ಶ್ರೀಮತಿ ವಿದ್ಯಾ ದತ್ತ
ಆತ್ಮೀಯ ಮಲ್ಲಿಗೆ ಕನ್ನಡ ಸಂಘದ ಬಂಧು ಮಿತ್ರರಿಗೆಲ್ಲ ೨೦೧೪ ರ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ನಮ್ಮ ಮಲ್ಲಿಗೆ ಕನ್ನಡ ಸಂಘವು ಪ್ರಾರಂಭವಾಗಿ ಇಲ್ಲಿಗೆ ೨೦ ವರ್ಷಗಳು ಸಂದಿರುವುದರಿಂದ, ಈ ಬಾರಿಯ ಸಂಘದ ಉತ್ಸವದ ಆಚರಣೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ನಮ್ಮ ಕನ್ನಡ ಸಂಘವು ಕನ್ನಡದ ದೀಪವನ್ನು ಪ್ರಜ್ವಲವಾಗಿ ಬೆಳಗಿಸುವತ್ತ ಭರದಿಂದ ಸಾಗಿದೆ ಎಂಬುವುದರಲ್ಲಿ ಎರಡನೆ ಮಾತೇ ಇಲ್ಲ.
ಈ ಬೆಳವಣಿಗೆಯನ್ನು ಅರಿತು ಅದನ್ನು ಉಳಿಸಿಕೊಂಡು, ಬೆಳಸಿಕೊಂಡು ಪ್ರಗತಿ ಪಥದಲ್ಲಿ ಸಾಗುವ ಮಹದಾಸೆಯಿಂದ, ನಮ್ಮ ನೂತನ ಸಮಿತಿಯವರ ಕಾರ್ಯಾಚರಣೆ ಉತ್ಸಾಹದಿಂದ ಸಾಗಿದೆ. ಇದಕ್ಕೆ ಪೂರಕವಾಗಿ ಅದು ಈಗಾಗಲೆ ಅನೇಕ ಕಾರ್ಯ ಚಟುವಟಿಕೆಗಳನ್ನು ನಡೆಸಿದೆ. ಮೊದಲಿಗೆ, ವರ್ಷಾರಂಭದಲ್ಲಿ MKANT SPORTS ಮತ್ತು PICNIC ಕಾರ್ಯಕ್ರಮವನ್ನು ನಡೆಸಿತು. ತದ ನಂತರ ನಡೆಸಿದ ಯಕ್ಷಗಾನ ಕಾರ್ಯಕ್ರಮ ಹಾಗೂ ಮುಖ್ಯ ಮಂತ್ರಿ ಚಂದ್ರುರವರ ರಸ ಸಂಜೆ ಕಾರ್ಯಕ್ರಮಗಳು ಎಲ್ಲರ ಮನಸ್ಸನ್ನು ಮುದಗೊಳಿಸಿ ಅತಿ ಸಂಭ್ರಮವನ್ನು ಉಂಟು ಮಾಡಿತು. ಇದಲ್ಲದೆ, ಸ್ಯಾನ್ಹೋಸೆಯಲ್ಲಿ ನಡೆದ ಈ ಬಾರಿಯ ಅಕ್ಕ ಸಮ್ಮೇಳನವನ್ನು , ನಮ್ಮ ಸಂಘದಿಂದ ಸುಮಾರು ೫೦ ಸದಸ್ಯರು ಪ್ರತಿನಿಧಿಸಿ, ಮೆರವಣಿಗೆ, ನಾಟಕ, ಹಾಡು ಮುಂತಾದ ವಿವಿಧ ವಿಭಾಗಗಳಲ್ಲಿ ಸಂಭ್ರಮದಿಂದ ಭಾಗ ವಹಿಸಿ ನಮ್ಮ ಮಲ್ಲಿಗೆ ಕನ್ನಡ ಸಂಘಕ್ಕೆ ಹೆಗ್ಗಳಿಕೆಯನ್ನು ಉಂಟುಮಾಡಿದ್ದಾರೆ. ಹಾಗೆಯೇ, ಈ ವರ್ಷದ MKANT ರಾಜ್ಯೋತ್ಸವ ಕ್ರೀಡಾ ಸ್ಪರ್ಧೆಗಳನ್ನು, ಅಕ್ಟೋಬರ್ ತಿಂಗಳಲ್ಲಿ, ಥ್ರೋಬಾಲ್, ಕ್ರಿಕೆಟ್ ಹಾಗೂ ಬ್ಯಾಡ್ಮಿಂಟನ್ ವಿಭಾಗಗಳಲ್ಲಿ ನಡೆಸಲಾಯಿತು.
ಇವೆಲ್ಲಾ ಸಾಧ್ಯವಾಗುತ್ತಿರುವುದು ನಮ್ಮ ಸಂಘದ ಸದಸ್ಯರ ಸಂಪೂರ್ಣ ಸಹಕಾರ, ಆಸಕ್ತಿಯುತ ಪಾಲ್ಗೊಳ್ಳುವಿಕೆಯಿಂದ ಮತ್ತು ಸಮಿತಿಯ ಸದಸ್ಯರೆಲ್ಲರ ನಿಷ್ಠಾಪೂರ್ಣವಾದ ಕಾರ್ಯ ತತ್ಪರತೆಯಿಂದ ಮಾತ್ರ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇನೆ .
ನಮ್ಮ ಸಂಘದ ಲಾಂಛನ ಪ್ರತಿಪಪಾದಿಸುವಂತೆ, ನಾವೆಲ್ಲರೂ, ನಮ್ಮವರಿಗಾಗಿ ನಮ್ಮ ಕನ್ನಡ ಸಂಘಕ್ಕಾಗಿ ಎಂಬ ಅರಿವಿನಿಂದ, ಯಾವ ವಿಧವಾದ ಭೇದವಿಲ್ಲದೆ, ಸಮಚಿತ್ತದಿಂದಲೂ , ಪ್ರೀತಿ ವಾತ್ಸಲ್ಯದಿಂದಲೂ, ಒಬ್ಬರನೊಬ್ಬರು ಅರ್ಥೈಸಿಕೊಂಡು, ಸಹಕಾರದಿಂದ ಕೈ ಕೈ ಹಿಡಿದು ಕೊಂಡು, ಭಾವೈಕ್ಯತೆಯ ಪತಾಕೆಯನ್ನು ಹಾರಿಸುತ್ತಾ, ಉತ್ತರ ಟೆಕ್ಷಾಸ್ ನಲ್ಲಿ ಕನ್ನಡ ತನವನ್ನು ಎತ್ತಿ ಹಿಡಿಯುತ್ತಾ, ವಿಶಾಲವಾಗಿ ಬೆಳೆದಿರುವ ನಮ್ಮೆಲ್ಲರ ಅಚ್ಚುಮೆಚ್ಚಿನ ಮಲ್ಲಿಗೆ ಕನ್ನಡ ಸಂಘದ ಸಾಂಸ್ಕೃತಿಕ, ಸಾಮಾಜಿಕ, ಕ್ರೀಡೆ ಹಾಗು ಸಾಹಿತ್ಯಕ ಚಟುವಟಿಕಗಳಲ್ಲಿ ಭಾಗವಹಿಸುತ್ತಾ, ಸ್ವಯಂ ಸೇವೆ ಸಲ್ಲಿಸುತ್ತಾ ಮುನ್ನಡೆಯೋಣ ಬನ್ನಿ. ಕರ್ನಾಟಕ ಮಾತೆಯಾದ, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷ ನಮ್ಮೆಲ್ಲರ ಮೇಲಿರಲಿ ಎಂದು ಹಾರೈಸುತ್ತೇನೆ .
ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು,
ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಜೈ ಕರ್ನಾಟಕ, ಜೈ MKANT
ಇಂತಿ ವಂದನೆಗಳೊಂದಿಗೆ,
ಶ್ರೀಮತಿ ವಿದ್ಯಾ ದತ್ತ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ