(ವಿ)ನೂತನ (ವಿ)ಜಯ

 -ಸುಧಾ ಶ್ರೀನಾಥ್
ನಮ್ಮ ಚಾಂದ್ರ ಮಾನದ ಕ್ಯಾಲೆಂಡರ್ ಪ್ರಕಾರ ಈಗ ನಡೆಯುತ್ತಿರುವ ವರ್ಷದ ಹೆಸರು ವಿಜಯ. ಬರಲಿರುವ ಹೊಸ ವರ್ಷದ ಹೆಸರು ಜಯ. ಈ ಹೊಸ ವರ್ಷದಲ್ಲಿ ನಿಮ್ಮೆಲ್ಲ ಕೆಲಸಗಳಲ್ಲಿ ಜಯ ಸಿಗಲಿ. ವಿಜಯದ ಸಂತಸ ನಿಮ್ಮದಾಗಲಿ. ಮುಂದಿನವಾರದ ಕ್ಲಾಸ್ಗೆ ರಜೆ ಇರುವುದರಿಂದ ಯುಗಾದಿಯಂದು ಹೇಳಬೇಕಾದ ಶುಭಾಶಯಗಳನ್ನು ಎಲ್ಲರಿಗೂ  ಮುಂಚಿತವಾಗಿ ತಿಳಿಸಿದರು ಟೀಚರ್.  ಪುಟ್ಟ ವಿಜಯನಿಗೆ ತನ್ನ ಹೆಸರಿನ ವರ್ಷ ಮತ್ತು ಅಮ್ಮನ ಹೆಸರಿನ ಒಂದು ವರ್ಷವೂ ಇದೆಯೆಂದು ತಿಳಿದು ಖುಷಿಯೋ ಖುಷಿ. ಅದು ಅಮೇರಿಕದ ಡಾಲಸ್ ನಗರದಲ್ಲಿರುವ DFW Hindu Templeನಲ್ಲಿ ಪ್ರತಿ ಭಾನುವಾರ ಅಮೇರಿಕನ್ನಡ ಮಕ್ಕಳಿಗಾಗಿ ನಡೆಯುವ ಅರಳು ಮಲ್ಲಿಗೆ ಕನ್ನಡ ತರಗತಿಯ ಕೋಣೆ.

ಜಯ ಮತ್ತು ವಿಜಯ ಎರಡೂ ಪದಗಳ ಅರ್ಥ ಒಂದೇ ಆದರೂ ವಿಜಯ ಪದ ಬಳಸಿದರೆ ಅದರ ಸಂಭ್ರಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಸೂಚಿಸುತ್ತೆ, ಅಲ್ವಾ? ಅದಕ್ಕೆ ಇರ್ಬೇಕು ನವರಾತ್ರಿಯ ಕೊನೆಯ ದಿನಕ್ಕೆ ವಿಜಯ ದಶಮಿ ಅಂತಾನೇ ಹೆಸರು. ವಿಜಯನ ತಾಯಿ ಜಯ ಮುಂದುವರೆಸಿದರು. ತಂದೆ ವಿವೇಕ್ ಮತ್ತು ತಾಯಿ ಜಯ ಇಬ್ಬರ ಹೆಸರಿಂದ ಅಕ್ಷರಗಳನ್ನು ಜೋಡಿಸಿ ತಮ್ಮ ಮುದ್ದು ಮಗನಿಗೆ ವಿಜಯ್ ಎಂದು ನಾಮಕರಣ ಮಾಡಿದ್ದೆಂದು ಅವರು ತಮಗೆ ಮದುವೆಯಾದ ಹತ್ತು ವರ್ಷಕ್ಕೆ ಮಗ ಹುಟ್ಟಿದಾಗ ತಮಗಾದ ವಿಜಯದ ವಿಶೇಷ ಸಂಭ್ರಮವನ್ನು ಎಲ್ಲರೊಡನೆ ಹಂಚಿಕೊಂಡಾಗ ಶುರುವಾಯ್ತು ನಮ್ಮ ಅಂದಿನ ಹರಟೆ. ಎಂದಿನಂತೆ ಸ್ವಲ್ಪ ಓದು, ಬರಹ ಮುಗಿಸಿ ಯಾವುದಾದರೊಂದು ವಿಷಯದ ಬಗ್ಗೆ ಹರಟೆ ಇಟ್ಟುಕೊಳ್ಳುವುದು ನಮ್ಮ ವಾಡಿಕೆ. ಈ ಏಕ ವಿಷಯಾಧಾರಿತ ಹರಟೆ ತುಂಬಾ ಜನಪ್ರಿಯ ಚಟುವಟಿಕೆಯಾಗಿ ಅದರಲ್ಲಿ ಪಾಲ್ಗೊಳ್ಳುವುದಕ್ಕೆ ಎಲ್ಲರೂ ಹಾತೊರೆಯುತ್ತಿದ್ದರು. ಎಲ್ಲರಿಗೂ ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಳ್ಳಲು ಅದೊಂದು ವೇದಿಕೆಯಂತಾಗಿತ್ತು. ಮಕ್ಕಳ ಕನ್ನಡ ಕಲಿಕೆಯಲ್ಲಿ ತಾವೂ ನೆರವಾಗಬೇಕೆಂದು ನಿಶ್ಚಯಿಸಿ ಈ ಹರಟೆಯಲ್ಲಿ ಭಾಗವಹಿಸಲೆಂದೇ ಕೆಲವರು ಹಿರಿಯರೂ ತಪ್ಪದೇ ನಮ್ಮ ಕ್ಲಾಸ್ಗೆ ಬರುತ್ತಿದ್ದರು.

ಈ ವಿ ಮುಂಪ್ರತ್ಯಯ ಕೆಲವು ಸಲ ಮಾತ್ರ ಈ ರೀತಿಯ ವಿಶೇಷವಾದ ಅರ್ಥವನ್ನು ಕೊಡುತ್ತೆ.  ಜಯ-ವಿಜಯ, ಚಿತ್ರ-ವಿಚಿತ್ರ, ರಚಿತ-ವಿರಚಿತ ಇತ್ಯಾದಿ ಪದಗಳು ಅದಕ್ಕೆ ಉದಾಹರಣೆ.ಅದಕ್ಕೇ ನಮ್ಮ ಭಾರತ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪದ್ಮ ಭೂಷಣಕ್ಕಿಂತ ದೊಡ್ಡದೆಂದು ಘೋಷಿಸಿ ಅನುಷ್ಠಾನಕ್ಕೆ ತಂದಿರೊದು. ನಮ್ಮ ಸಂಸ್ಕೃತ ಪ್ರೇಮಿ ಹಿರಿಯರ ಮಾತು ಕೇಳಿ ಎಲ್ಲರಿಗೂ ಅಚ್ಚರಿ, ಕುತೂಹಲ. ಎಲ್ಲರೂ ಈ ರೀತಿಯ ಜೋಡಿ ಪದಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ಶುರುವಾಯ್ತು.  ಧ್ವಂಸ-ವಿಧ್ವಂಸ, ಭೂಷಣ-ವಿಭೂಷಣ, ನಾಶ-ವಿನಾಶ,ರಹಿತ-ವಿರಹಿತ, ಹಿತ-ವಿಹಿತ, ರಾಜಿತ-ವಿರಾಜಿತ, ಲೀನ-ವಿಲೀನ, ಕಿರಣ-ವಿಕಿರಣ, ದ್ರೋಹ-ವಿದ್ರೋಹ, ಖ್ಯಾತ-ವಿಖ್ಯಾತ, ಮುಕ್ತಿ-ವಿಮುಕ್ತಿ ಮುಂತಾದವು ಹೊರ ಬಂದವು.  ನಯ-ವಿನಯ,ನಾಯಕ-ವಿನಾಯಕ ಮತ್ತು ಕೋಪ-ವಿಕೋಪ ಈ ರೀತಿಯ ಜೋಡಿ ಪದಗಳ ಲಿಸ್ಟ್ಗೆ ಸೇರಿಸುವುದಾ ಬೇಡವಾ ಎಂಬುದನ್ನು ನಿರ್ಣಯಿಸಲು ಯಾರೂ ಮುಂದೆ ಬರಲಿಲ್ಲ. ಅದರ ಬಗ್ಗೆ ಸಾಕಷ್ಟು ವಾದ ವಿವಾದಗಳಾದವು, ಅಷ್ಟೇ. ಈ ಜೋಡಿ ಪದಗಳ ಆಟದಲ್ಲಿ ಎಲ್ಲರ ಉತ್ಸಾಹ ಹೆಚ್ಚಾಗುತ್ತಾ ಹೋಯ್ತು. ಸ್ಮರಣ-ವಿಸ್ಮರಣ, ಕ್ರಮ-ವಿಕ್ರಮ, ಚಾರ-ವಿಚಾರ, ಹೀನ-ವಿಹೀನ,ಫಲ-ವಿಫಲ, ಕೃತಿ-ವಿಕೃತಿ, ಗ್ರಹ-ವಿಗ್ರಹ, ಮಾನ-ವಿಮಾನ, ಶಿಷ್ಟ-ವಿಶಿಷ್ಟ, ಶೇಷ-ವಿಶೇಷ, ಶ್ವಾಸ-ವಿಶ್ವಾಸ, ಚಲಿತ-ವಿಚಲಿತ, ರಸ-ವಿರಸ, ರಕ್ತಿ-ವಿರಕ್ತಿ, ವಿಧ-ವಿವಿಧ, ಜ್ಞಾನ-ವಿಜ್ಞಾನ,ದೇಶ-ವಿದೇಶ, ವರ-ವಿವರ, ನ್ಯಾಸ-ವಿನ್ಯಾಸ ಮುಂತಾದವು ಈ ಲಿಸ್ಟ್ಗೆ ಸೇರುವುದಿಲ್ಲವೆಂಬುದರ ಬಗ್ಗೆ ಮಾತಾಡಿದ್ದು ಎಲ್ಲರಿಗೂ ತುಂಬಾ ಮಜ ಕೊಡ್ತು. ಕೆಲವು ಜೋಡಿಗಳಲ್ಲಿ ವ್ಯತಿರೇಕಾರ್ಥವಿತ್ತು. ಕೆಲವು ಜೋಡಿಗಳಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲದೆ ಬೇರೆ ಬೇರೆಯ ಅರ್ಥವಿತ್ತು. ಈ ರೀತಿಯ ಚರ್ಚೆ ಎಲ್ಲರಿಗೂ ಪದಗಳ ಜೊತೆ ಆಟವಾಡಿದ ಸಂಭ್ರಮವನ್ನು ಕೊಡುತ್ತೆ.  ಈ ಜೋಡಿ ಪದಗಳ ಜೋಷ್ ಎಷ್ಟಿತ್ತಂದರೆ ಯಾರಿಗೂ ಕ್ಲಾಸ್ ಮುಗಿಸುವ ಸಮಯವಾಗಿದ್ದೂ ಗೊತ್ತಾಗಲಿಲ್ಲ. ಆದರೆ ನಮ್ಮ ಜೊತೆ ಬಂದ ಮಕ್ಕಳಿಗೆ ಇದೆಲ್ಲವೂ ಅರ್ಥವಾಗದೇ ನಿದ್ದೆ ಬರುತ್ತಿತ್ತು. ಈ ಪದಗಳು ದಿನ ನಿತ್ಯದ ಸಂಭಾಷಣೆಯಲ್ಲಿ ಹೆಚ್ಚಾಗಿ ಬಳಸುವುದಿಲ್ಲ. ಆದ್ದರಿಂದ ಪೋಷಕರು ಪದಗಳನ್ನು ಬರೆದುಕೊಂಡು ಮನೆಯಲ್ಲಿ ಮಕ್ಕಳಿಗೆ ಇವುಗಳ ಪರಿಚಯ ಮಾಡಿಸಬೇಕೆಂದು ಟೀಚರ್ ಎಲ್ಲರಲ್ಲಿ ವಿನಂತಿಸಿ ಕೊಂಡರು. ತಮ್ಮ ಈ ಸಂತೋಷದಲ್ಲಿ ಮಕ್ಕಳೂ ಭಾಗಿಯಾಗಲೆನ್ನುವುದು ಎಲ್ಲರ ಆಕಾಂಕ್ಷೆ.

ಅಚ್ಚ ಕನ್ನಡತಿಯನ್ನು ಮದುವೆಯಾಗಿ ಕನ್ನಡ ಕಲಿಯಲು ನಮ್ಮ ಕ್ಲಾಸ್ಗೆ ಸೇರಿದ ಉತ್ತರ ಭಾರತದ ಮೂಲದವರಾದ ರಾಮ್ ನಗುತ್ತಾ ತಮ್ಮ ಬಗ್ಗೆ ಒಂದು ಜೋಕ್ ಹೇಳಿದರು. ಅವರ ಫ಼್ಯಾಮಿಲಿ ನೇಮ್ ವಿಸ್ಮಯ್ ಅಂತ. ಆದ್ದರಿಂದ ಅವರು ತಮ್ಮ ಹೆಸರನ್ನು ವಿ. ರಾಮ್ ಎಂದು ಬರೆಯುತ್ತಾರೆ. ಚಿಕ್ಕಂದಿನಿಂದಲೂ ಅವರು ತುಂಬಾ ಸೋಮಾರಿಯಂತೆ. ಯಾವುದೇ ಕೆಲಸ ಮಾಡಬೇಕಾದ್ರೂ ಮಧ್ಯದಲ್ಲಿ ತುಂಬಾ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಪಠ್ಯ ಪುಸ್ತಕಗಳನ್ನು ಓದಬೇಕಾದ್ರೆ ಮತ್ತು ಹೋಮ್ವರ್ಕ್ ಮಾಡಬೇಕಾದ್ರೆ ಅಂತೂ ಇನ್ನೂ ಜಾಸ್ತಿ ವಿರಾಮಗಳಂತೆ. ಅದಕ್ಕೆ ಅವರನ್ನು ಎಲ್ಲರೂ ವಿಸ್ಮಯ್ ರಾಮ್ ವಿರಾಮ್ ಎಂದು ಕೀಟಲೆ ಮಾಡುತ್ತಿದ್ದರಂತೆ. ಅವರು ನಮ್ಮ ಕ್ಲಾಸ್ಗೆ ಇತ್ತೀಚೆಗಷ್ಟೇ ಸೇರಿದ್ದರಿಂದ ಇಷ್ಟನ್ನೂ ಇಂಗ್ಲಿಷಲ್ಲೇ ಹೇಳಿದರು. ನೀವುಗಳೂ ಕೂಡ ನನ್ನನ್ನು ವಿರಾಮ್ ಎಂದು ರೇಗಿಸಬಹುದೆಂದು ತಾವೇ ಹೇಳಿ ಎಲ್ಲರ ಜೊತೆ ತಾವೂ ನಕ್ಕರು ರಾಮ್. ರಾಮ-ವಿರಾಮ ಜೋಡಿಯೂ ನಮ್ಮ ಅಂದಿನ ಲಿಸ್ಟ್ಗೆ ಸೇರಿತು. ರಾಮ್ ಅವರ ಹಾಸ್ಯಪ್ರಿಯತೆ ಮಕ್ಕಳಾದಿಯಾಗಿ ಎಲ್ಲರಿಗೂ ಇಷ್ಟವಾಯ್ತು. ನಮ್ಮ ಕ್ಲಾಸ್ನಲ್ಲಿ ಕನ್ನಡದವರನ್ನು ಮದುವೆಯಾದ ಕನ್ನಡೇತರ ಯುವಕ ಯುವತಿಯರಲ್ಲದೇ ಕನ್ನಡದವರನ್ನು ಮದುವೆಯಾದ ಅನ್ಯ ದೇಶೀಯ ಯುವಕ ಯುವತಿಯರೂ ಇದ್ದರು. ಒಟ್ಟಿನಲ್ಲಿ ಇವರೆಲ್ಲರಿಂದ ಅಮೇರಿಕನ್ನಡ ಮಕ್ಕಳಿಗೆಂದು ಶುರುವಾದ ನಮ್ಮ ಕ್ಲಾಸ್ಗೆ ಹೊಸದೊಂದು ಹುರುಪು ಹೊಳಪು ಸಿಕ್ಕಿತ್ತು.

ಈ ರೀತಿಯ ವರ್ಡ್ಗೇಮ್ ನಂಗೆ ತುಂಬಾ ಇಷ್ಟ. They make learning such fun. In English also we have similar prefixes which don't always mean the same. For example, the prefix 'im' in the pairs plant - implant, print - imprint, merge -immerge puts more emphasis on the verb. But it gives opposite meaning in pairs such as balance - imbalance , mobile - immobile, etc. ” ಅಮೇರಿಕನ್ನಡಿಗರ ಅಮೇರಿಕನ್ ಸೊಸೆಯಾದ ಕ್ರಿಸ್ಟಿನ್ ಅವರು ಮಾಡಿದ ಹೋಲಿಕೆ ಮಕ್ಕಳಿಗೆ ತುಂಬಾ ಇಷ್ಟವಾಯ್ತು. ದೊಡ್ಡವರೆಲ್ಲ ಕನ್ನಡದಲ್ಲಿ ತಮಗೆ ಅರ್ಥವಾಗದ ಪದಗಳ ಬಗ್ಗೆ ಮಾತಾಡುವಾಗ ಅಮೇರಿಕನ್ನಡ ಮಕ್ಕಳಿಗೆ ಕ್ರಿಸ್ಟಿನ್ ಅವರ ಮಾತು ತುಂಬಾ ಆಪ್ಯಾಯಮಾನ.

ಮಕ್ಕಳನ್ನು ಖುಷಿ ಪಡಿಸಲು ಪ್ರತಿ ಕ್ಲಾಸ್ನಲ್ಲೂ ಒಂದು ಕಥೆ ಹೇಳುವ ಅಭ್ಯಾಸವಿತ್ತು. ಅದೂ ಹರಟೆಯ ವಿಷಯಕ್ಕೆ ಸಂಬಂಧಪಟ್ಟಿದ್ದಾದರೆ ಇನ್ನೂ ಚೆಂದ. ಹಿರಿಯರೊಬ್ಬರು ಒಂದು ಕಥೆ ಹೇಳಲು ಶುರುಮಾಡಿದರು.  ತುಂಬಾ ಹಿಂದಿನ ಕಾಲದ ಕಥೆ ಅದು. ಒಂದೂರಿನಲ್ಲಿ ಒಬ್ಬ ಜಿಪುಣನಿದ್ದ. ಅವನು ಎಲ್ಲರಿಂದಲೂ ಪುಕ್ಕಟೆಯಾಗಿ ಕೆಲಸ ಮಾಡಿಸಿಕೊಳ್ಳುವುದರಲ್ಲಿ ತುಂಬಾ ನಿಪುಣನಾಗಿದ್ದ. ಒಮ್ಮೆ ಅವನು ದೂರದ ಊರಲ್ಲಿದ್ದ ತನ್ನ ತಮ್ಮನಿಗೆ ದುಡ್ಡು ಕಳುಹಿಸಬೇಕಾದ ಸಂದರ್ಭ ಬಂತು. ಆಗಿನ ಕಾಲದಲ್ಲಿ ಹಣ ಕಳುಹಿಸಲು ಬ್ಯಾಂಕ್ ಅಥವಾ ಅಂಚೆ ವ್ಯವಸ್ಥೆ ಇರಲಿಲ್ಲ. ತಾವೇ ಸ್ವತಃ ಹೋಗಿ ಕೊಟ್ಟು ಬರಬೇಕು. ಅಥವಾ ಹಣ ಕೊಟ್ಟು ಬರಲು ಯಾರನ್ನಾದರೂ ಕಳುಹಿಸಬೇಕು. ಈ ಜಿಪುಣ ತನ್ನ ತಮ್ಮನಿಗೆ ಒಂದು ಪತ್ರದಲ್ಲಿ  ನಿನಗೆ ಅಗತ್ಯವಿರುವ ಹಣವನ್ನು ಕಳುಹಿಸುತ್ತಿದ್ದೇನೆ. ನಿನ್ನ ಕೆಲಸ ಮುಗಿದ ಮೇಲೆ ಈ ಹಣ ತಂದವನಿಗೆ ಶೇಷ ಹಣವನ್ನು ಉಡುಗೊರೆಯಾಗಿ ಕೊಡತಕ್ಕದ್ದು. ಎಂದು ಬರೆದು ಆ ಪತ್ರದ ಜೊತೆ ಹಣವನ್ನು ಒಬ್ಬ ನಂಬಿಕಸ್ಥ ಆಳಿನ ಕೈಯಲ್ಲಿ ಕಳುಹಿಸಿದನು. ಆ ಆಳು ಓದು ಬರಹ ಬಲ್ಲವನಾಗಿದ್ದನು. ಹೋಗುತ್ತಾ ದಾರಿಯಲ್ಲಿ ಆ ಪತ್ರವನ್ನು ಓದಿದನು. ಅವನಿಗೆ ಈ ಜಿಪುಣನ ಬುದ್ಧಿ ಗೊತ್ತಿತ್ತು ಹಾಗೂ ಅವನ ತಮ್ಮನೂ ಜಿಪುಣನೆಂದು ಗೊತ್ತಿತ್ತು. ಪತ್ರದಲ್ಲಿ ಈ ರೀತಿ ಬರೆದಿದ್ದಾನೆಂದರೆ ಬಹುಶಃ ಈ ಹಣದಲ್ಲಿ ಏನೂ ಉಳಿಯುವುದಿಲ್ಲವೆಂದುಕೊಂಡನು. ತನಗೆ ಏನೂ ಉಡುಗೊರೆ ಸಿಗುವುದಿಲ್ಲವೆನಿಸಿತು. ಚತುರನಾದ ಅವನು ಏನಾದರೂ ಉಪಾಯ ಮಾಡಿ ತನಗೆ ಸ್ವಲ್ಪ ಹಣ ಸಿಗುವಂತೆ ಮಾಡಿಕೊಳ್ಳಬೇಕೆಂದು ಯೋಚಿಸಿದನು. ಜಾಣತನದಿಂದ ಆಲೋಚಿಸಿ ಪತ್ರದಲ್ಲಿದ್ದ ಶೇಷ ಪದಕ್ಕೆ ಮುಂಚೆ ವಿ ಅಕ್ಷರವನ್ನು ಸೇರಿಸಿದನು. ಅಣ್ಣನ ಪತ್ರವನ್ನು ಓದಿದ ತಮ್ಮ ಅವನಿಗೆ ವಿಶೇಷ ಬಹುಮಾನವನ್ನು ಕೊಡಬೇಕೆಂದು ಅರ್ಥ ಮಾಡಿಕೊಂಡು ಅವನಿಗೆ ಧಾರಾಳವಾಗಿ ಉಡುಗೊರೆಯನ್ನು ಕೊಟ್ಟನು. ಅತೀ ಜಿಪುಣತನ ಒಳ್ಳೆಯದಲ್ಲವೆಂಬ ನೀತಿಯೊಂದಿಗೆ ಕಥೆ ಮುಕ್ತಾಯವಾದಾಗ ಎಲ್ಲರಿಂದಲೂ ಚಪ್ಪಾಳೆ. ಮಕ್ಕಳು ಕಥೆಯ ಮೂಲಕ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ತಾರೆಂದು ಆ ಕಥೆಯನ್ನು ಅಲ್ಲೇ ಹೆಣೆದದ್ದೆಂದು ಅವರು ಹೇಳಿದಾಗ ಎಲ್ಲರಿಗೂ ಅಚ್ಚರಿ.

ಕಾಸ್ಗೆ ಏನಾದ್ರೂ ಅರ್ಥವಿದೆಯಾ ಎಂದು ಪುಟ್ಟ ವಿಕಾಸ್ ಕೇಳಿದ್ದು ಹೆಚ್ಚಿನವರಿಗೆ ನಗು ತರಿಸಿತು. ಅವರ ಜೊತೆ ಅವನೂ ನಕ್ಕ. ಮಕ್ಕಳ ಮುಗ್ಧ ನಗು ನೋಡುವುದೇ ಚೆಂದ. ಟೀಚರ್ ಅವನ ಸಮಯೋಚಿತ ಪ್ರಶ್ನೆ ಆಸಕ್ತಿ ಮತ್ತು ಕುತೂಹಲ ತೋರಿಸುತ್ತೆಂದು ಅವನನ್ನು ಅಭಿನಂದಿಸಿದರು. ಟೀಚರ್ ಮೆಚ್ಚಿದ್ದು ಕೇಳಿ ವಿಕಾಸ್ ಜೊತೆ ಅವರ ತಂದೆ ತಾಯಿಗೂ ಖುಷಿಯಾಯ್ತು.ಮನೆಯಲ್ಲಿ ಮಕ್ಕಳ ಜೊತೆ ಈ ರೀತಿ ಜೋಡಿ ಪದಗಳ ಬಗ್ಗೆ ಹೆಚ್ಚಾಗಿ ಮಾತಾಡಿರೆಂದು ಸಲಹೆ ಕೊಟ್ಟರು ಹಿರಿಯರೊಬ್ಬರು.

ಹೊಸ ವರ್ಷದಲ್ಲಿ ನಿಮ್ಮೆಲ್ಲರಿಗೂ ಜಯ ಸಿಗಲಿ. ಬರುವ ವಾರ ನಮ್ಮ ಕ್ಲಾಸ್ಗೆ ವಿರಾಮ. ಟೀಚರ್ ಕ್ಲಾಸ್ ಮುಗಿಸುತ್ತಾ ಮತ್ತೊಮ್ಮೆ ಎಲ್ಲರಿಗೂ ಶುಭಾಶಯ ತಿಳಿಸಿದರು. ಅವರು ವಿರಾಮ ಪದವನ್ನು ಬಳಸಿದ್ದು ಕೇಳಿ ರಾಮ್ ಅವರು ತಮ್ಮ ಕಡೆಗೇ ಬೆರಳು ತೋರಿಸುತ್ತ ವಿ. ರಾಮ್ ಎನ್ನುತ್ತ ಜೋರಾಗಿ ನಕ್ಕು ಎಲ್ಲರನ್ನೂ ನಗಿಸಿದರು.

ನೂತನ ವರ್ಷದ ಹರಟೆ ಈ ರೀತಿಯ ಜೋಡಿಪದಗಳೊಂದಿಗೆ ವಿನೂತನವಾಗಿ ರೂಪುಗೊಂಡು ವಿಶೇಷವೆನಿಸಿದ್ದಂತೂ ನಿಜ. ಮಕ್ಕಳು ಹೆಚ್ಚಾಗಿ ನಮ್ಮ ಹರಟೆಯಲ್ಲಿ ಪಾಲ್ಗೊಳ್ಳದಿದ್ದರೂ ತಂದೆತಾಯಿಯರಿಗೆ ಸಿಕ್ಕಿತ್ತು ಮಕ್ಕಳ ಜೊತೆ ಕಂಗ್ಲಿಷ್ನಲ್ಲಿ ಹರಟುವುದಕ್ಕೆ ಒಂದಷ್ಟು ಸಾಮಗ್ರಿ ಹಾಗೂ ಕನ್ನಡಮ್ಮನಿಗೆ ಒಂದು ವಿನೂತನ ನಮನ ಮಾಡಿದ ಧನ್ಯತಾಭಾವ.


ಕ್ಲಾಸ್ ಮುಗಿದ ತಕ್ಷಣ ಮಕ್ಕಳೆಲ್ಲರೂ ಮಹಾ ಪ್ರಸಾದಕ್ಕೆಂದು ಎದುರಿನ ಕಟ್ಟಡದ ಕಡೆ ಓಡಿದರು. ಪ್ರತಿ ಭಾನುವಾರವೂ ದೇವಸ್ಥಾನದಲ್ಲಿ ನಡೆಯುವ ವಿವಿಧ ತರಗತಿಗಳಿಗೆ ಬರುವ ಮಕ್ಕಳಿಗೆ ಮತ್ತು ಭಕ್ತಾದಿಗಳಿಗೆಂದು ಸ್ವಯಂಸೇವಕರು ತಯಾರಿಸಿದ ಮಹಾಪ್ರಸಾದದ ಊಟ ನಮ್ಮೆಲ್ಲರಿಗಾಗಿ ಕಾಯುತ್ತಿತ್ತು. ಅಂದು ವಿಶೇಷವಾಗಿ ಮಕ್ಕಳಿಗೆಂದು ತರಿಸಿದ ಪೀಡ್ಜ಼ಾ ಕೂಡಾ ಇತ್ತು.ಎಂದಿನಂತೆ ಸ್ವಲ್ಪ ಓದು, ಬರಹದ ಜೊತೆ ಮಾತು,  ಕಥೆ, ಹಾಸ್ಯ ಮುಂತಾದವುಗಳಿಂದ ಅಮೇರಿಕನ್ನಡ ಮಕ್ಕಳ ಮನಸ್ಸಿನಲ್ಲಿ ಕನ್ನಡ ಪದಗಳ ವಿಜಯವಾಣಿ ಮೊಳಗುತ್ತಿತ್ತು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ