ಇತಿಹಾಸದ ಉಪಯುಕ್ತ ಪಾಠಗಳು

ಹರಿಚರಣ್ 

ಯುಗಾದಿಯು ಹೊಸ ಸಂವತ್ಸರದ  ಸಂಕೇತವಾಗಿ, ಪಂಚಾಂಗ ಶ್ರವಣದೊಂದಿಗೆ ಆರಂಭವಾಗುತ್ತದೆ. ಮನುಷ್ಯನಿಗೆ  ಸ್ವಾಭಾವಿಕವಾಗಿ ಭವಿಷ್ಯದ ಬಗ್ಗೆ ಕುತೂಹಲವಿರುವದು ಸಹಜ ಆದರೆ ನಾವು ಮುಖ್ಯವಾಗಿ ಇಲ್ಲಿ ಮಾಡಬೇಕಾದುದ್ದು  ಸ್ವವಿಮರ್ಶೆ. ನಾವು ಇಲ್ಲಿಯವರೆಗೂ ನಡೆದುಬಂದ ಹಾದಿ ಎಂತಹದು, ನಾವು ಕಲಿತ ಪಾಠ, ನಮ್ಮಲಿ ನಾವು ತಂದುಕೊಳ್ಳಬೇಕಾದ ಪರಿವರ್ತನೆ ಇದೆಲ್ಲವೂ ಸ್ವವಿಮರ್ಶೆಯ ಭಾಗವಾಗುತ್ತದೆ. ಈ ನಿಟ್ಟಿನಲ್ಲಿ ನಾನು ನಮ್ಮಗೆ ಇತಿಹಾಸದಿಂದ ಉಪಯುಕ್ತವಾದದ್ದು  ಏನಿರಬಹುದು ಅದು ಸಾರುತ್ತಿರುವ ಸಂದೇಶವೇನೆಂದು ತಿಳಿಯಲು ಹೊರಟಾಗ ನನಗೆ ದೊರೆತ ಪುಸ್ತಕ "ಇತಿಹಾಸದ ಪಾಠಗಳು " (The Lessons of History). 

ನಮ್ಮ ಕಾಲದ ಶ್ರೇಷ್ಠ ಇತಿಹಾಸಗಾರರಲ್ಲಿ ವಿದ್ವ ದಂಪತಿಗಳಾದ ವಿಲ್ ಡ್ಯುರಾಂಟ್ ಮತ್ತು ಏರಿಯಲ್ ಡ್ಯುರಾಂಟ್ ಶ್ರೇಷ್ಠ ಪಂಕ್ತಿಗೆ ಸೇರಿದವರು. ಅವರು ತಮ್ಮ ಜೀವಾವಧಿಯ ಧೀರ್ಘಕಾಲ ಇತಿಹಾಸದ  ಸಂಶೋಧನೆಗೆ ತೆತ್ತು "ನಾಗರಿಕತೆಯ ಕಥೆ " ಎಂಬ ಬೃಹತ್ಸಂಪುಟವನ್ನು ಕೊಟ್ಟಿದಾರೆ. ಅದು ಹನೊಂದು ಸಂಪುಟಗಳಾಗಿ ಹೊರಬಂದು ಅದರ ಸಾರಾಂಶವಾಗಿ "ಇತಿಹಾಸದ ಪಾಠಗಳು" ಎಂಬ ಕೃತಿಯನ್ನು  ಹೊರ ತಂದರು. ವೇದ ಕಾಲದ ಕಡೆಗೆ ಬಂದು ಅದರ ಮಹತ್ವ ಹಾಗು ತಿರುಳನ್ನು ಉಪನಿಷದ್ ಪ್ರತಿನಿದಿಸಿದಿಯೋ, "ಇತಿಹಾಸದ ಪಾಠಗಳು" ಕೂಡ ಅದರಂತೆಯೇ. 

ಮೊದಲಿಗೆ ನಮಗೆ ಎಷ್ಟರ ಮಟ್ಟಿಗೆ ಹಿಂದೆ ಏನು ನೆಡೆದಿದೆ ಎಂಬುದು ಗೊತ್ತು? ಅಥವಾ ಇತಿಹಾಸವು ಎಲ್ಲರು ಸಮ್ಮತಿಸಲಾಗದ ಕಟ್ಟು ಕಥೆಯೇ ? ಯಾವುದೇ ಗತಕಾಲದ ಘಟನೆಯ ಬಗ್ಗೆ ನಮ್ಮ  ಅರಿವು ಅಪೂರ್ಣ,  ನಿಷ್ಕೃಷ್ಟವಲ್ಲದ, ಇಬ್ಬಗೆಯ ಸಾಕ್ಷಿ ಮತ್ತು ಪಕ್ಷಪಾತ ಇತಿಹಾಸಗಾರರಿಂದ ಮುಸುಕುಗೊಂಡು ಹಾಗು ಪ್ರಾಯಶಃ ನಮ್ಮದೇ ದೇಶಾಭಿಮಾನ ಅಥವಾ ಧರ್ಮ ಪಕ್ಷಪಾತದಿಂದ ತಿರುಚುಗೊಂಡಿರುತ್ತದೆ. ಬಹುತೇಕ ಇತಿಹಾಸವು ಊಹೆ ಮತ್ತೆ ಉಳಿದದ್ದು ಪೂರ್ವಗ್ರಹ. 

ತನ್ನ ದೇಶ, ಜನಾಂಗ, ಮತ ಅಥವಾ ವರ್ಗದ ಪಕ್ಷಪಾತವನ್ನು ಮೀರಿ ನಿಂತ ಇತಿಹಾಸಗಾರನು ಕೂಡ ತನ್ನ ವಿಷಯದ ಬಗ್ಗೆ ಬೇಕಾಗಿರುವ ಸಾಮಗ್ರಿ ಮತ್ತೆ ಅವನ ಭಾಷಾ ವಿಶೇಷಣೆಗಳ ಸೂಕ್ಷ್ಮಗಳಿಂದ ಮೋಸ ಹೋಗುತ್ತಾನೆ. ಈ ಎಲ್ಲ ಕುಂದುಕೊರೆತೆಗಳನ್ನು ಗುರುತಿಸಿ ವಿನ್ಮ್ರೆತೆಯಿಂದ ಮುಂದುವರೆದಿದ್ದಾರೆ ಈ ಕೃತಿಯಲ್ಲಿ. ಕೇವಲ ೧೦೪ ಪುಟಗಳಲ್ಲಿ ಇತಿಹಾಸದಿಂದ ನಮಗೆ ಉಪಯುಕ್ತ ವಿಷಯ ಇದರಲ್ಲಿ ಅಡಕವಾಗಿದೆ. ಅದರ ಒಂದು ಚಿಕ್ಕ ಪರಿಚಯ ಈ ಲೇಖನ. ಇದರಲ್ಲಿ ವಿಷಯ ದೋಷಗಳು ಹಾಗು ಭಾಷಾ ನ್ಯೂನತೆಗಳು ಕಂಡು ಬಂದರೆ ಅದು ನನ್ನ ಇತಿಮಿತಿ.

ಮನುಷ್ಯನ ಇತಿಹಾಸ  ಅಂತರಿಕ್ಷದಲ್ಲಿ ಒಂದು ಅಲ್ಪಕಾಲದ ನೆಲೆ ಮತ್ತು ಅದರ ಮೊದಲನೆಯ ಪಾಠ ನಮ್ರತೆ. ಯಾವುದೇ ಧೂಮಕೇತು ನಮ್ಮ ಭೂಮಿಗೆ ಹತ್ತಿರ ಬಂದು ನಮ್ಮ ಗ್ರಹದ ಚಲನವಲನಗಳನ್ನು ಏರುಪೇರು ಮಾಡಬಹುದು ಅಥವಾ ಇನ್ಯಾವುದೋ ಪ್ರಕೃತಿಯ ವಿಕೋಪ ನಮ್ಮ ಭೂಮಿಯನ್ನು ಅಸ್ತವ್ಯಸ್ತ ಮಾಡಬಹುದು. ಆದರೂ ಇದೆಲ್ಲಾ ಸಾಧ್ಯತೆಗಳನ್ನು ಸ್ವೀಕರಿಸಿ ಬ್ರಹ್ಮಾಂಡದ ಕಡೆಗೆ ದಾಪುಗಾಲು ಹಾಕುತ್ತೇವೆ. ಇಲ್ಲಿ ಪ್ಯಾಸ್ಕಲ್ನ ಮಾತು ನೆನೆಯಬಹುದು " ಇಡೀ ಬ್ರಹ್ಮಾಂಡವು ಅವನನ್ನ ನುಚ್ಚು ನೂರು ಮಾಡಿದರು, ಮನುಷ್ಯನು ಯಾವುದರಿಂದ ಕೊಲ್ಲಲ್ಪಟ್ಟಿರುತ್ತಾನೋ ಅದಕ್ಕಿಂತ ಶ್ರೇಷ್ಠ
ವಾಗಿರುತ್ತಾನೆ, ಯಾಕೆಂದರೆ ಅವನಿಗೆ ಅವನ ಸಾವಿನ ಅರಿವಿರುತ್ತದೆ ಆದರೆ ಬ್ರಹ್ಮಾಂಡಕ್ಕೆ ಅದರ ವಿಜಯದ ಬಗ್ಗೆ ಏನೂ ಅರಿವಿರುವುದಿಲ್ಲ". ತಂತ್ರಜ್ನ್ಯಾನದ ಬೆಳವಣಿಗೆಯೊಂದ್ದಿಗೆ ಭೂಗೋಳದ ಪ್ರಾಬಲ್ಯ ಕ್ಷೀಣಿಸುತ್ತದೆ. ಪ್ರಾದೇಶಿಕ ಪ್ರಾಂತ್ಯದ ನೆಲಹರಹು ವ್ಯವಸಾಯ, ಗಣಿಗಾರಿಕೆ ಅಥವಾ ವಾಣಿಜ್ಯಕ್ಕೆ ಒದಗಿಬಂದರೂ, ಆ ಸಾಧ್ಯತೆಯನ್ನು ಸತ್ಯಸಂಗತಿ ಮಾಡುವುದು ನಾಯಕರ ಕಲ್ಪನಾಶಕ್ತಿ ಹಾಗು ಉದ್ಯಮಶೀಲತೆ. ಮನುಷ್ಯನಿಂದ ನಾಗರಿಕತೆಯೇ ಹೊರತು ಭೂಮಿಯಿಂದ ಅಲ್ಲ.

ಇತಿಹಾಸವು  ಜೀವವಿಜ್ಞಾನದ  ತುಣುಕು, ಮನುಷ್ಯ ಜೀವನ ಸಹಸ್ರಾರು ನೆಲ ಹಾಗು ಸಮುದ್ರ ಜೀವರಾಶಿಗಳ ಒಂದು ಭಾಗ. ಯಾವುದೊ ಒಂದು ದಟ್ಟ ಅರಣ್ಯಕ್ಕೆ ಕಾಲಿಟ್ಟರೆ ಗೊತ್ತಾಗುವುದು ನಾವು ಅಲ್ಪಸಂಖ್ಯಾತ ಜೀವ ರಾಶಿಗಳಲ್ಲಿ ಒಬ್ಬರು ಹಾಗು ನಮ್ಮ ಜೀವನ ಎಷ್ಟು ದುರ್ಬಲವೆಂಬುದು. ಆದ್ದರಿಂದ ಜೀವವಿಜ್ನ್ಯಾನದ ನಿಯಮಗಳು ಇತಿಹಾಸದ ಮೂಲಭೂತ ನಿಯಮಗಳು. ಇದರಲ್ಲಿ ಮೊದಲನೆಯ ಪಾಠ, ಬದುಕು ಒಂದು ಸ್ಪರ್ಧೆ.  ಇಲ್ಲಿ ಸ್ಪರ್ಧೆ ಎಂಬುದು ಜೀವನದಲ್ಲಿನ ವ್ಯಾಪಾರವಲ್ಲ ಜೀವನದ ವ್ಯಾಪಾರವೇ - ಆಹಾರ ಸಮೃದ್ಧಿಯಿಂದ ಇರುವಾಗ ಶಾಂತಿ; ತಿನ್ನುವ ಬಾಯಿ ಆಹಾರವನ್ನು ಮೀರಿದಾಗ ಹಿಂಸೆ. ಪ್ರಾಣಿಗಳು ಒಂದ್ನೊಂದು ಮುಜುಗರವಿಲ್ಲದೆ ತಿನ್ನುತ್ತದೆ; ನಾಗರಿಕ ಮನುಷ್ಯರು ಒಬರನ್ನೊಬ್ಬರು ಕಾನೂನಿನ ವ್ಯವಹಾರದಲ್ಲಿ ತಿನ್ನುತ್ತಾರೆ. 

ಇತಿಹಾಸದ ಎರಡನೇ ಜೀವವಿಜ್ಞಾನದ ಪಾಠವೆಂದರೆ ಬದುಕು ಒಂದು ಆಯ್ಕೆ. ಆಹಾರ ಅಥವಾ ಸಂಗಾತಿಯ ಅಥವಾ ಅಧಿಕಾರದ ಸ್ಪರ್ಧೆಯಲ್ಲಿ ಕೆಲವು ಜೀವಿಗಳು ಗೆಲ್ಲುತ್ತವೆ ಮತ್ತೆ ಕೆಲುವು ಸೋಲುತ್ತವೆ. ಉಳ್ಳಿವಿನ ಈ ಸ್ಪರ್ಧೆಯಲ್ಲಿ ಕೆಲವರು ಬೇರೆಯವರಿಗಿಂತ ಹೆಚ್ಚು ಶಕ್ತರಾಗಿರುತ್ತಾರೆ. ಸಮಾನತೆಯ ಕಲ್ಪನಾಲೋಕ ಜೀವಶಾಸ್ತ್ರದಲ್ಲಿ ನಿಲ್ಲ ತಕದಲ್ಲ. ಈ ಅಸಮಾನತೆ ಸ್ವಾಭಾವಿಕ ಮಾತ್ರವಲ್ಲ ಅದು ಜನ್ಮಜಾತ ಹಾಗು ನಾಗರಿಕತೆಯ ಜಟಿಲತೆಯ ಜೊತೆಗೆ ಬೆಳೆಯುತ್ತದೆ. 

ಇತಿಹಾಸದ ಮೂರನೇ ಜೀವವಿಜ್ಞಾನದ ಪಾಠ ಜೀವವು ವಂಶವನ್ನು ವೃದ್ಧಿಗೊಳ್ಳಿಸಬೇಕು. ಪ್ರಕೃತಿಯಲ್ಲಿ ಯಾವ ಜೀವರಾಶಿಗೆ ಸಮೃದ್ಧವಾಗಿ ಪುನರುತ್ಪಾದಿಸುವ ಸಾಮರ್ಥ್ಯವಿರುವುದಿಲ್ಲವೋ ಅದಕ್ಕೆ ಉಪಯೋಗವಿಲ್ಲ. ಅವಳಿಗೆ ಗುಣಮಟ್ಟಕ್ಕಿಂತ ಪ್ರಮಾಣವೇ ಆದ್ಯತೆ. ಅವಳಿಗೆ ವಂಶವು ಒಬ್ಬ ವ್ಯಕ್ತಿಗಿಂತ ಮುಖ್ಯವಾಗುತ್ತದೆ, ನಾಗರಿಕತೆ ಹಾಗು ಬರ್ಬರತೆಯ ನಡುವೆ ಯಾವುದೇ ತಾರತಮ್ಯಮಾಡುವುದಿಲ್ಲ. ಹೆಚ್ಚಿನ ಜನ ಪ್ರಮಾಣದೊಂದಿಗೆ ನಾಗರಿಕತೆಯ ಸಂಸ್ಕೃತಿಯು ಇಳಿಮುಖಗೊಳುತ್ತದೆ ಹಾಗು ಕಡಿಮೆ ಜನ ಪ್ರಮಾಣದದೊಂದಿಗೆ ಸಂಸ್ಕೃತಿಯು ಉತ್ಕೃಷ್ಟವಾಗಿರುತ್ತದೆ ಎಂಬುದು ಅವಳ ಗಣನೆಗೆ ಬಾರದು. ಹೀಗೆ ಇತಿಹಾಸದಂತಹ ಹಾಸ್ಯಗಾರ ಮತ್ತೊಬನಿಲ್ಲ.

ಸಮಾಜವು ಆದರ್ಶದ ಮೇಲೆ ನಿರ್ಮಾಣವಾಗುವುದಿಲ್ಲ, ಅದು ಮನುಷ್ಯನ ಸ್ವಭಾವ ಮತ್ತೆ ಅವನ ರಚನೆಯೊಂದಿಗೆ ರೂಪಗೊಳುತ್ತದೆ. ಆಗಾದರೆ ಅವನ ರಚನೆ ಎಂತಹದು ಹಾಗು ಅವನ ಸ್ವಭಾವವು ಇತಿಹಾಸದೊಂದಿಗೆ ಬದಲಾಗಿದಿಯೇ? ಎಂಬುದು ಸಾಮಾನ್ಯ ಪ್ರಶ್ನೆ. ಮನುಷ್ಯನ ಬೆಳವಣಿಗೆ ಜೈವಕಿಂತಲೂ ಸಾಮಾಜಿಕವಾದುದು. ಈ ಸಾಮಾಜಿಕ ಬೆಳವಣಿಗೆ ಸಂಪ್ರದಾಯ ಮತ್ತೆ ಹೊಸತನದ ಅನ್ಯೋನ್ಯ ಕ್ರಿಯೆಯಿಂದ ಉಂಟಾಗುವುದು. ಹೊಸತನವು ಬುದ್ಧಿಶಕ್ತಿಯ ಉತ್ಪತ್ತಿ, ಅದು ಪ್ರಬಲವಾಗಿ ಇರುವುದಲ್ಲದೆ ವಿನಾಶಕಾರಕವು ಆಗಬಹುದು. 

ನೈತಿಕತೆ ಅಥವಾ ಮಾನವೀಯ ಮೌಲ್ಯಗಳು ಇತಿಹಾಸದಲ್ಲಿ ಕಾಲಕ್ಕೆ ಅನುಗುಣವಾಗಿ ಒಂದಷ್ಟು ಬದಲಾವಣೆಗಳನ್ನು ಹೊಂದಿವೆ. ಬಹುಶ: ಪ್ರತಿ ದೋಷವು ಯಾವುದೋ ಒಂದು ಕಾಲದಲ್ಲಿ ಸದ್ಗುಣ ವಾಗಿದ್ದು ಒಬ್ಬ ವ್ಯಕ್ತಿ, ಕುಟುಂಬ ಅಥವಾ ಒಂದು ಗುಂಪಿನ ಉಳಿಯುವಿಕೆಗೆ ಅತ್ಯವಶ್ಯ ವಾಗಿದ್ದಿರಬಹುದು. ಮನುಷ್ಯನ ಪಾತಕಗಳು ಅವನ ಪತನದ ಕಳಂಕವಲ್ಲದೆ ಅವನ ಏಳಿಗೆಯ ಕುರುಹುಗಳಾಗಿರಬಹುದು. ನಾವು ಪದೇ ಪದೇ ನೆನಪು ಮಾಡುಕೊಳ್ಳ ಬೇಕಾದ್ದು ಏನೆಂದರೆಇತಿಹಾಸವನ್ನು ಬರೆದಿರುವದಕ್ಕು ಅದು ನೆಡೆದದಕ್ಕೂ ವ್ಯತ್ಯಾಸವಿರುವುದು; ಇತಿಹಾಸಗಾರನು ಅಸಾಧಾರಣ ವಾದದನ್ನು ದಾಖಲಿಸುವನು ಯಾಕೆಂದರೆ ಅದು ಸ್ವಾರಸ್ಯವಾದುದ್ದು ಮತ್ತು ಅನನ್ಯಸಾಧಾರಣ. ಆದ್ದರಿಂದ ನಾವು ನಮ್ಮ ಕಾಲದ ನೈತಿಕ ಅಸಡ್ಡೆಯನ್ನು ಅದರ ಕ್ಷೀಣತೆ ಇಲ್ಲವೇ  ಕೃಷಿ ಆಧಾರಿತ ಸಮಾಜದಿಂದ ಕೈಗಾರಿಕೆ ಆಧಾರಿತ ಸಮಾಜದ ಸಂತೋಷಕರ ಮಾರ್ಪಾಟು ಹೊಂದು ತಿರುವ ಸಸ್ತನಿ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.   

ಯಾವ ಒಬ್ಬ ಮನುಷ್ಯನೂ, ಎಷ್ಟೇ ಬುದ್ಧಿವಂತನು ಅಥವಾ ಬಹುಶ್ರುತನಾಗಿದ್ದರು, ಒಂದು ಜೀವಾವಧಿಯಲ್ಲಿ ಪೂರ್ಣ ತಿಳುವಳಿಕೆ ಹೊಂದಿದ್ದು ಸಂಪ್ರದಾಯ ಮತ್ತೆ ಸಾಮಾಜಿಕ ಸಂಸ್ಥೆಯ ಬಗ್ಗೆ  ನಿಸ್ಸಂದೇಹವಾದ ತೀರ್ಮಾನದಿಂದ ನಿರ್ಲಕ್ಷಿಸಲು ಸಾಧ್ಯವಿಲ್ಲ, ಯಾಕೆಂದೆರೆ ಅದು ಇತಿಹಾಸದ ಪ್ರಯೋಗಶಾಲೆಯಲ್ಲಿ ಶತಮಾನಗಳಿಂದ ನಡೆದ ಪ್ರಯೋಗದ ವಿವೇಕ ಸಾರ. ಹೀಗಾಗಿ ಒಬ್ಬ ಸಂಪ್ರದಾಯವಾದಿ ಕ್ರಾಂತಿವಾದಿಯಷ್ಟೇ ಅಮೂಲ್ಯನು - ಪ್ರಾಯಶಃ ಇನ್ನು ಹೆಚ್ಚಾಗಿ ಯಾಕೆಂದರೆ ಬೇರು ಕಸಿಗಿಂತ ಪರಮೋಚ್ಚ. ಹೊಸ ವಿಚಾರಗಳನ್ನು ಎಲ್ಲರ ಉಪಯೋಗಕ್ಕಾಗಿ ಕೇಳಬೇಕು ಆದರೆ ಅದು ಎಲ್ಲರ ಆಕ್ಷೇಪಣೆ, ವಿರೋಧದ ಬೆಂಕಿಯಲ್ಲಿ ಬೆಂದು, ಬದುಕಿ ಉಳಿದು ಮನುಕುಲವನ್ನು ಸೇರಬೇಕು. ಹಳೆಯದು ಹೊಸದನ್ನು ಪ್ರತಿಭಟಿಸಬೇಕು ಹಾಗು ನವೀನವು ಹಳೆಯದನ್ನು ಪ್ರಚೋದಿಸಬೇಕು, ಈ ಬಿಗಿತದ ಪರಿಣಾಮ ಕ್ರಿಯಾತ್ಮಕ ಕರ್ಷಕ ಶಕ್ತಿ, ಉತ್ತೇಜಿತ ಅಭಿವೃದ್ಧಿ, ಮೂಲಭೂತ ಐಕ್ಯತೆ ಹಾಗು ಸಮಸ್ತದ ಚಲನೆ.

ಒಬ್ಬ ಮನುಷ್ಯನು ಅದೃಷ್ಟವಂತನಾಗಿದ್ದರೆ, ಅವನ ಬದುಕಿನಲ್ಲಿ ಅವನಿಗೆ ಸಾಧ್ಯವಾದಷ್ಟು ಅವನ ಶ್ರೀಮಂತ ಪರಂಪರೆಯ ಪ್ರಾಪ್ತಿ ಹೊಂದಿ ಅವನ ಮಕ್ಕಳಿಗೆ ತಲುಪಿಸಲು ಸಾಧ್ಯವಾಗುವುದು . ಅವನ ಕಡೆಯ ಉಸಿರಿನಲ್ಲಿ ಅವನಿಗೆ ಕೃತಜ್ಞಾಭಾವ ಬರುವುದು ಈ ಅಕ್ಷಯ ಪರಂಪರೆಯು ನಮ್ಮ ತಾಯಿಯಂತೆ ಪೋಷಿಸುವುದು ಮತ್ತೆ ಸ್ಥಿರವಾದುದು ಎಂಬ ಜ್ಞಾನದಿಂದ. ಹೀಗಾಗಿ ನಾವು ನಮ್ಮ ಎಲ್ಲ ಪೂರ್ವಿಕರು ನಮ್ಮಗೆ ಕಲ್ಪಿಸಿಕೊಟ್ಟ ಸಂಸ್ಕಾರಗಳನ್ನು ಸ್ಮರಿಸುತ್ತ, ಶ್ರದ್ಧಾಜಾಡ್ಯವಿಲ್ಲದೆ ಪ್ರಗತಿಯ ಕಡೆಗೆ ನಡೆಯೋಣ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ