ಹಳೇ ಬೇರು ,ಹೊಸ ಚಿಗುರು!

ಸಂಧ್ಯಾ ಹೊನ್ನವಳ್ಳಿ 

"ಶತಾಯುರ್ವಜ್ರದೇಹಾಯಾ ಸರ್ವಸಂಪತ್ಕರಾಯಚ ಸರ್ವಾರಿಷ್ಠ ವಿನಾಶಾಯ ನಿಂಬಕಂ ದಳಭಕ್ಷಣಂ" ಎಂದು ಹೇಳುತ್ತಾ ಬೇವು ಬೆಲ್ಲ ಹಂಚಿ ತಿಂದು, ಜೀವನದಲ್ಲಿ ಬರುವ ಸುಖ-ದುಃಖಗಳು, ಏರು-ಪೇರುಗಳು, ಸೋಲು-ಗೆಲುವುಗಳು, ಒಳಿತು-ಕೆಡುಕುಗಳು ಮತ್ತು ಹಿಗ್ಗು-ಕುಗ್ಗುಗಳನ್ನು ಸಮಾನ ರೀತಿಯಲ್ಲಿ ಸ್ವೀಕರಿಸುತ್ತಾ, ನೂರು ಕಾಲ ಆರೋಗ್ಯವಂತರಾಗಿ ಬಾಳಿರೆಂದು ಸಾರುವ ಹಬ್ಬ ಯುಗಾದಿ. ಪ್ರಕೃತಿದೇವಿಯ ಮಡಿಲಲ್ಲಿ ಕಾಣುವ ಹೊಸ ಎಳೆಗಳು, ಮೊಗ್ಗುಗಳು, ಬೀಸುವ ಹೊಸ ಗಾಳಿ, ಬೀರುವ ಹೊಸ ಹೊಂಗಿರಣ, ಭೃಮ್ಗಗಳ ಗೀತೆ, ಹಕ್ಕಿಗಳ ಇಂಚರ, ಕೋಗಿಲೆಯ ಮಧುರ ಗಾನ, ಒಂದೇ ಎರಡೇ? ಎಲ್ಲವೂ ನಯನ ಮನೋಹರ, ಕರ್ಣಾನಂದಕರ. ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಗಿಡ ಮರಗಳ ಹಳೇ ಬೇರಿನಿಂದ ಹೊಸ ಚಿಗುರು ಮೂಡುವ ಸುಂದರ ಸಮಯ.

ಆದರೆ ಈ ಬೇರು, ಚಿಗುರು ಕೇವಲ ಗಿಡ ಮರಗಳಿಗೇ ಅನ್ವಯಿಸುವುದೇಕೆ? ಕೇವಲ ಯುಗಾದಿಯ ಸಮಯಕ್ಕೇ ಮೀಸಲೇಕೆ? ನಮ್ಮ ದಿನನಿತ್ಯದ ಜೀವನದಲ್ಲಿ, ನಮ್ಮ ಸುತ್ತಮುತ್ತಲಿನಲ್ಲೇ ನಡೆಯುವ ಎಷ್ಟೋ ಘಟನೆಗಳಲ್ಲಿ, ಒದಗುವ ಸಂದರ್ಭಗಳಲ್ಲಿ ನಾವು ಈ "ಹಳೇ ಬೇರು ಹೊಸ ಚಿಗುರಿನ" ಉದಾಹರಣೆಗಳನ್ನೂ, ಸಾದೃಶ್ಯಗಳನ್ನೂ ಖಂಡಿತ ಕಾಣಬಹುದು. ನಮ್ಮ ಬಾಳಿನ ಹಳೆಯ ನೆನಪುಗಳೇ ಹಳೇ ಬೇರುಗಳು. ನಮ್ಮ ನಾಳಿನ ಸುಂದರ ಕನಸುಗಳೇ ಹೊಸ ಚಿಗುರುಗಳು. ನಾವು ನಮ್ಮ ಹಿರಿಯರಿಂದ ಕಲಿತಿದ್ದೆಲ್ಲಾ ಹಳೇ ಬೇರು. ನಾವು ಕಲಿತಿದ್ದನ್ನು ನಮ್ಮ ಮಕ್ಕಳಿಗೆ ಹೇಳಿಕೊಟ್ಟು ಅವರು ಅದನ್ನು ಪಾಲಿಸಿದಾಗ ಅದು ಹೊಸ ಚಿಗುರು. ಅನಾದಿ ಕಾಲದಿಂದಲೂ ನಮ್ಮ ಋಷಿ ಮುನಿಗಳು ಬೋಧಿಸಿರುವ ಸಿದ್ಧಾಂತಗಳನ್ನೂ, ತತ್ವಗಳನ್ನು, ನೀತಿಗಳನ್ನೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವುಗಳಿಗೆ ಇಂದಿನ ವೈಜ್ನ್ಯಾನಿಕ ಜ್ನ್ಯಾನವನ್ನು ಅನ್ವಯಿಸಿ, ಯಶಸ್ವಿಯಾಗಿ ಬಾಳ್ವೆ ನಡೆಸುವುದು  "ಹಳೇ ಬೇರು, ಹೊಸ ಚಿಗುರು" ಅಲ್ವೇ?  

ದೃಢವಾಗಿ ಬೇರೂರಿದ ಹೆಮ್ಮರದಲ್ಲಿ  ಪ್ರತಿ ವಸಂತದಲ್ಲೂ, ನೂರಾರು ಹಣ್ಣೆಲೆಗಳ ನಡುವೆ, ಹತ್ತಾರು ಚಿಗುರೆಲೆಗಳು ಕಾಣುವಾಗ, ಮುತ್ತಜಿಯ ತೊಡೆಯ ಮೇಲೆ ಕೂತ ಮುದ್ದಾದ ಮರಿಮಗುವಿನ ಚಿತ್ರ ನೋಡಿದಾಗ, ಪ್ರೌಢತೆ ಮತ್ತು ಮುಗ್ಧತೆ ಇವೆರಡೂ ಅಕ್ಕಪಕ್ಕದಲ್ಲೇ ಕಂಡಾಗ ವಿಸ್ಮಯದಿಂದ ನನಗನ್ನಿಸಿದ್ದು "ಇದು ಖಂಡಿತ ಹಳೇ ಬೇರು, ಹೊಸ ಚಿಗುರು". 

ಹೊಸ ಮದುಮಗಳು ತನ್ನ ಅಮ್ಮ, ಅಜ್ಜಿಯರಿಂದ ಕಲಿತ ನಳಪಾಕ ಮೊದಲಬಾರಿಗೆ ಇಳಿಸಿ, ಅದಕ್ಕೆ ಅನನ್ಯವಾಗಿ ನಾಮಕರಣ ಮಾಡಿ, ಹೊಚ್ಚ ಹೊಸ ಪರಿಯಲ್ಲಿ ತನ್ನ ಗಂಡನ ಮುಂದೆ ಸೊಗಸಾಗಿ ಪ್ರಸ್ತುತಪಡಿಸಿ ಹಿಗ್ಗಿದಾಗ, ತಕ್ಷಣ ನನಗನ್ನಿಸಿದ್ದು "ಇದೋ ನೋಡಿ ಹಳೇ ಬೇರು, ಹೊಸ ಚಿಗುರು". 

ವಿದೇಶದಲ್ಲಿರುವ ಎಂಟು ವರ್ಷದ ತುಂಟ ಬಾಲಕ, ಶ್ರದ್ಧೆಯಿಂದ ವೇದ ಮಂತ್ರ ಪಠಣ ಮತ್ತು ಸಂಧ್ಯಾವಂದನೆ ಮಾಡುವುದನ್ನು ನೋಡಿದಾಗ, ಆಶ್ಚರ್ಯದಿಂದ ನನಗನ್ನಿಸಿದ್ದು "ಇದೇ ಅಲ್ವೇ ಹಳೇ ಬೇರು, ಹೊಸ ಚಿಗುರು". 

ನಿರ್ಣಾಯಕ ಶಸ್ತ್ರಚಿಕಿತ್ಸೆ ಮಾಡಲು ಹೊರಡುವ ಮುನ್ನ, ಹೆಸರಾಂತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಲ್ಲಿ ಓದಿ ಉತ್ತೀರ್ಣನಾಗಿರುವ ಯುವ ವೈದ್ಯ, ಗಣಪತಿ ವಿಗ್ರಹಕ್ಕೆ ನಮಿಸಿ ಆತ್ಮವಿಶ್ವಾಸದಿಂದ ಮುಂದೆ ಹೆಜ್ಜೆ ಇಡುವುದನ್ನು ಕಂಡಾಗ, ಸಂತೋಷದಿಂದ ನನಗನ್ನಿಸಿದ್ದು "ಇದು ಹಳೇ ಬೇರು ಹೊಸ ಚಿಗುರು ಅಲ್ದೇ ಮತ್ತೇನು?". 

ಅತ್ಯಂತ ಉನ್ನತ ಮಟ್ಟದ ವಿಜ್ನ್ಯಾನಿಯು, ಅತಿ ಮುಖ್ಯವಾದ ಬಾಹ್ಯಾಕಾಶ ಉಪಗ್ರಹ ಉಡಾವಣೆಯ ದಿನದಂದು ತನ್ನ ತಾಯಿ ತಂದೆಯರ ಚರಣಸ್ಪರ್ಶ ಮಾಡಿ ಆಶೀರ್ವಾದ ಪಡೆದು ತನ್ನ ಕಾರ್ಯಸಿದ್ಧಿಯತ್ತ ಕಿರುನಗೆ ಹೊತ್ತು ಹೊರಟಾಗ, ನಿಸ್ಸಂಶಯವಾಗಿ ನನಗನ್ನಿಸಿದ್ದು "ಇದು ನೂರಕ್ಕೆ ನೂರು ಹಳೇ ಬೇರು, ಹೊಸ ಚಿಗುರು". 

ಕಾರಣಂತರಗಳಿಂದ ಸ್ವದೇಶವನ್ನು ತೊರೆದು ವಿದೇಶಕ್ಕೆ ಬಂದು, ನಮ್ಮ ಡಾಲಸ್ನಂತಹ ಊರಿನಲ್ಲಿ ನೆಲೆಸಿರೋ ಯುವಪೀಳಿಗೆಯ ಕನ್ನಡಿಗರು "ಕನ್ನಡ ಸಾಹಿತ್ಯ ಘೋಷ್ಟಿ" ಸುಸೂತ್ರವಾಗಿ ನಡೆಸಿದಾಗ, ಉತ್ಸಾಹದಿಂದ ಕನ್ನಡ ಸಂಘವೆಂಬ ಸಸಿಯನ್ನು ನೆಟ್ಟು, ನೀರೆರೆದು ಪೋಷಿಸಿ ಹೆಮ್ಮರವಾಗಿ ಬೆಳೆಸಿ, ಮಲ್ಲಿಗೆಯ ಕಂಪನ್ನು ಎಲ್ಲೆಡೆ ಪಸರಿಸುತ್ತಿರುವಾಗ, ಕನ್ನಡ ನಾಡು, ಭಾಷೆ ಮತ್ತು ಸಾಹಿತ್ಯಗಳನ್ನು ಹಿರಿಯರು ಕಿರಿಯರು ಕೂಡಿ ಸಂಭ್ರಮದಿಂದ ಆಚರಿಸುತ್ತಿರುವಾಗ, ಹೆಮ್ಮೆಯಿಂದ ನನಗನ್ನಿಸಿದ್ದು ....... "ಇದುವೇ ಹಳೇ ಬೇರು, ಹೊಸ ಚಿಗುರು". 

ಹಳೇ ಬೇರುಗಳಿಂದ ಕಲಿಯುವುದು ಬಹಳಷ್ಟಿದೆ. ಹೊಸ ಚಿಗುರುಗಳು ಚಿಗುರಲು ಯುಗಾದಿಯೇ ಆಗಬೇಕಾಗಿಲ್ಲ. ಬೇರುಗಳಂತೆ ನಾವು ಯಾವಾಗಲೂ ಭೂಮಿಯಲ್ಲಿ ಸ್ಥಿರವಾಗಿ ನಿಂತು, ಚಿಗುರೆಲೆಗಳಂತೆ ಯಾವಾಗಲೂ ಆಕಾಶದತ್ತ ನೋಡುತ್ತಾ ಎತ್ತರವಾಗಿ ಬೆಳೆಯಬೇಕು. ಇದು ಸತತವಾಗಿ ನಿರಂತರವಾಗಿ ಸಾಗಬೇಕು. ಆಗಲೇ ಬದುಕು ಸಾರ್ಥಕ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ