ಪೂರ್ಣಿಮಾ ಸುಬ್ರಹ್ಮಣ್ಯ
ಬೇರಿಗೆ ನಲವತ್ತು ಚಿಗುರಿಗೋ ನಲವಿತ್ತು
ಎಳೆಬಿಸಿಲಿಗೆ ಟಿಸಿಲೊಡೆದು ಎಳೆಬಿಸಿಲಿಗೆ ಟಿಸಿಲೊಡೆದು
ಹೊಮ್ಮಿತ್ತು ಉಸಿರು! ಚಿಮ್ಮುತಿತ್ತು ಹಸಿರು!
ಆಳಕ್ಕೆ ಮೈಯೂರಿ ಆಗಸಕೆ ಮೈದೋರಿ
ಮಣ್ಣಸಾರವ ಹೀರಿ ತನ್ನ ಇರುವಿಕೆ ಸಾರಿ
ಅಸ್ತಿತ್ವ ತವಕ! ಅವಕಾಶ ಪುಳಕ!
ಬೆಳಕಿಗೆ ಹಾತೊರೆವುದಲ್ಲ, ಮಣ್ಣಿನ ಸ್ಪರ್ಶ ಬೇಡುವುದಿಲ್ಲ,
ನೆಲದಾಳದಲಿ ನೋಂತು ನೀಲದಲಿ ನಲಿದಾಡಿ
ನೆಲೆನಿಂತ ಮೃದ್ಗಂಧ! ಸೂಸುವುದು ಹೂಗಂಧ!
ಚೈತ್ರಪಥ ಚಾರಣಕೆ
ವಿಳಂಬಿಸದೆ ಮತ್ತೂ,
ಯುಗಾದಿ ಬಂದಿತ್ತು!
ಹೊಸಚಿಗುರು - ಹಳೆಬೇರು
ಪ್ರಕೃತಿಯ ಮಹತ್ತು!
ಇದು, ನಲಿವ ಹೊತ್ತು!