ್ತಾ, ಶಾಸ್ತ್ರಕ್ಕೆ ಎಳ್ಳು ಬೆಲ್ಲ, ತೊವ್ವೆ, ಪಾಯಸಕ್ಕೆ ಅಣಿ ಮಾಡಿಕೊಳ್ಳಲು ಶುರು ಮಾಡಿದೆ. 

ಸಂಕ್ರಾಂತಿ ಪಾಟ್ಲಕ್ ಇನ್ನೇನು ಶನಿವಾರ ಬಂದೇಬಿಡುತ್ತೆ. ಭರ್ಜರಿ “ಇನ್ಸ್ಟೆಂಟ್ ಪಾಟ್” ಬಿಸಿಬೇಳೇ ಭಾತ್ ನಮ್ಮ ಅಡುಗೆಮನೆಯಿಂದ. ಚಿಟಿಕೆ…. ಚಿಟಿಕೆ ಹೊಡೆಯೋದ್ರಲ್ಲಿ ತಯಾರು, ಅಲ್ವಾ?

ಈ ದೇಶದಲ್ಲಿ ಹಬ್ಬ ವೀಕ್ ಡೇ ಬಂದ್ರೇನಂತೆ,  ಇಲ್ಲಿ ನೆಲೆಸಿರುವ ನಾವು, ಅದೇ ದಿನ ಹಬ್ಬ ಮನೆಮಟ್ಟಿಗೆ ಮಾಡಿಕೊಂಡು, ವೀಕೆಂಡ್ ವಿಜೃಂಭಣೆಯಿಂದ ಸ್ನೇಹಿತರ ಜೊತೆಗೂಡಿ ಮಾಡಿ ಸಂಭ್ರಮಿಸಿ, ಕೊನೆಗೆ ಮತ್ತೊಂದು ದಿನ ಕನ್ನಡ ಸಂಘದಲ್ಲಿ ಸಹ ಇಡೀ ಊರಿನ ಕನ್ನಡಿಗರೆಲ್ಲಾ ಸೇರಿ ಮಹಮ್ಮೇರಿಯಾಗಿ ಹಬ್ಬ ಆಚರಿಸಿಕೊಳ್ತೀವಿ ನೋಡಿ. ಒಟ್ಟು ಮೂರ್ ಸಲ! ಕನ್ನಡ, ಕರ್ನಾಟಕ, ಕನ್ನಡತನ ಅಂದರೆ ನಮಗೆ ಅಷ್ಟು ಹೆಮ್ಮೆ, ಪ್ರೀತಿ ಮತ್ತು ಆದರ. ಸಪ್ತ ಸಮುದ್ರಗಳನ್ನ ದಾಟಿ ಬಂದಿದ್ರೂ  ಸರಿ, ನಮ್ಮ ಕನ್ನಡದ ವೈಶಿಷ್ಟ್ಯಗಳನ್ನಾಗಲಿ, ಹಿರಿಮೆಯನ್ನಾಗಲೀ ಮರೆಯಲು ಸಾಧ್ಯವಿಲ್ಲ. ಪದ್ಧತಿ ಪರಂಪರೆಗಳನ್ನ ತೊರೆಯಲು ಸಾಧ್ಯವಿಲ್ಲ. 

ಹಾಂ! ಇಷ್ಟೆಲ್ಲಾ ಹೇಳಿದ ಮೇಲೆ ಒಂದು ಮುಖ್ಯ ಕಾರ್ಯಕ್ರಮವನ್ನು ಮರೀಬಾರದು…. ನಮ್ಮ ಬೀದಿಯ ಆ ಕನ್ನಡದ ಮನೆಗೆ “ ಬೀರದ್ ಎಲ್ ((ಅಲ್ಲ ಎಳ್ ))” ಮಾಡೋದನ್ನ...



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ