ಎನ್ಕ (Enka)

ಗುರುಪ್ರಸಾದ್


ಎನ್ಕ (Enka), ಜಪಾನಿನ ಸಾಂಪ್ರದಾಯಿಕ ಸಂಗೀತ ಶೈಲಿ. ಅರ್ಥಪೂರ್ಣ ಸಾಲುಗಳು ಹಾಗೂ ಭಾವಪೂರ್ಣ ಗಾಯನಈ ಶೈಲಿಯ ಹೆಗ್ಗುರುತು. ಕನ್ನಡದ ಭಾವಗೀತೆಗಳಿಗೆ ಹತ್ತಿರ ಎನ್ನಬಹುದು. ಹಿಬರಿ ಮಿಸೊರ ಸುಪ್ರಸಿದ್ಧ ಎನ್ಕ ಹಾಡುಗಾರ್ತಿಯರಲ್ಲಿ ಒಬ್ಬರು. ಇವರು ಹಾಡಿರುವ "ಕವ ನೊ ನಗರೆ" (ನದಿ ನೀರಿನ ಹರಿವು) ನನ್ನ ಬಾಳ ಸಂಗಾತಿ ಸ್ಮಿತಳ ನೆಚ್ಚಿನ ಹಾಡು.  ಈ ಹಾಡಿನ ಭಾವಾನುವಾದ ಇಲ್ಲಿದೆ.

ಬದುಕೆಂದರೆ ಹೀಗೇ ಅಲ್ಲವೇ
ಅರಿವಿಗೆ ಬಾರದು ನಡೆದು ಬಂದ ಹಾದಿ 
ಹಿಂತಿರುಗಿ ನೋಡಿದರೆ ಅಗೋ ಅಲ್ಲಿ ದೂರದಲ್ಲಿ 
ನನ್ನೂರಿನ ಕಿರು ಬೀದಿ

ಬದುಕೆಂದರೆ ಹೀಗೇ ಅಲ್ಲವೇ
ಯುಗ ಯುಗಾದಿ ಹರಿಯುತಿರುವ ನದಿ ನೀರಿನ ಜಾಡು  
ಹಳ್ಳ ಕೊಳ್ಳಗಳ ತಿರುವು ಮುರುವುಗಳ 
ನಕ್ಷೆಯಿರದ ಮೇಡು

ಬದುಕೆಂದರೆ ಹೀಗೇ ಅಲ್ಲವೇ
ಕೊನೆಯಿಲ್ಲದೆ ಹರಡಿಕೊಂಡ ನೀಲ ಬಾನಿನುನ್ಮಾದ 
ಹರಿವ ತೊರೆಯ ಉದರದಿಂದ 
ಜುಳು ಜುಳು ನಿನಾದ

ಬದುಕೆಂದರೆ ಹೀಗೇ ಅಲ್ಲವೇ
ಎಡೆಯಿಂದೆಡೆಗೆ ನಿಲ್ಲದ ಓಟ 
ಜೀವಕೆ ಜೀವ ಜೊತೆಜೊತೆಯಾಗಿ
ಕನಸುಗಳ ಹುಡುಕಾಟ

ಬದುಕೆಂದರೆ ಹೀಗೇ ಅಲ್ಲವೇ
ಮಳೆಯಲಿ ನೆಂದು ತುಂಬಿದ ಕೆಸರು
ಕಾರ್ಮೋಡ ಸರಿದು ಬೆಳಕು ಸುರಿವುದ 
ಕಾಯುತ ಕೂರುವ ಹಸಿರು

ಬದುಕೆಂದರೆ ಹೀಗೇ ಅಲ್ಲವೇ
ನದಿ ನೀರಿನ ಜಾಡು  
ನಕ್ಷೆಯಿರದ ಮೇಡು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ