ತಮಸೋಮಾ ಜ್ಯೋತಿರ್ಗಮಯ

 ಸುಧಾ ಶ್ರೀನಾಥ್

“I prefer July 4th to Deepavali amma!” ನನ್ನ ಹನ್ನೊಂದು ವರ್ಷದ ಮಗಳ ಮಾತನ್ನು ಕೇಳಿ ನನಗೆ ತುಂಬಾ  ಆಶ್ಚರ್ಯವಾಯ್ತು.  ಇದು ಭಾರತದಲ್ಲಿ ಅವಳು ಆಚರಿಸುತ್ತಿದ್ದ ಮೊದಲ ದೀಪಾವಳಿ ಹಬ್ಬ. ಅಮೇರಿಕದಲ್ಲಿದ್ದಾಗ ಪ್ರತಿ ವರ್ಷವೂ ಜುಲೈ ನಾಲ್ಕರಂದು ನಡೆಯುವ  fireworks ನೋಡಲು ಅವಳನ್ನು ತಪ್ಪದೇ ಕರೆದುಕೊಂಡು ಹೋಗುತ್ತಿದ್ದೆವು. ಬಾಲ್ಯದಲ್ಲಿ ದೀಪಾವಳಿಯಂದು ದೀಪದ ಸಾಲುಗಳನ್ನು ಬೆಳಗಿ, ಪಟಾಕಿಗಳು, ಸುರು ಸುರು ಬತ್ತಿ, ಹೂವಿನ ಕುಂಡ, ವಿಷ್ಣು ಚಕ್ರ, ಭೂ ಚಕ್ರ ಮುಂತಾದವುಗಳಿಂದ ಮೂಡುವ ಬಗೆ ಬಗೆಯ ದೀಪ ನಕ್ಷತ್ರ ವಿನ್ಯಾಸಗಳನ್ನು ನೋಡಿ ನಾವು ಪಟ್ಟ ಆನಂದ ಅವಳ ಪಾಲಿಗೆ ಇಲ್ಲವಲ್ಲ ಎನ್ನುವ ಭಾವನೆ ನಮಗೆ ತುಂಬಾ ಕಾಡುತ್ತಿತ್ತು. ಅವಳೂ ಸಹ ಅಲ್ಲಿಯ  fireworksನಿಂದ ಆಗಸದಲ್ಲಿ ಅರಳುವ ಬಣ್ಣ ಬಣ್ಣದ ನಕ್ಷತ್ರ ವಿನ್ಯಾಸಗಳನ್ನು ನೋಡಿ ಆನಂದಿಸುತ್ತಿದ್ದಳು. ನಾವುಗಳು ನಮ್ಮೂರಿನ ದೀಪಾವಳಿಯನ್ನು ನೆನಪಿಸಿಕೊಂಡು ನಾವು ಬಳಸಿದ ಪಟಾಕಿಗಳ ಹೆಸರುಗಳನ್ನು ಮತ್ತು ವಿವಿಧ ವಿನ್ಯಾಸಗಳನ್ನು ವರ್ಣಿಸಿದಾಗ ಕಣ್ಣರಳಿಸಿ ಕೇಳುತ್ತಿದ್ದಳು ಕೂಡಾ. ಪ್ರತಿ ವರ್ಷವೂ ಇದರ ಪುನರಾವರ್ತನೆಯಾಗುತ್ತಿದ್ದರಿಂದ ಅವಳ ಪುಟ್ಟ ಮನಸ್ಸಿನಲ್ಲಿ ತಾನೂ ಸಹ ಇಂಡಿಯಾಗೆ ಹೋಗಿ ಅಲ್ಲಿಯವರೊಡನೆ ತನ್ನದೇ ಆದ  fireworksನೊಡನೆ ಆಡಿ ದೀಪಾವಳಿ ಹಬ್ಬ ಆಚರಿಸಿಬೇಕೆಂಬ ಆಸೆ ಬೆಳೆಯುತ್ತಿತ್ತು. ಆ ಆಸೆಯನ್ನು ನಾವುಗಳು ಪೋಷಿಸುತ್ತಿದ್ದೆವು. ಆದರೆ ಪಟಾಕಿಗಳಿಂದ ಆಗುವ ಹಲವಾರು ಅನಾನುಕೂಲಗಳು ಮತ್ತು ಅನಾಹುತಗಳನ್ನು ನೋಡಿದ್ದಕ್ಕಿಂತ ಹೆಚ್ಚಾಗಿ ಊಹಿಸಿಕೊಂಡೇ ಅವಳಿಗೆ ಅದು ಬೇಡ ಅನಿಸಿರಬೇಕು.

ನಾವು ಭಾರತಕ್ಕೆ ವಾಪಸ್ಸಾದ ಮೊದಲನೆಯ ವರ್ಷದ ನವರಾತ್ರಿಯಲ್ಲೇ ನಮಗೆ  fireworks ನೋಡುವ ಅವಕಾಶ ಸಿಕ್ಕಿತು. ಅಂದು ಮುರುಘಾ ಮಠದಲ್ಲಿ ಆಚರಿಸುವ ನವರಾತ್ರಿ ಉತ್ಸವಗಳ ಕೊನೆಯ ದಿನವಾದ ವಿಜಯದಶಮಿಯಂದು ಪಟಾಕಿಗಳ ಸಂಭ್ರಮ. ನಮ್ಮ ಮನೆಯ ಮಹಡಿಯಿಂದಲೇ ಆಗಸದಲ್ಲಿ ಅರಳುವ ವಿನ್ಯಾಸಗಳನ್ನು ನೋಡಿ ಹರ್ಷ ಪಟ್ಟೆವು. ಅದನ್ನು ನೋಡಿ ನಮಗೆ ಜುಲೈ ನಾಲ್ಕರ  fireworks ಮನೆಯ ಬಾಲ್ಕನಿಯಿಂದಲೇ ನೋಡಿದ ಅನುಭವವಾದಂತಾಯ್ತು. ವಿಜಯದಶಮಿಯಾದ ಇಪ್ಪತ್ತು ದಿನಕ್ಕೆ ದೀಪಾವಳಿ ಹಬ್ಬ ಬಂತು. ಬಹುಳ ಉತ್ಸಾಹದಿಂದ ಪ್ರಣತಿಗಳನ್ನು ಮತ್ತು ಪಟಾಕಿಗಳನ್ನು ತಂದು, ಅಂದು ಸಂಜೆ ಪ್ರಣತಿಗಳಲ್ಲಿ ಎಣ್ಣೆ ಹಾಕಿ, ಬತ್ತಿಯಿಟ್ಟು, ದೀಪಗಳನ್ನು ಹಚ್ಚಿ, ಸುರು ಸುರು ಬತ್ತಿ, ಹೂವಿನ ಕುಂಡ, ವಿಷ್ಣು ಚಕ್ರ, ಭೂ ಚಕ್ರ ಮುಂತಾದವುಗಳನ್ನು ಸ್ನೇಹಿತರೊಟ್ಟಿಗೆ ಹಚ್ಚಿ ಸಂತಸ ಪಟ್ಟಳು. ಯಾವುದೇ ಒಂದನ್ನು ಬಳಸಿಯಾದ ಮೇಲೆ ಅದನ್ನು ತಪ್ಪದೆ ಕಸದ ಬುಟ್ಟಿಗೆ ಹಾಕುವುದನ್ನು ಅವಳು ಮರೆಯಲಿಲ್ಲ. ರಾತ್ರಿಯಾಗುತ್ತಿದ್ದಂತೆಯೇ ತುಂಬಾ ಶಬ್ಧ ಮಾಡುವ ಪಟಾಕಿಗಳ ಮತ್ತು ಪಟಾಕಿ ಸರಗಳ ಶಬ್ಧಗಳು ಜಾಸ್ತಿಯಾಗುತ್ತಾ ಹೋದವು. ಸುತ್ತಮುತ್ತಲಿನ ಶಬ್ಧಗಳನ್ನು ಕೇಳಿ ಅವಳ ಆನಂದ ಸ್ವಲ್ಪ ಸ್ವಲ್ಪವೇ ಕಡಿಮೆಯಾದಂತೆ ಅನಿಸಿತು. ಯಾವುದೇ ಆಗಲಿ ಮಿತದಲ್ಲಿದ್ದರೇನೇ ಹಿತ ಅಲ್ವೇ? ಪಕ್ಕದ ಮನೆಯ ಅಜ್ಜಿ ಪಟಾಕಿಗಳ ಹಾವಳಿಯಿಂದ ಹೊರಗೆ ಹೋಗಲು ಭಯವಾಗುತ್ತೆಂದು ಅಲವತ್ತುಕೊಂಡರು. ರಸ್ತೆಗಳಲ್ಲಿ ಓಡಾಡುವುದು ಕಷ್ಟವಾಗುತ್ತಿರುವುದು ಕಂಡು ಮನಸ್ಸಿಗೆ ತುಂಬಾ ಅಸಮಾಧಾನವಾಯ್ತು. ಅಂದಿನ ದಿನ ಪತ್ರಿಕೆಗಳಿಂದ ಮತ್ತು ಟಿವಿಯಿಂದ ಬಾಲ ಕಾರ್ಮಿಕರು ಪಟಾಕಿಗಳನ್ನು ಮಾಡುವುದರ ಬಗ್ಗೆ ಮತ್ತು ಅದರಿಂದ ಉಂಟಾಗುವ ದುರಂತಗಳ ಬಗ್ಗೆ ತಿಳಿದು ಅವಳ ಮನಸ್ಸು ಪರಿವರ್ತನೆಯ ಕಡೆ ಯೋಚಿಸಿರಬೇಕು. ಇನ್ನು ಪಟಾಕಿಗಳನ್ನು ಬಳಸುವುದಿಲ್ಲವೆಂದು ಅಂದೇ ನಿಶ್ಚಯಿಸಿ ನಮ್ಮನ್ನು ಚಕಿತಗೊಳಿಸಿದಳು. ಎಲ್ಲೆಲ್ಲೂ ಪಟಾಕಿಗಳ ಹೊಗೆ ಮತ್ತು  ಮಾರನೆಯ ದಿನ ಬೆಳಿಗ್ಗೆ ರಸ್ತೆಗಳಲ್ಲಿ ತುಂಬಿರುವ ಪಟಾಕಿಗಳ ಕಸ ನೋಡಿ ಅವಳ ನಿಶ್ಚಯ ಮತ್ತೂ ಬಲಗೊಂಡಿತು. ಸಾರ್ವಜನಿಕರಿಗೆ ಎಲ್ಲಂದರಲ್ಲಿ ಪಟಾಕಿಗಳನ್ನು ಸುಡುವ ಅನುಮತಿ ಇಲ್ಲದಿದ್ದರೇನೇ ಒಳ್ಳೆಯದೆಂದು ಹಲವಾರು ಬಾರಿ ಹೇಳಿದಳು. ಪರಿಸರ ಮಾಲಿನ್ಯ ಮತ್ತು ಸಾರ್ವಜನಿಕರ ಹಿತದ ದೃಷ್ಟಿಯಿಂದ ಪಟಾಕಿ ಇಲ್ಲದೆಯೇ ದೀಪಾವಳಿ ಆಚರಿಸಬೇಕೆಂಬ ಛಲ ಅವಳ ಕೆಲವು ಸ್ನೇಹಿತರಲ್ಲೂ ಉಂಟಾಯಿತು. ಅವರೆಲ್ಲರೂ ಅವರ ಶಾಲೆಯಲ್ಲಿ ಶಿಕ್ಷಕರ ಸಹಾಯದಿಂದ ತಮ್ಮೀ ಅನಿಸಿಕೆಗಳನ್ನು ಎಲ್ಲರೊಡನೆ ಹಂಚಿಕೊಂಡರು. ಶಾಲಾ ಶಿಕ್ಷಕರು ಮಕ್ಕಳಲ್ಲಿ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದ್ದರಿಂದ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಮಕ್ಕಳು ಪಟಾಕಿಗಳಿಲ್ಲದ ದೀಪಾವಳಿಯ ಆಚರಣೆಯಲ್ಲಿ ಕೈ ಜೋಡಿಸಿ ಪರಿಸರ ಪ್ರಜ್ಞೆಯನ್ನು ಮೆರೆಯುತ್ತಿದ್ದಾರೆ. ಚಿಕ್ಕಂದಿನಿಂದಲೂ ಶಬ್ಧದ ಪಟಾಕಿಗಳೆಂದರೆ ನನಗಿಷ್ಟವಿರಲಿಲ್ಲ. ಆದ್ದರಿಂದ ಅವನ್ನು ನಾನು ಸುಡುತ್ತಿರಲಿಲ್ಲ. ಆದರೆ ಆ ವಯಸ್ಸಿನಲ್ಲಿ ನನಗಂತೂ ಈ ರೀತಿಯ ಆಲೋಚನೆಗಳೇ ಬಂದಿರಲಿಲ್ಲ. ಅಷ್ಟೇ ಅಲ್ಲ, ಈ ಮಕ್ಕಳು ಈಗ ಪ್ಲಾಸ್ಟಿಕ್ ಬಗ್ಗೆಯೂ ಇಂತಹುದೇ ಅರಿವು ಮೂಡಿಸಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿದ್ದಾರೆ. ಸಾವಿರ ಮೈಲುಗಳ ಪಯಣವೂ ಶುರುವಾಗುವುದು ಒಂದು ಪುಟ್ಟ ಹೆಜ್ಜೆಯಿಂದಲೇ, ಅಲ್ವೇ? ಈ ಮಕ್ಕಳೆಲ್ಲರೂ ಪ್ರತಿ ವರ್ಷವೂ ಸಾಂಕೇತಿಕವಾಗಿ ಎರಡು ದೀಪಗಳಿಟ್ಟು ‘ತಮಸೋಮಾ ಜ್ಯೋತಿರ್ಗಮಯ’ ಎಂದು ಪ್ರಾರ್ಥಿಸಿ ದೀಪಾವಳಿ ಹಬ್ಬದಂದು ಸಂಭ್ರಮಿಸುವುದು ನೋಡಿ ಪೋಷಕರಾದ ನಮಗೆ ಹೆಮ್ಮೆಯಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಪಾಲಿನ ಕರ್ತವ್ಯವನ್ನು ಮಾಡುವುದರಲ್ಲಿ ಸಂತಸ ಕಾಣುತ್ತದೆ. ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಹರಿದು ಸುಜ್ಞಾನದ ಬೆಳಕಿನ ಕಡೆಗೆ ನಮಗೆ ದಾರಿ ತೋರಿಸಿ ಮುನ್ನಡೆಸು ಎಂದು ನಾವೂ ಪ್ರಾರ್ಥನೆ ಮಾಡೋಣ, ಬನ್ನಿ. ದೀಪಾವಳಿ ಹಬ್ಬದ ಸಂದೇಶವೂ ಅದೇ ಅಲ್ವೇ?   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ