ಕನ್ನಡ ಅವಲೋಕನ ಮತ್ತು ಕಾವ್ಯ ಕಲರವ

ಪೂರ್ಣಿಮಾ ಕಶ್ಯಪ್ 
ಜನವರಿ ೯ರ ಸಂಜೆ, ಫ಼್ರಿಸ್ಕೋ ನಗರದ ಹನುಮಂತನ ದೇವಾಲಯದಲ್ಲಿ ಒಂದು ಉತ್ಸವ. ಗರುಡೋತ್ಸವ, ರಥೋತ್ಸವ, ಬ್ರಹ್ಮೋತ್ಸವ ಇತ್ಯಾದಿ ಎಂದು ಭಾವಿಸದಿರಿ. ಅಲ್ಲಿ ಕೇಳುತ್ತಿದ್ದ ಸೊಲ್ಲು ನಮ್ಮ ಕನ್ನಡದ "ನಿತ್ಯೋತ್ಸವ"ದ್ದೇ ಆಗಿತ್ತು. ಅಂದು ಸಂಗೀತ- ಸಾಹಿತ್ಯದ ಹಬ್ಬ.

ಶ್ರೀಹರ್ಷ -ಆದರ್ಶ ರಾಮ್‍ಕುಮಾರ್ ಸಹೋದರರ ವೇಣು-ವಯೋಲಿನ್ ವೈಖರಿಯ ಸಂಗೀತ ಸುಧಾಂಬುಧಿಯಲ್ಲಿ ಲೀನರಾಗಿದ್ದವರಿಗೆ, ನಮ್ಮ ನಾಡೋಜ ಕವಿ, ಸಾಹಿತಿ ಪದ್ಮಶ್ರೀ ಡಾ||ನಿಸಾರ್ ಅಹಮದ್ ಅವರೊಂದಿಗೆ "ಕನ್ನಡ ಅವಲೋಕನ ಮತ್ತು ಕಾವ್ಯ ಕಲರವ"ದ ನಿತ್ಯೋತ್ಸವ. ಕನ್ನಡದ ಹಿರಿಮೆ-ಗರಿಮೆ, ವೈಭವ, ವೈಚಾರಿಕತೆ ಮತ್ತು ವೈಶಿಷ್ಟ್ಯವನ್ನು ಎತ್ತಿ ಹಿಡಿದವರಲ್ಲಿ ಒಬ್ಬರಾದ, "ನಿತ್ಯೋತ್ಸವ" ಕವಿ ಎಂದೇ ಜನಪ್ರಿಯರಾದ ನಿಸಾರ್ ಅವರನ್ನು ನೋಡಲು, ಅವರ ಮಾತುಗಳನ್ನು ಕೇಳಲು ಇಲ್ಲಿಯ ಸಹೃದಯೀ ಕನ್ನಡಿಗರು ಉತ್ಸುಕರಾಗಿದ್ದರು.

ಶ್ರೀ ನಿಸಾರ್ ಅವರು ದೇವನಹಳ್ಳಿಯಲ್ಲಿ, ೧೯೩೬ರಲ್ಲಿ ಕೆ.ಎಸ್.ಹೈದರ್ ಮತ್ತು ಹಮೀದಾ ಬೇಗಂ ಅವರ ಪುತ್ರರಾಗಿ ಜನಿಸಿದರು. ವೃತ್ತಿಯಲ್ಲಿ ಭೂವಿಜ್ಞಾನ ಪ್ರಾಧ್ಯಾಪಕರು, ಪ್ರವೃತ್ತಿಯಲ್ಲಿ ಸೃಜನಶೀಲ ಲೇಖಕರು. ಇದಲ್ಲದೆ ಎನ್.ಸಿ.ಸಿ.ಯ ಲೆಫ಼್ಟಿನೆಂಟ್ ಅಧಿಕಾರಿಯಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಪದ್ಮಶ್ರೀ, ಪಂಪ ಪ್ರಶಸ್ತಿ, ರಾಜೋತ್ಸವ ಪ್ರಶಸ್ತಿ, ನಾಡೋಜನೆಂಬ ಬಿರುದು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಶಿವಮೊಗ್ಗೆಯ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವರಿಗೆ ದೊರಕಿರುವ ಪ್ರಮುಖ ಗೌರವಗಳು. ಇವುಗಳನ್ನು ಮೀರಿ "ನಿತ್ಯೋತ್ಸವ" ನಿಸಾರ್ ಎಂದೇ ಇವರು ಸಾಮಾನ್ಯ ಜನಮಾನಸದಲ್ಲಿ ನೆಲೆಯೂರಿದ್ದಾರೆ.

ಪ್ರಕೃತಿಮಾತೆ ತನ್ನ ನಿರುಪಮ ಚೆಲುವಿನಿಂದ ಕನ್ನಡಾಂಬೆಗೆ ನಿತ್ಯವೂ ಉತ್ಸವ ನಡೆಸುತ್ತದೆ. ಕನ್ನಡಿಗರಾದ ನಾವು ಯಾವ ರೀತಿಯಲ್ಲಿ ನಮ್ಮ ಸಂಸ್ಕೃತಿಯ ಉತ್ಸವವನ್ನು ಪ್ರತಿನಿತ್ಯವೂ ಮಾಡಬಹುದೆಂಬುದನ್ನು ಇಲ್ಲಿಯ "ಅರಳು ಮಲ್ಲಿಗೆ ಕನ್ನಡ ಶಾಲೆ"ಯ ಮಕ್ಕಳು ನಿರೂಪಿಸಿದರು. ಕವಿವರ್ಯರ ಹೃದಯವನ್ನು ಗೆದ್ದ ಈ ಕಾರ್ಯಕ್ರಮದ ಸಾರಥಿಗಳು, ಲಲಿತಾ ಪ್ರಸಾದ್ ಹಾಗೂ ಸವಿತಾ ವಿಠ್ಠಲ್.

"ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ" ಎಂದ ನಿಸಾರರು ನಮ್ಮ ಕನ್ನಡದ ಹಿರಿಮೆ-ಗರಿಮೆಗಳನ್ನು ವಿವರಿಸಿದರು. ತಮ್ಮ ವಿನೋದ, ಲಘುಹಾಸ್ಯದ ಶೈಲಿಯಲ್ಲಿ ಕನ್ನಡವನ್ನು ಬಳಸಿ, ಬೆಳೆಸುವ ಅಗತ್ಯದ ಬಗ್ಗೆ ಮಾತಾಡಿದರು. ತಮ್ಮ ಹಲವು ವೈಚಾರಿಕ ಹಾಗೂ ವಿನೋದಮಯ ಕವನಗಳನ್ನು ಸ್ವಯಂ ವಾಚಿಸಿ ಕೇಳುಗರ ಮನರಂಜಿಸಿದರು. ನಂತರ ನಡೆದ ಸಂವಾದದಲ್ಲಿ ಅನಿವಾಸಿ ಕನ್ನಡಿಗರ ಮಾತೃಭಾಷಾಪ್ರೇಮ, ಕಾಳಜಿ, ಸಂಕಟ, ದ್ವಂದ್ವಗಳ ಬಗ್ಗೆ ಕಿವಿಯಾಗಿ, ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ಕಾಲಮಿತಿ ಇರದಿದ್ದರೆ, ಮತ್ತಷ್ತು ಸಮಯ ಅಭಿಮಾನಿಗಳೊಡನೆ ಸಾಹಿತ್ಯ ಸಂವಾದದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು.

ಮಲ್ಲಿಗೆ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ದತ್ತ ಅವರು ಶ್ರೀ. ನಿಸಾರ್ ಅವರನ್ನು ಸನ್ಮಾನ ಮಾಡುವ ಮೂಲಕ ಕಾರ್ಯಕ್ರಮ ಕೊನೆಗೊಂಡಿತು. ಫಲಶೃತಿಯಾಗಿ ಉತ್ಸಾಹೀ ಕನ್ನಡಿಗರ ಮನಸ್ಸಿನ ಕನ್ನಡ ಕಲರವ ಮತ್ತಷ್ಟು ಹೆಚ್ಚಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ