ಅಧ್ಯಕ್ಷರ ಸಂದೇಶ - ಯುಗಾದಿ 2018

ವತ್ಸ ರಾಮನಾಥನ್ 

ಮಲ್ಲಿಗೆ ಕನ್ನಡ ಸಂಘದ ಸದಸ್ಯರಿಗೆ ನನ್ನ ಪ್ರೀತಿಯ ಯುಗಾದಿ ಶುಭಾಶಯಗಳು,

ಹೊಸ ವರುಷಕೆ, ಹೊಸ ಹರುಷವ..  ಹೊಸತು ಹೊಸತು ತರುತಿದೆ .. ಎನ್ನುವ ಹಾಗೆ ಮಲ್ಲಿಗೆ ಕನ್ನಡ ಸಂಘವು ಪ್ರತಿ ವರ್ಷ ಹೊಸ ತರಹದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದೆ. ಕರ್ನಾಟಕದ ಸುಗಮ ಸಂಗೀತ ಪ್ರಪಂಚದ ಸಾಮ್ರಾಟರಾದ ದಿ।। ಶ್ರೀ ಅನಂತಸ್ವಾಮಿಯವರ ಪುತ್ರಿಯರು ಶ್ರೀಮತಿ ಅನಿತಾ ಮತ್ತು ಶ್ರೀಮತಿ ಸುನೀತಾ ಅನಂತಸ್ವಾಮಿ ನಮ್ಮ ಉಗಾದಿ ಕಾರ್ಯಕ್ರಮಕ್ಕೆ ಬಂದು ಅವರ ಸುಶ್ರಾವ್ಯ ಸಂಗೀತದಿಂದ ನಮ್ಮನ್ನು ಮನರಂಜಿಸಲಿದ್ದಾರೆ. ಕನ್ನಡ ಸಾಹಿತ್ಯ ಗೋಷ್ಠಿ ಸದಸ್ಯರಿಂದ ಹಳೆಗನ್ನಡದ ನಾಟಕ. ಎಲ್ಲ ಹೊಸ ಹೊಸ ತರಹದ ಕಾರ್ಯಕ್ರಮಗಳು... 

ನಿಮ್ಮೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ, ಹೊರನಾಡು ಕನ್ನಡಿಗರ ಅತಿ ದೊಡ್ಡ ಸಂಸ್ಥೆಯಾದ "ಅಮೆರಿಕಾ ಕನ್ನಡ ಕೂಟಗಳ ಆಗರ" - ಅಕ್ಕ, ಮಲ್ಲಿಗೆ ಕನ್ನಡ ಸಂಘದ ಜೊತೆಗೂಡಿ ನಮ್ಮ ಡಲ್ಲಾಸ್ ನಲ್ಲಿ ಅಕ್ಕ ಸಮಾವೇಶವನ್ನು ನಡೆಸುತ್ತಿದ್ದಾರೆ. ಈ ಸಮಾವೇಶಕ್ಕೆ ಮೈಸೂರಿನ ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು, ಪ್ರಖ್ಯಾತ ವಿಜ್ಞಾನಿ  ಸಿ.ಏನ್.ಆರ್. ರಾವ್ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಆಹ್ವಾನಿಸಲಾಗಿದೆ. ಅಕ್ಕ ಸಂಘದ ಪ್ರಮುಖರ ಜೊತೆಗೆ ಮಹಾರಾಜರನ್ನು ಆಹ್ವಾನಿಸಲು ಹೋಗುವ ಅವಕಾಶ ಭಾಗ್ಯ ನನಗೆ ಸಿಕ್ಕಿತ್ತು ಎಂದು ನಿಮಗೆ ತಿಳಿಸಲು ಸಂತೋಷವಾಗುತ್ತಿದೆ. 

ಕಳೆದ ಒಂಬತ್ತು ಸಮಾವೇಶಗಳಿಗಿಂತ ವಿಭಿನ್ನವಾಗಿ, ವಿಜೃಂಭಣೆಯಿಂದ ಡಲ್ಲಾಸ್ ಕನ್ನಡ ಕುಟುಂಬದವರ ಮುಂದಾಳತ್ವದಲ್ಲಿ  "ಅಕ್ಕರೆಯ ಹತ್ತು-ಸಾರ್ಥಕ ಹೊತ್ತು" ಎಂದು ಹತ್ತನೆಯ ಸಮಾವೇಶವನ್ನು ನಡೆಸಲು ನಿಮ್ಮೆಲ್ಲರ ಸಹಕಾರ ಬಹಳ ಅತ್ಯಗತ್ಯ. ಈ ಸಮಾವೇಶವನ್ನು ಯಶಸ್ವಿಯಾಗಿ ನಡೆಸಲು ನಿಮ್ಮ ತನು, ಮನ ಹಾಗು ಧನ ಸಹಾಯ ಬಹಳ ಮುಖ್ಯ. ನಮ್ಮ ಊರಿನಲ್ಲಿ ಇಂತಹ ಒಂದು ದೊಡ್ಡ ಕನ್ನಡ ಸಮಾವೇಶ ಇಲ್ಲಿಯವರೆಗೆ ನಡೆದಿಲ್ಲ, ಇನ್ನು ಮುಂದೆ ನಮಗೆ ಇಂತಹ ಅವಕಾಶ ಮತ್ತೆ ಯಾವಾಗ ದೊರೆಯುತ್ತದೆ  ಎಂದು ಗೊತ್ತಿಲ್ಲ. ಅತ್ಯುನ್ನತ ಮಟ್ಟದಲ್ಲಿ ಈ ಸಮಾವೇಶವನ್ನು ನಡೆಸಲು ಹಣದ ವೆಚ್ಚ ಬಹಳ ಇರುವುದರಿಂದ, ನಾವೆಲ್ಲರೂ ನಮ್ಮ ಶಕ್ತ್ಯಾನುಸಾರ ಧನ ಸಹಾಯವನ್ನು ಮಾಡಿದ್ದಲ್ಲಿ ಹನಿ ಹನಿಗೂಡಿದರೆ ಹಳ್ಳ .. ತೆನೆ ತೆನೆಗೂಡಿದರೆ ಬಳ್ಳ ಎನ್ನುವಹಾಗೆ  ಈ ವೆಚ್ಚವನ್ನು ಹಂಚಿಕೊಳ್ಳಬಹುದು. ದಯವಿಟ್ಟು ತುಂಬು ಹೃದಯದ ಔಧಾರ್ಯತೆಯಿಂದ ಸಹಕಾರ ಮಾಡಿ ಎಂಬ ನನ್ನ ಮನವಿ. Registration package ತೆಗೆದುಕೊಂಡರೆ ನಿಮಗೆ ಹೋಟೆಲ್ room ಮತ್ತೆ VVIP ಸೀಟಿಂಗ್ ಹಾಗು ಸಮಾವೇಶಕ್ಕೆ ಬರುವ ಪ್ರಸಿದ್ಧ ವ್ಯಕ್ತಿಗಳ ಜೊತೆಯಲ್ಲಿ ಭೋಜನ ಮುಂತಾದ ವ್ಯವಸ್ಥೆಗಳು ಲಭ್ಯವಾಗುತ್ತದೆ.  ದಯವಿಟ್ಟು ಇದರ ಬಗ್ಗೆ ವಿಚಾರ ಮಾಡಿ ಸಹಕರಿಸಿ. 

ಯುಗಾದಿ ಹಬ್ಬದ ಈ ಕಾರ್ಯಕ್ರಮದ ನಂತರ ನಾವೆಲ್ಲರೂ ಅಕ್ಕ ಸಮಿತಿ ಕೆಲಸಗಳಲ್ಲಿ ತೊಡಗಿಬಿಡುತ್ತೇವೆ, ಇನ್ನು ೫ ತಿಂಗಳು ಡಲ್ಲಾಸ್ ಕನ್ನಡ ಕುಟುಂಬದಾವೆರೆಲ್ಲರೂ ಒಟ್ಟಾಗಿ ಸೇರಿ, ಸಂತೋಷ ಸಂಭ್ರಮಗಳಿಂದ ಕಾರ್ಯನಿರ್ವಹಿಸೋಣ.. ಮಜಾ ಮಾಡೋಣ!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ