ಮೆಟ್ಟಿ ದಾಟು ಅಹಂಕಾರದ ದಿಬ್ಬ -
ಆಚರಿಸು ಹೃದಯವಂತಿಕೆಯ ಹಬ್ಬ .
ಮುನಿಸಿರದೆ ಮನ ಹಸನಿರುವುದೇ ಹಬ್ಬ,
ಹಸಿದವಗೆ ಅಶನವೀವುದೇ ಹಬ್ಬ ,
ಹುಸಿಯಾಡದೆ ನೇರ ನಡೆವುದೇ ಹಬ್ಬ ,
ಬಿಸಜನಾಭನ ಸತತ ಸ್ಮರಣೆಯೇ ಹಬ್ಬ.
ವಸುಧೆಯೊಳು ಬಿದ್ದವರನೆತ್ತುವುದೇ ಹಬ್ಬ ,
ಮುಸಿ ಮುಸಿ ನಗುತ ನಗಿಸುತಿರುವುದೇ ಹಬ್ಬ ,
ವಿಷಯ ವಾಂಛೆಗಳಿಗೆ ಬಲಿಯಾಗದಿರುವುದೇ ಹಬ್ಬ ,
ಬಂದದುಣ್ಣುತ ಕೃಷ್ಣಾರ್ಪಣವೆನ್ನುವುದೇ ಹಬ್ಬ .
ಬದಲಾಗುತ್ತಲೇ ಇದೆ ಸಂವತ್ಸರ ,
ಎಷ್ಟಿದೆ ನಮ್ಮ ಮಾನಸಿಕ ಎತ್ತರ ?
ಬಾಳಿನ ನಡೆಯಾಗಿರಲಿ ನಿರ್ಮತ್ಸರ ,
ನಿಷ್ಕಪಟ ಬಾಳೇ ಭಗವಂತನಿಗೆ ಕರ .
ಹೊಸ ವರ್ಷದ ನಾಮ ದುರ್ಮುಖಿ ,
ದುರ್ಜನರಿಗೆ ಸದಾ ಅದು ದುರ್ಮುಖಿ ,
ಸಜ್ಜನರಿಗೆ ಎಂದೂ ತಾನು ಸುಮುಖಿ ,
ನಿರ್ಲಿಪ್ತ ಅಂತರ್ಮುಖಿ-ಸದಾ ಸುಖಿ .
ವೇದವ್ಯಾಸನ ನಿತ್ಯ ಸ್ತುತಿಪುದೇ ಹಬ್ಬ ,
ಸಾಧು ಸಜ್ಜನರೊಳು ನಲಿದಾಡುವುದೇ ಹಬ್ಬ,
ಸವಿ ನುಡಿಯುತ ಸಿಹಿ ಹಂಚುವುದೇ ಹಬ್ಬ,
ನೋಯದೇ ನೋಯಿಸದೇ ಬಾಳುವುದೇ ಹಬ್ಬ .
ಮುಖವಾಡಗಳ ಕಿತ್ತೆಸೆವುದೇ ಹಬ್ಬ ,
ನಖಶಿಖಾಂತ ಶುದ್ಧವಾಗಿರುವುದೇ ಹಬ್ಬ,
ಸುಜ್ಞಾನದ ನಿಜ ಹಂಬಲವೇ ಹಬ್ಬ ,
"ವಿಜ್ಞಾನಿ"ಯ ಇರವಿನ ಅರಿವೇ ಹಬ್ಬ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ