ಅಧ್ಯಕ್ಷರ ಸಂದೇಶ

                                                                                          ವತ್ಸಾ ರಾಮನಾಥನ್ 

ಕನ್ನಡ ಸಂಘದ ಸದಸ್ಯರಿಗೆ ನನ್ನ ಪ್ರೀತಿಯ ನಮಸ್ಕಾರಗಳು,
ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು !

ಈ ನನ್ನ ಸಂದೇಶದಲ್ಲಿ, ೨೦೧೭ ರಲ್ಲಿ ನಡೆದ ಮಲ್ಲಿಗೆ ಕನ್ನಡ ಸಂಘದ ಚಟುವಟಿಕೆಗಳನ್ನು ಅವಲೋಕಿಸಿ, ಮುಂದೆ ಬರುವ ವರ್ಷದ ಕಾರ್ಯಕ್ರಮಗಳ ಸಂಕ್ಷಿಪ್ತ ಯೋಜನೆಯನ್ನು ನಿಮಗೆ ತಿಳಿಸಬಯಸುತ್ತೇನೆ. 

ಸಂಕ್ರಾಂತಿ ಸಂಭ್ರಮದೊಂದಿಗೆ ಪ್ರಾರಂಭಿಸಿದ ವರ್ಷ ಬಹಳ ವಿಜೃಂಭಣೆಯಿಂದ ಸಾಗಿ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ಕಂಡಿತು. ಸ್ಥಳೀಯ ಹೊಸ ಪ್ರತಿಭೆಗಳಿಗೆ ನಮ್ಮ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸಿಕೊಟ್ಟು ಪ್ರೋತ್ಸಾಹಿಸಿದೆವು. ಬಾಳೆ ಎಲೆ ಊಟದ ಸವಿಯುಂಡೆವು !!  ಮಂಜುಳಾ ಗುರುರಾಜ್, ಬದ್ರಿಪ್ರಸಾದ್, ಗಣೇಶ್ ದೇಸಾಯಿ ಇವರಂಥ   ಕರ್ನಾಟಕದ ಕೆಲವು ಪ್ರತಿಭಾವಂತ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ಸದಸ್ಯರುಗಳ ಮನರಂಜಿಸಿದೆವು. ಉಗಾದಿ ಮತ್ತು ದೀಪಾವಳಿ ಜೊತೆಗೆ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಹೊಸ  ಪ್ರವೃತ್ತಿಯನ್ನು ಪ್ರಾರಂಭಿಸಿದೆವು. ಅಷ್ಟೇ ಅಲ್ಲದೆ ಸಾಂಪ್ರದಾಯಿಕವಲ್ಲದ, ಹೊಸ ತರಹದ, "ಶಿಶಿರ ಸಂಭ್ರಮ" ಕಾರ್ಯಕ್ರಮವನ್ನು ಆಯೋಜಿಸಿ ಹೊಸದಾಗಿ ಡಲ್ಲಾಸ್ ನಗರಕ್ಕೆ ಬಂದಿರುವವರಿಗೆ ಅನೌಪಚಾರಿಕ ವಾತಾರಣದಲ್ಲಿ ಜನರನ್ನು ಭೇಟಿ ಮಾಡಿ ಪರಿಚಯ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆವು. ನಮ್ಮ ಕನ್ನಡ ಮಕ್ಕಳಿಗೆ ಕಾಲೇಜಿಗೆ ಅರ್ಜಿ ಹಾಕುವ, ಕಾಲೇಜುಗಳನ್ನು ಆಯ್ಕೆ ಮಾಡುವ ಮತ್ತು ಅದರಲ್ಲಿ ಇರುವ ಸೂಕ್ಷ್ಮತೆಗಳ ಬಗ್ಗೆ ಒಂದು ವಿಚಾರ ಸಂಕಿರಣ ಏರ್ಪಡಿಸಿದ್ದೆವು. 

ನಮ್ಮ ಕಾರ್ಯಕಾರಿ ಸಮಿತಿಯ ಸಹಾಯಕ್ಕೆ, ಹೊಸ ಕಾರ್ಯಪಡೆಯ ಜೋಡಣೆಯಿಂದ ನಮ್ಮ ಕೆಲಸಗಳನ್ನು ಹಂಚಿಕೊಂಡು  ಪರಿಣಾಮಕಾರಿಯಾಗಿ ನಿರ್ವಹಿಸುವ ಕ್ರಮವನ್ನು ಪ್ರಾರಂಭಿಸಿದೆವು. ಬಹಳ ಉತ್ಸಾಹಕಾರಿ ಯುವಕ ಯುವತಿಯರ ಈ ಜೋಡಣೆಯಿಂದ ಹೊಸ ಹೊಸ ವಿಚಾರಗಳು, ಹೊಸ ರೀತಿಯ ಕಾರ್ಯಕ್ರಮಗಳು, ನಮ್ಮ ಕನ್ನಡ ಸಂಘಕ್ಕೆ ಹೊಸ ತಿರುವನ್ನು ಕೊಡುವುದರಲ್ಲಿ ಸಂಶಯವಿಲ್ಲ. ಈ ಹೊಸ ಪೀಳಿಗೆಯ ನಾಯಕತ್ವವನ್ನು  ತುಂಬು ಹೃದಯದಿಂದ ಸ್ವಾಗತಿಸುತ್ತೇನೆ!

ಇನ್ನೊಂದು ಬಹಳ ಮುಖ್ಯವಾದ ಸಂಗತಿ - ನಮ್ಮ ಕನ್ನಡ ಸಂಘ, ಮೈಸೂರಿನಲ್ಲಿ ಇರುವ "ನಿರೀಕ್ಷೆ" ಎನ್ನುವ ವಿಶೇಷ ಮಕ್ಕಳ ಶಾಲೆಯ ಸಹಾಯಕ್ಕೆ ೨೦೧೭ ರಲ್ಲಿ ನಿಧಿಸಂಗ್ರಹಣೆಯ ಜವಾಬ್ದಾರಿ ವಹಿಸಿತ್ತು. ನಮ್ಮ ಡಲ್ಲಾಸ್  ಕನ್ನಡಿಗರ ಔದಾರ್ಯತೆ ಮತ್ತು ಸಹಾಯ ಮನೋಭಾವದಿಂದ ನಾವು ಆ ಶಾಲೆಗೆ ಒಟ್ಟು $೬೦೦೦(ಆರು ಸಾವಿರ) ಹಣವನ್ನು ಸಂಗ್ರಹಿಸಿ ಕಳುಹಿಸಿದೆವು. "ಪ್ರೇರಣಾ" ಸಂಗೀತ ಸಂಜೆಯನ್ನು ಏರ್ಪಡಿಸಿದ ನಮ್ಮ ಸದಸ್ಯರಿಂದ ಬಹಳ ಸಹಾಯವಾಯಿತು, ಇದಕ್ಕೆ ಸಹಾಯ ಮಾಡಿದ ಎಲ್ಲರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು . ನಿಮ್ಮೆಲ್ಲರ ಮೇಲೆ ಆ ಮಕ್ಕಳ ಮತ್ತು ಅವರ ಪೋಷಕರ ಶುಭ ಹಾರೈಕೆ ಇರುತ್ತದೆ. 

ಮತ್ತೊಂದು ಮುಖ್ಯ ಸಂಗತಿ - ದೀಪಾವಳಿ ಕಾರ್ಯಕ್ರಮದಲ್ಲಿ, ನಿಮ್ಮೆಲ್ಲರಿಗೂ ತಿಳಿದಹಾಗೆ, ಅಕ್ಕ ಸಂಘದ ಸಮಿತಿಯವರು ಬಂದು, ಮುಂದಿನ ವರ್ಷದ ಅಕ್ಕ ಸಮ್ಮೇಳನವನ್ನು ಮಲ್ಲಿಗೆ ಕನ್ನಡ ಸಂಘದ ಸಹಯೋಗದೊಂದಿಗೆ ನಮ್ಮ ಡಲ್ಲಾಸ್ ನಗರದಲ್ಲಿ ನಡೆಸುವ ಘೋಷಣೆ ಮಾಡಿದರು. ಹತ್ತನೇ ಅಕ್ಕ ಸಮ್ಮೇಳನ ನಮ್ಮ ಊರಲ್ಲಿ ನಡೆಯುತ್ತಿರುವುದು ನಮಗೆಲ್ಲ ಒಂದು ಹೆಮ್ಮೆಯ ಮತ್ತು ಸಂತೋಷದ ವಿಷಯ. ಕನ್ನಡ ನಾಡಿನ ಬಾವುಟವನ್ನು ನಮ್ಮ ನಗರದಲ್ಲಿ ಹಾರಿಸುವ ಸದವಕಾಶ ನಮಗೆ ದೊರಕಿದೆ.. ಈ ಸಮ್ಮೇಳನದ ಸಿದ್ಧತೆಗೆ ಮತ್ತು ಯಶಸ್ಸಿಗೆ ನಿಮ್ಮ ಸಹಕಾರ ಅತ್ಯಗತ್ಯ. ಎಲ್ಲರು ಒಂದಾಗಿ ಸೇರಿ, ಬಹಳ ವಿಜೃಂಭಣೆಯಿಂದ, ವಿಶಿಷ್ಟವಾಗಿ, ಅನನ್ಯವಾಗಿ ನಾವು ನಡೆಸೋಣ. ಈ ಸಮ್ಮೇಳನದ ಸಿದ್ಧತೆಗೆ ಕಾರ್ಯಕಾರಿ ಸಮಿತಿಗಳ ನಿರ್ಮಾಣ ಸಂಕ್ರಾಂತಿಯ ನಂತರ ಆರಂಭಿಸಲಾಗುತ್ತದೆ, ನಿಮ್ಮಲ್ಲರಿಗೂ ಅದರ ಬಗ್ಗೆ ಮಾಹಿತಿಯನ್ನು ಕಳಿಸುತ್ತೇವೆ. ದಯವಿಟ್ಟು ಮುಂದೆ ಬಂದು ಭಾಗವಹಿಸಿ, ಪ್ರೋತ್ಸಾಹಿಸಿ, ಯಶಸ್ವಿಗೊಳಿಸಿ!

ಕಡೆಯದಾಗಿ, ಹಾಗು ಬಹಳ ಮುಖ್ಯವಾಗಿ, ನಮ್ಮ ಕನ್ನಡ ಸಂಘ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸಲಿಕ್ಕೆ ಮೂಲಕಾರಣ ನಮ್ಮ ಪ್ರಾಯೋಜಕರು, ಅವರ ಬೆಂಬಲದಿಂದ ಉನ್ನತ ದರ್ಜೆಯ ಸಭಾಂಗಣಗಳನ್ನು, ಒಳ್ಳೆಯ ಕಲಾವಿದರನ್ನು, ಹೊಸ ರುಚಿ ಊಟದ ವ್ಯವಸ್ಥೆಗಳನ್ನು ಮಾಡುವುದು ಸಾಧ್ಯವಾಗಿದೆ.  ನಮ್ಮ ಮಹೋನ್ನತ ಪ್ರಾಯೋಜಕರಾದ "ಟ್ಯುರ್ಮೆರಿಕ್" ಕೇಟರಿಂಗ್ ನ ವಿಕ್ಟರ್ ವರಗೀಸ್, "ಮೈ ಟ್ಯಾಕ್ಸ್ ಫೈಲರ್"ನ ಸುಧೀರ್ ಪೈ ಹಾಗು ನಮ್ಮ ಕಾರ್ಯಕ್ರಮಗಳಲ್ಲಿ ಧನಸಹಾಯ ಮಾಡುವ ಎಲ್ಲಾ ಪ್ರಾಯೋಜಕರಿಗೂ ನಮ್ಮ ಮಲ್ಲಿಗೆ ಕನ್ನಡ ಸಂಘದ ಸಮಿತಿಯ ಪರವಾಗಿ ಧನ್ಯವಾದಗಳು. 

ಇಲ್ಲಿಯವರಗೆ ನೀವೆಲ್ಲರೂ ಮಲ್ಲಿಗೆ ಕನ್ನಡ ಸಂಘಕ್ಕೆ ತೋರಿಸಿರುವ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ನಮ್ಮ ಕಾರ್ಯಕಾರಿ ಸಮಿತಿಯ ಪರವಾಗಿ ನನ್ನ ಅನಂತ ಕೋಟಿ ಧನ್ಯವಾದಗಳು. ಮುಂದೆ ಬರುವ ವರ್ಷದಲ್ಲಿ ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ, ನಿಮ್ಮ ಸೇವೆ ಮಾಡುವ ಅವಕಾಶ ಹೀಗೆ ಇರಲಿ ಎಂದು ಆಶಿಸುವ, ಬಯಸುವ ನಿಮ್ಮ ವಿಶ್ವಾಸಿ... 

ವತ್ಸಾ ರಾಮನಾಥನ್ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ